ಕೂರಿಗೆ ಬಿತ್ತನೆ ಪದ್ಧತಿಯಿಂದ ನೀರು ಉಳಿಕೆ, ಹೆಚ್ಚು ಇಳುವರಿ
ಕನ್ನಡಪ್ರಭ ವಾರ್ತೆ, ರಾಯಚೂರು, ಡಿ.6
ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಕಡಿಮೆ ನೀರು, ರಸಾಯನಿಕ ಬಳಕೆ ಮಾಡಿ ಉತ್ತಮ ಇಳುವರಿ ಪಡೆಯುವ ನಿಟ್ಟಿನಲ್ಲಿ ಕೂರಿಗೆ ಬತ್ತದ ಬಿತ್ತನೆ ಪದ್ಧತಿ ರೈತರು ಮತ್ತು ಪರಿಸರ ಸಂರಕ್ಷಣೆಗೂ ಪೂರಕವಾಗಿದೆ ಎಂದು ರಾಯಚೂರು ಕೃಷಿ ವಿವಿ ಕುಲಪತಿ ಡಾ. ಬಿ.ವಿ. ಪಾಟೀಲ್ ಸಲಹೆ ನೀಡಿದರು.
ನಗರದ ರಾಯಚೂರು ಕೃಷಿ ವಿಶ್ವವಿದ್ಯಾಲಯ ಪ್ರೇಕ್ಷಾಗೃಹದಲ್ಲಿ ಶುಕ್ರವಾರ ಆಯೋಜಿಸಿದ್ದ ರೈತರ ಸೇವೆಯ ಯೋಜನೆ ಕೂರಿಗೆ ಬತ್ತದ ಬಿತ್ತನೆ ಯಂತ್ರದ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಬತ್ತವನ್ನು ಕೂರಿಗೆ ಬಿತ್ತನೆ ಪದ್ಧತಿ ಅಡಿ ಅಳವಡಿಸಿಕೊಂಡು ಕೃಷಿ ಕೈಗೊಳ್ಳುವುದರಿಂದ ಶೇ.30ರಷ್ಟು ನೀರಿನ ಉಳಿತಾಯವಾಗಲಿದೆ ಎಂದು ಹೇಳಿದರು.
ಅಧಿಕ ಲಾಭ ಪಡೆಯಲು ಸಾಧ್ಯ: ಕೂರಿಗೆ ಬಿತ್ತನೆ ಪದ್ಧತಿ ಅಡಿ ಬತ್ತ ಬೆಳೆದಲ್ಲಿ ಪ್ರತಿ ಎಕರೆಗೆ 5-12 ಸಾವಿರ ವೆಚ್ಚದಲ್ಲಿ ಕಡಿತವಾಗಲಿದೆ. ಇಂಥ ಬೆಳೆಗೆ ರೋಗದ ಬಾಧೆಯೂ ಕಡಿಮೆಯಾಗಲಿದ್ದು, ರೈತರು ಹೆಚ್ಚಿನ ಲಾಭಾಂಶ ಪಡೆಯಲು ಸಾಧ್ಯವಾಗಲಿದೆ ಎಂದು ಹೇಳಿದರು.
ಹೆಚ್ಚಿನ ಪ್ರಮಾಣದಲ್ಲಿ ರಸಾಯನಿಕಗಳ ಬಳಕೆಯಿಂದ ಪರಿಸರದ ಮೇಲಷ್ಟೇ ಅಲ್ಲ, ಮಣ್ಣಿನ ಫಲವತ್ತತೆಗೂ ಧಕ್ಕೆಯಾಗಲಿದ್ದು, ಕೂರಿಗೆ ಬತ್ತದ ಬಿತ್ತನೆಯಿಂದ ಕಡಿಮೆ ರಸಾಯನಿಕಗಳ ಬಳಕೆ ಮತ್ತು ನೀರಿನ ಕಡಿಮೆ ಬಳಕೆಯಿಂದ ಪರಿಸರ ಮತ್ತು ಮಣ್ಣಿನ ಫಲವತ್ತತೆ ಕಾಪಾಡಬಹುದಾಗಿದೆ ಎಂದು ತಿಳಿಸಿದರು.
