ಶೋಷಿತ ವರ್ಗ ಶಿಕ್ಷಣ ಪ್ರಗತಿ ಸಾಧಿಸಲಿ
ಕ.ಪ್ರ.ವಾರ್ತೆ, ರಾಯಚೂರು, ಡಿ.6
ಶಿಕ್ಷಣದಿಂದ ಮಾತ್ರ ಜಾಗೃತಿ ಮೂಡಲು ಸಾಧ್ಯ. ಶೈಕ್ಷಣಿಕ ಪ್ರಗತಿಯ ಮೂಲಕ ದಲಿತರು ಹಾಗೂ ಶೋಷಿತ ವರ್ಗವು ಸಮಾಜದಲ್ಲಿ ಪ್ರಗತಿ ಸಾಧಿಸುವಂತೆ ಜೆಡಿಎಸ್ ಜಿಲ್ಲಾ ವಕ್ತಾರ ಹಾಗೂ ದಲಿತ ಮುಖಂಡ ವಿರೂಪಾಕ್ಷಿ ಸಲಹೆ ನೀಡಿದರು.
ನಗರದಲ್ಲಿ ಶುಕ್ರವಾರ ಪಂ. ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹೈದರಾಬಾದ್ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಿದ್ದ ಡಾ.ಅಂಬೇಡ್ಕರ್ ಅವರ 57ನೇ ಮಹಾಪರಿನಿರ್ವಾಣ ದಿನಾಚರಣೆ ಹಾಗೂ ಜಿಲ್ಲೆಯ ದಲಿತ ಚಳವಳಿಯಲ್ಲಿ ದುಡಿದು ಮಡಿದವರ ಸ್ಮರಣೆ- ಚಿಂತನೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಲಿತ ಸಂಘರ್ಷ ಸಮಿತಿ 1970ರ ನಂತರದಲ್ಲಿ ಬಡತನ, ಜಾತಿ, ಶೋಷಣೆ, ವರ್ಣ, ಸಮಾಜದ ತಾರತಮ್ಯ ನೀತಿ ವಿರುದ್ಧ ಹೋರಾಟ ಆರಂಭಿಸುವ ಮೂಲಕ ದಲಿತರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದೆ. ಪರಿಣಾಮ ದಲಿತರಿಗೆ ಇಂದಿನ ದಿನಮಾನದಲ್ಲಿ ಅಲ್ಪಸ್ವಲ್ಪ ಅವಕಾಶ ಹಾಗೂ ಸೌಲಭ್ಯಗಳು ಸರ್ಕಾರದಿಂದ ದೊರೆಯುತ್ತಿವೆ ಎಂದು ಹೇಳಿದರು.
ದಲಿತ ಶಕ್ತಿ ಒಗ್ಗೂಡುವಂತಾಗಲು ದಲಿತ ಮುಖಂಡರು ಜಾತಿ ವಿನಾಶಕ ಚಳವಳಿ ಕಟ್ಟಿದ ನಾಯಕರ ಹೋರಾಟದ ಹಾದಿ ಅನುಸರಿಸಬೇಕು. ಜಿಲ್ಲೆಯಲ್ಲಿ ಸಂಘರ್ಷ ಸಮಿತಿ ಹೋರಾಟದ ಮೂಲಕ ಹಲವು ಜನರಿಗೆ ನ್ಯಾಯ ದೊರೆಕಿಸಿದೆ. ಆದರೆ, ಇಂದಿಗೂ ದಲಿತರಿಗೆ ಸಮಾಜದಲ್ಲಿ ಸೂಕ್ತ ರೀತಿಯ ಸ್ಪಂದನೆ ದೊರೆಯದಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ವಿಷಾದಿಸಿದರು.
