ತಳಿಗಳ, ರೈತರ ಹಕ್ಕು ರಕ್ಷಣೆಯಿಂದ ಆಹಾರ ಭದ್ರತೆ: ಡಾ. ಹಂಚಿನಾಳ್
ರಾಯಚೂರು: ದೇಶಕ್ಕೆ ಆಹಾರ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಆಹಾರ ಉತ್ಪಾದನೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳುವ ಸವಾಲು ಕೃಷಿ ಕ್ಷೇತ್ರದ ಮುಂದಿದ್ದು, ಅದೇ ವೇಳೆ ವಿವಿಧ ಸಸ್ಯತಳಿಗಳ ಹಾಗೂ ರೈತರ ಹಕ್ಕುಗಳ ಸಂರಕ್ಷಣೆಗೂ ಚಿಂತಿಸುವುದು ಅನಿವಾರ್ಯವಾಗಿದೆ ಎಂದು ನವದೆಹಲಿಯ ಸಸ್ಯ ತಳಿಗಳ ಹಾಗೂ ರೈತರ ಹಕ್ಕುಗಳ ರಕ್ಷಣಾ ಪ್ರಾಧಿಕಾರದ ಅಧ್ಯಕ್ಷ ಡಾ. ಆರ್.ಆರ್. ಹಂಚಿನಾಳ್ ಹೇಳಿದರು.
ನಗರದ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಶನಿವಾರ ಆಯೋಜಿಸಿದ್ದ ಸಸ್ಯ ತಳಿಗಳ ಹಾಗೂ ರೈತರ ಹಕ್ಕುಗಳ ರಕ್ಷಣಾ ಕಾಯಿದೆ ಕುರಿತ ತಿಳಿವಳಿಕೆ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಹುಮಾನ: ಕೃಷಿ ಕ್ಷೇತ್ರದಲ್ಲಿ ದೇಶಿ ತಳಿಗಳ ರಕ್ಷಣೆ, ಸಂಶೋಧನೆ ಮತ್ತು ಪ್ರಚಾರದ ಕೆಲಸಗಳನ್ನು ಮಾಡುತ್ತಿರುವ ರೈತರನ್ನು ಗುರುತಿಸುವುದು ಅವರಿಗೆ 10 ಲಕ್ಷ ಬಹುಮಾನ ನೀಡುವ ಕಾರ್ಯ ಪ್ರಾಧಿಕಾರ ಮಾಡುತ್ತಿದೆ. ಸಸ್ಯ ತಳಿ ಹಾಗೂ ರೈತರ ಹಕ್ಕುಗಳನ್ನು ಉಳಿಸಿ ಬೆಳೆಸುವವರಿಗೆ ಸಹ ಸೂಕ್ತ ಸ್ಥಾನಮಾನ ನೀಡುವ ಪರಿಪಾಠವನ್ನು ಸರ್ಕಾರ ಈ ಪ್ರಾಧಿಕಾರದ ಮೂಲಕ ಕೈಗೊಂಡಿದೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿ ಕೃಷಿ ವಿವಿ ಕುಲಪತಿ ಡಾ.ಬಿ.ವಿ ಪಾಟೀಲ್ ಮಾತನಾಡಿದರು. ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ. ಕೆ.ಪಿ. ವಿಶ್ವನಾಥ, ಕೃಷಿ ವಿವಿ ಎಂಜಿನಿಯರಿಂಗ್ ವಿಭಾಗದ ಡೀನ್ ಡಾ. ಬಿ.ಪಿ. ಬಾಲಕೃಷ್ಣನ್, ಬೀಜ ಘಟಕದ ಮುಖ್ಯಸ್ಥ ಡಾ. ಬಸವೇಗೌಡ, ಡಾ. ನಾಗನಗೌಡ, ಡಾ. ಬಿ.ಎಂ. ಚಿತ್ತಾಪುರ ಉಪಸ್ಥಿತರಿದ್ದರು. ಕೃಷಿ ವಿವಿಯ ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳು ಹಾಗೂ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ರೈತರು ಕಾರ್ಯಾಗಾರದಲ್ಲಿದ್ದರು.