3 ವರ್ಷಗಳ ಹಿಂದೆಯೇ ಪ್ರಯೋಗ: ಮೂರು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಒಂದು ಎಕರೆ ಪ್ರದೇಶದಲ್ಲಿ ಮಾತ್ರ ಕೂರಿಗೆ ಪದ್ಧತಿಯ ಬತ್ತದ ಬಿತ್ತನೆಯಾಗಿತ್ತು. ಈ ವಿಧಾನದಲ್ಲಿ ಬೆಳೆಯುವ ಮೂಲಕ ಕಡಿಮೆ ಖರ್ಚಿನಲ್ಲಿ ಉತ್ತಮ ಇಳುವರಿ ಪಡೆಯಲಾಗಿತ್ತು. ಆನಂತರ ಇದರ ವಿಧಾನ ರೈತರಿಗೆ ತಿಳಿಸಿದ ಮೇಲೆ ಪ್ರಸ್ತುತ ಜಿಲ್ಲೆಯಲ್ಲಿ 60 ಸಾವಿರ ಎಕರೆ ಪ್ರದೇಶದಲ್ಲಿ ಕೂರಿಗೆ ಯಂತ್ರದ ಮೂಲಕ ಬತ್ತದ ಬಿತ್ತನೆ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ರೈತರು ಕಾಲದಿಂದ ಕಾಲಕ್ಕೆ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಂಡು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭ ಗಳಿಸುವತ್ತ ಗಮನಹರಿಸಬೇಕು. ಪ್ರಸ್ತುತ ದೇಶದಲ್ಲಿ ಒಂದು ಕೆಜಿ ಬತ್ತ ಬೆಳೆಯಲು 4,500 ಲೀಟರ್ ಪ್ರತಿ ಹಂಗಾಮಿಗೆ ನೀರು ಬಳಸಲಾಗುತ್ತಿದ್ದು, ಅದೇ ಪ್ರೋಟಿನ್ಯುಕ್ತ ಕಡಲೆ, ತೊಗರಿ, ಗೋದಿ ಬೆಳೆಯಲು ಕೇವಲ 45ರಿಂದ 50 ಲೀಟರ್ ಬಳಸಲಾಗುತ್ತಿದೆ ಎಂದು ಹೇಳಿದರು.
ಬೇಡಕೆಗೆ ಅನುಗುಣವಾಗಿ ಬೆಳೆಯಿರಿ: ಆಹಾರದ ಬೇಡಿಕೆಗೆ ಅನುಗುಣವಾಗಿ ಬತ್ತವನ್ನು ಬೆಳೆಯುವುದು ರೈತರ ಕಾರ್ಯವಾಗಬೇಕು. ಹೆಚ್ಚಿನ ನೀರು ಬಳಸಿ ಬೆಳೆದ ಬೆಳೆಯನ್ನು ವಿದೇಶಗಳಿಗೆ ರಫ್ತು ಮಾಡುವ ಮೂಲಕ ಕಡಿಮೆ ನೀರು ಬಳಸಿ ಬೆಳೆದ ಇನ್ನಿತರೆ ಬೆಳೆಗಳ ಆಮದಿಗೆ ಮುಂದಾಗುವುದು ಸರಿಯಲ್ಲ. ಈ ನಿಟ್ಟಿನಲ್ಲಿ ರೈತರು ದೇಶದ ಅಗತ್ಯತೆಗೆ ತಕ್ಕಂತೆ ಬೆಳೆ ಪದ್ಧತಿ ಅಳವಡಿಸಿಕೊಂಡು ಕೃಷಿಯಲ್ಲಿ ಲಾಭ ಕಂಡುಕೊಳ್ಳುವ ಪ್ರಯತ್ನ ಮಾಡಬೇಕಿದೆ ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಕೂರಿಗೆ ಬಿತ್ತನೆ ಪದ್ಧತಿ ಅಡಿ ಬತ್ತ ಬೆಳೆದ ರೈತರು ತಮ್ಮ ಅನುಭವ ಹಂಚಿಕೊಂಡರು. ವಲಯ ವ್ಯವಸ್ಥಾಪಕ ಡಾ.ಎಚ್.ವಿ.ಚಂದ್ರಶೇಖರ, ವಿಸ್ತರಣಾ ನಿರ್ದೇಶಕ ಡಾ. ಕೆ.ಪಿ. ವಿಶ್ವನಾಥ, ರಾಷ್ಟ್ರೀಯ ತೋಟಗಾರಿಕೆ ಮಂಡಳಿ ನಿರ್ದೇಶಕ ಡಾ. ಜಿ.ಗುರುಸಿದ್ದಯ್ಯ, ಪಿಐ ಕಂಪನಿ ಮುಖ್ಯಸ್ಥ ಆರ್.ಡಿ. ಕಪೂರ್, ಉಪನ್ಯಾಸಕ ಬಿ.ಕೆ. ದೇಸಾಯಿ, ವೇಣುಗೋಪಾಲ, ಡಾ. ರುದ್ರೇಶ, ದಿನಕರ ಸೇರಿ ಅನೇಕರಿದ್ದರು. ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ರೈತರು ಹಾಗೂ ಕೃಷಿ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.