ಉಪನ್ಯಾಸಕ ಜೆ.ಎಲ್. ಈರಣ್ಣ ಮಾತನಾಡಿ, ದಲಿತರ ಏಳಿಗೆಗೆ ದುಡಿದು ಮಡಿದವರನ್ನು ಸ್ಮರಿಸಿಕೊಳ್ಳುವ ಇಂತಹ ಕಾರ್ಯಕ್ರಮ ಶ್ಲಾಘನೀಯ. ಅಂಬೇಡ್ಕರ್ ಅವರು ಹೇಳಿದಂತೆ ಅಜ್ಞಾನವೇ ದಲಿತರ ದೊಡ್ಡ ಶತ್ರುವಾಗಿದೆ. ಸಮಾಜದಲ್ಲಿ ಸಮಾನತೆ ಕಾಣಲು ಪ್ರತಿಯೊಬ್ಬರು ಶಿಕ್ಷಣ ಪಡೆಯುವ ಮೂಲಕ ಸುಶಿಕ್ಷಿತರಾಗುವುದು ಅವಶ್ಯಕ ಎಂದರು.
ದಲಿತ ಸಾಹಿತಿ ಅಮರೇಶ ಬಲ್ಲಿದವ್ ಮಾತನಾಡಿ, ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ದಲಿತರ ಏಳಿಗೆಗಾಗಿ ದುಡಿದು ಮಡಿದವರ ಕುಟುಂಬದ ಸದಸ್ಯರಿಗೆ ಸನ್ಮಾನಿಸಿ ಗೌರವಿಸ ಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎ.ವಸಂತಕುಮಾರ, ಜಿಪಂ ಅಧ್ಯಕ್ಷೆ ಲಲಿತಮ್ಮ, ಉಪಾಧ್ಯಕ್ಷ ಕೆ.ಶರಣಪ್ಪ, ನಗರಸಭೆ ಅಧ್ಯಕ್ಷೆ ಮಹಾದೇವಮ್ಮ, ಉಪಾಧ್ಯಕ್ಷೆ ಪದ್ಮಾ, ನರಸಪ್ಪ ಯಕ್ಲಾಸಪೂರು, ಶಾಂತಪ್ಪ ಇತರರು ಇದ್ದರು.
ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಹಾಗೂ ಜನತೆ ಪಾಲ್ಗೊಂಡಿದ್ದರು.
ಹಾಲು ಹಣ್ಣು ವಿತರಣೆ
ಲಿಂಗಸ್ಗೂರು: ಡಾ.ಬಿ.ಆರ್. ಅಂಬೇಡ್ಕರ್ ಅವರ 57ನೇ ಮಹಾ ಪರಿನಿರ್ವಾಣ ದಿನಾಚರಣೆ ಅಂಗವಾಗಿ ತಾಲೂಕು ಆಡಳಿತದಿಂದ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಾಲು- ಹಣ್ಣು ವಿತರಿಸಲಾಯಿತು.
ಸಹಾಯಕ ಆಯುಕ್ತ ಟಿ.ಯೋಗೇಶ್, ಪುರಸಭೆ ಅಧ್ಯಕ್ಷ ಕುಮಾರಸ್ವಾಮಿ ಸಾಲ್ಮನಿ, ತಾಪಂ ಅಧ್ಯಕ್ಷೆ ಬಸಮ್ಮ ಪರಮೇಶ್ ಯಾದವ್, ಜಿಪಂ ಸದಸ್ಯರಾದ ಭೂಪನಗೌಡ ಕರಡಕಲ್, ಎಚ್.ಬಿ. ಮುರಾರಿ, ಜಿಪಂ ಮಾಜಿ ಅಧ್ಯಕ್ಷ ಗುಂಡಪ್ಪ ನಾಯಕ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಲ್.ಬಿ. ಸಜ್ಜನ್, ಸಹಾಯಕ ಕೃಷಿ ನಿರ್ದೇಶಕಿ ಸರಸ್ವತಿ, ವೈದ್ಯಾಧಿಕಾರಿ ಡಾ. ಶಿವಬಸಪ್ಪ ಸೇರಿದಂತೆ ಇದ್ದರು.