ಶೌಚಾಲಯ ಹಣ ದುರ್ಬಳಕೆ; ಆರೋಪ
ಸಿಂಧನೂರು: ನಿರ್ಮಲ ಭಾರತ ಅಭಿಯಾನ ಯೋಜನೆಯಡಿ ವೈಯಕ್ತಿಕ ಶೌಚಾಲಯ ನಿರ್ಮಾಣದಲ್ಲಿ ಈ ಹಿಂದೆ ಬಿ.ತಿಕ್ಕಯ್ಯ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಂದಿನ ಕಾರ್ಯದರ್ಶಿ ಅಮರಪ್ಪ ಅಂಗಡಿ ಅವರೊಂದಿಗೆ ಶಾಮೀಲಾಗಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಗ್ರಾಮದ ಶೇಖರಗೌಡ ಮಾಲಿ ಪಾಟೀಲ್ ಆರೋಪಿಸಿದ್ದಾರೆ.
ಈ ಕುರಿತು ಶುಕ್ರವಾರ ಹೇಳಿಕೆ ನೀಡಿರುವ ಅವರು, ಫಲಾನುಭವಿ ಎಂ.ಸುರೇಶ ಎನ್ನುವವರ ಹೆಸರಿನಲ್ಲಿ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಶೌಚಾಲಯ ನಿರ್ಮಿಸದೇ ಅನಧಿಕೃತವಾಗಿ 30 ಸಾವಿರ ಮೊತ್ತದ ಚೆಕ್ ನೀಡುವ ಮೂಲಕ ಭ್ರಷ್ಟಾಚಾರ ಎಸಗಿದ್ದಾರೆ. ಈ ಸಂಬಂಧ ತಾಪಂ, ಜಿಪಂ ಅಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದರೂ ಸ್ಪಂದನೆ ದೊರೆತಿಲ್ಲ. ವಾರದೊಳಗೆ ಸೂಕ್ತ ಕ್ರಮಕ್ಕೆ ಮುಂದಾಗದಿದ್ದಲ್ಲಿ ಕೋರ್ಟ್ ಮೆಟ್ಟಿಲೇರುವುದಾಗಿ ಎಚ್ಚರಿಸಿದ್ದಾರೆ.
ಸವಾಲು ಸ್ವೀಕಾರ: ತಾವು ಬೇನಾಮಿ ಆಸ್ತಿ ಹೊಂದಿರುವುದಾಗಿ ಮಾಜಿ ಅಧ್ಯಕ್ಷ ಬಿ.ತಿಕ್ಕಯ್ಯ ಮಾಡಿರುವ ಆರೋಪದಲ್ಲಿ ಸತ್ಯಾಂಶವಿಲ್ಲ. ಈ ಸವಾಲನ್ನು ತಾವು ಸ್ವೀಕರಿಸಿದ್ದು, ತಮ್ಮ ಪರವಾಗಿರುವ ಸೂಕ್ತ ದಾಖಲೆಗಳನ್ನು ಬಹಿರಂಗ ಪಡಿಸುವುದಾಗಿ ತಿಳಿಸಿದ್ದಾರೆ.