ಬಾಬ್ರಿ ಮಸೀದಿ ಪುನರ್ ನಿರ್ಮಿಸಿ
ರಾಯಚೂರು: ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯ ಪುನಾ ನಿರ್ಮಾಣಕ್ಕೆ ಆಗ್ರಹಿಸಿ ಹಾಗೂ ಕೋಮು ಭಾವನೆ ಕೆರಳಿಸುವ ಗೀತೆಗಳ ನಿಷೇಧಕ್ಕೆ ಒತ್ತಾಯಿಸಿ ಆಲ್ ಇಂಡಿಯಾ ಮಜಲೀಸ್ ಎ ಇತ್ತೆಹಾದುಲ್ ಮುಸ್ಲಮೀನ್ ಸಂಘಟನೆಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಕರಾಳ ದಿನಾಚರಣೆಯ ಅಂಗವಾಗಿ ಮೆರವಣಿಗೆ ನಡೆಸಿದ ನೂರಾರು ಕಾರ್ಯಕರ್ತರು, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ, ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಈ ಹಿಂದೆ ಕರಸೇವಕರು ಧ್ವಂಸಗೊಳಿಸಿರುವುದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರೋಧಿ ಕೃತ್ಯವಾಗಿದೆ. ಕಳೆದ ಅನೇಕ ಶತಮಾನಗಳಿಂದ ಇದ್ದಂತ ಬಾಬ್ರಿ ಮಸೀದಿಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದು, ಕೂಡಲೇ ಕೇಂದ್ರ ಸರ್ಕಾರ ಅದೇ ಸ್ಥಳದಲ್ಲಿ ಬಾಬ್ರಿ ಮಸೀದಿ ಪುನಾ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈವರೆಗೂ ಕ್ರಮ ಕೈಗೊಂಡಿಲ್ಲ: 1992ರ ಡಿ. 6ರಂದು ಸುಪ್ರೀಂಕೋರ್ಟಿನ ಆದೇಶದ ಹೊರತಾಗಿಯೂ ಬಾಬ್ರಿ ಮಸೀದಿಯ ಸಂರಕ್ಷಣೆ ಮಾಡುವಲ್ಲಿ ಅಲ್ಲಿನ ಸರ್ಕಾರ ವಿಫಲವಾಗಿತ್ತು. ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಕುರಿತು ಲಿಬರ್ಹಾನ್ ಆಯೋಗವು 1999ರಲ್ಲಿಯೇ ತನ್ನ ವರದಿ ಸಲ್ಲಿಸಿದ್ದು, ವರದಿಯಲ್ಲಿ ಎಲ್.ಕೆ. ಆಡ್ವಾಣಿ, ಮುರಳಿ ಮನೋಹರ ಜೋಷಿ, ಕಲ್ಯಾಣಸಿಂಗ್ ಮತ್ತಿತರರನ್ನು ಈ ಕೃತ್ಯದಲ್ಲಿ ಶಾಮೀಲಾಗಿರುವ ಬಗ್ಗೆ ಹೆಸರಿಸಲಾಗಿದೆ. ಆದರೆ ವರದಿಯ ಶಿಫಾರಸು ಜಾರಿಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಕಾರ್ಯ ಮಾತ್ರ ನಡೆದಿಲ್ಲ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಾಚೀನ ಇತಿಹಾಸದಿಂದ ಬಾಬ್ರಿ ಮಸೀದಿ ಹೊರತುಪಡಿಸಿ ಸದ್ಯದ ವಿವಾದಿತ ಸ್ಥಳದಲ್ಲಿ ಬೇರಾವುದೇ ಕಟ್ಟಡಗಳಿರಲಿಲ್ಲ ಎಂದಿದೆ. ಆದರೆ ಬಾಬ್ರಿ ಮಸೀದಿಯ ಕಟ್ಟಡವನ್ನು ಧ್ವಂಸಗೊಳಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದಲ್ಲಿನ ಕೋಮು ಸೌಹಾರ್ದತೆ, ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡುವಂಥ ಕಾರ್ಯ ಮಾಡಲಾಗಿದೆ ಎಂದು ಟೀಕಿಸಿದರು.
ಮೊದಲಿದ್ದ ಸ್ಥಳದಲ್ಲೇ ಮಸೀದಿ ನಿರ್ಮಿಸಿ: ದೇಶದಲ್ಲಿ ಕೋಮು ಸೌಹಾರ್ದತೆ ಪುನಾ ಸ್ಥಾಪನೆಗೆ ಪೂರಕ ಕ್ರಮ ಕೈಗೊಳ್ಳುವ ಭಾಗವಾಗಿ ಕೇಂದ್ರ ಸರ್ಕಾರ ಬಾಬ್ರಿ ಮಸೀದಿಯನ್ನು ಪುನಾ ಅದು ಈ ಮೊದಲಿದ್ದಂಥ ಸ್ಥಳದಲ್ಲಿಯೇ ಪುನಾ ನಿರ್ಮಾಣ ಮಾಡಬೇಕು. ಅಲ್ಪಸಂಖ್ಯಾತರ ಮೇಲಾಗುತ್ತಿರುವ ಶೋಷಣೆ ತಡೆಗೆ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ದೇಶದ ಗುಜರಾತ್ ಮತ್ತು ಮುಜಫರಾಬಾದ್‌ನಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದ ದೌರ್ಜನ್ಯದ ಪ್ರಕರಣಗಳು ಹಾಗೂ ಗಲಭೆಗಳು ನೂರಾರು ಜನ ಮುಸ್ಲಿಮರ ಸಾವಿಗೆ ಕಾರಣವಾಗಿದ್ದು, ಕೇಂದ್ರ ಮತ್ತು ಆಯಾ ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿವೆ. ಅಷ್ಟೇ ಅಲ್ಲ ಇಂಥ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿರುವುದರಿಂದ ದೇಶದ ನಿವಾಸಿಗಳಿಗೆ ಅಭದ್ರತೆಯ ವಾತಾವರಣ ನಿರ್ಮಾಣ ಮಾಡಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಕೋಮುಸೌಹಾರ್ದಕ್ಕೆ ಧಕ್ಕೆ: ಅದೇ ರೀತಿ ದೇಶದಲ್ಲಿ ಇತ್ತೀಚೆಗೆ ಕೋಮು ಭಾವನೆ ಕೆರಳಿಸುವಂಥ ಹಾಡುಗಳ ರಚನೆ ಮತ್ತು ಪ್ರಸಾರ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಬನಾಯೆಂಗೇ ಮಂದಿರ್ ಎಂಬ ಗೀತೆ ರಚಿಸಿ ವಿವಿಧ ಸಂದರ್ಭಗಳಲ್ಲಿ ಧ್ವನಿವರ್ಧಕಗಳಲ್ಲಿ ಪ್ರಸಾರ ಮಾಡುತ್ತಿರುವುದು ಜಾತ್ಯತೀತತೆ ಮತ್ತು ಕೋಮು ಸೌಹಾರ್ದಕ್ಕೆ ಧಕ್ಕೆಯುಂಟು ಮಾಡುವ ಕೃತ್ಯವಾಗಿದೆ. ಇಂಥ ಹಾಡುಗಳನ್ನು ನಿಷೇಧಿಸುವಂತೆ ಕಾರ್ಯಕರ್ತರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಮೊಹ್ಮದ್ ಶಾಹೀನ್ ರಜಾ ಹಾಗೂ ಕಾರ್ಯದರ್ಶಿ ಮೊಹ್ಮದ್ ಅಲಿ ಖಾನ್ ಸೇರಿ ಅನೇಕರಿದ್ದರು.