ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಗುಳಂ: ಆರೋಪ
ಸಿಂಧನೂರು: ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಸರ್ಕಾರದ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಗುಳುಂ ಮಾಡಿದ್ದಾರೆಂದು ಅಖಿಲ ಕರ್ನಾಟಕ ಡಾ. ಅಂಬೇಡ್ಕರ್ ಮಹಾಸಭಾ ಅಲ್ಪಸಂಖ್ಯಾತ ಹಿಂದುಳಿದ ದಲಿತ ರಾಜ್ಯ ಸಮಿತಿಯ ಜಿಲ್ಲಾಧ್ಯಕ್ಷ ಗುರುರಾಜ್ ಮುಕ್ಕುಂದಾ ಆರೋಪಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ತಾಲೂಕಿನ ಸಾಲಗುಂದಾ ಹೋಬಳಿ ವ್ಯಾಪ್ತಿಯ ಚಿಂಚೇರಿ ಗ್ರಾಮದ ಸರ್ವೆ ನಂ.21ರ ಜಮೀನು ಕರ್ನಾಟಕ ಸರ್ಕಾರದ್ದು ಎಂದು ಪಹಣಿಯಲ್ಲಿ ಇತ್ತು. ಇದನ್ನು 2007- 08ನೇ ಸಾಲಿನಲ್ಲಿ ತೆಗೆದು ಹಾಕಿ ನಾಗನಗೌಡ ತಂದೆ ವೀರಭದ್ರಗೌಡ ಇವರ ಹೆಸರಿಗೆ 14.20 ಗುಂಟೆ ಜಮೀನು ಮಾಡಿಸಲಾಗಿದೆ. ಸರ್ಕಾರದ ಜಮೀನು ಹೇಗೆ ಖಾಸಗಿ ವ್ಯಕ್ತಿಗೆ ಸೇರಿತು ಎಂದು ಅವರು ಪ್ರಶ್ನಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರರಿಗೆ ಜಮೀನಿನ ವರ್ಗಾವಣೆ ಮತ್ತು ಇತರೆ ದಾಖಲಾತಿಗಳನ್ನು ಪೂರೈಸಲು ಸಮಿತಿಯಿಂದ ಪತ್ರ ಬರೆದು ಒತ್ತಾಯಿಸಿದ್ದು, ಅಧಿಕಾರಿಗಳು ಈ ಸಂಬಂಧ ಯಾವುದೇ ದಾಖಲಾತಿ ಲಭ್ಯವಿಲ್ಲವೆಂದು ಹಿಂಬರೆಹ ನೀಡಿದ್ದು, ಇದರ ಹಿಂದೆ ಅಧಿಕಾರಿಗಳು ಶಾಮೀಲಾಗಿರುವುದು ತಮಗೆ ಸ್ಪಷ್ಟವಾಗಿದೆ. ಈ ಬಗ್ಗೆ ಮೇಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಗುರುರಾಜ ಮುಕ್ಕುಂದಾ ಆಗ್ರಹಿಸಿದ್ದಾರೆ.