ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮೌಢ್ಯಕ್ಕೆ ಮೂಗುದಾರ ಹಾಕಿ

Rashmi Kasaragodu
Updated On : 9 Dec 2013, 11:11 am

ಕ.ಪ್ರ. ವಾರ್ತೆ    ರಾಯಚೂರು    ಡಿ.8
ರಾಜ್ಯದ ಉಡುಪಿಯಲ್ಲಿ ಪಂಕ್ತಿಭೇದ ಹಾಗೂ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಡೆಮಡೆ ಸ್ನಾನದಂಥ ಅನಿಷ್ಟ ಆಚರಣೆಗಳನ್ನು ವಿರೋಧಿಸಿ ನಗರದಲ್ಲಿ ಭಾನುವಾರ ಸಿಪಿಎಂ ಜಿಲ್ಲಾ ಸಮಿತಿಯ ಕಾರ್ಯಕರ್ತರು ಧರಣಿ ನಡೆಸಿದರು.
ನಗರದ ಅಂಬೇಡ್ಕರ್ ವತ್ತದಲ್ಲಿ ಪ್ರತಿಭಟನಾ ಧರಣಿ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ, ರಾಜ್ಯದಲ್ಲಿ ಅನಿಷ್ಟ ಆಚರಣೆಗಳಿಗೆ ಕಡಿವಾಣ ಹಾಕುವ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕಿದೆ ಎಂದು ಒತ್ತಾಯಿಸಿದರು.
ಇಂದಿಗೂ ಅಸ್ಪೃಶ್ಯತೆ ಆಚರಣೆ: ರಾಜ್ಯದ ವಿವಿಧ ದೇವಾಲಯಗಳಲ್ಲಿ ಈಗಲೂ ಪಂಕ್ತಿಭೇದ ಆಚರಿಸಲಾಗುತ್ತಿದೆ. ಉಡುಪಿಯಲ್ಲಿ ಪಂಕ್ತಿಭೇದದ ಆಚರಣೆಯ ಮೂಲಕ ಅಸ್ಪೃಶ್ಯತೆ ಆಚರಿಸುತ್ತಿದ್ದು ಅದಕ್ಕೆ ಕಡಿವಾಣ ಹಾಕುವ ಕಾರ್ಯ ನಡೆದಿಲ್ಲ. ನಾಗರಿಕ ಸಮಾಜ ತಲೆತಗ್ಗಿಸುವಂಥ ರೀತಿಯಲ್ಲಿ ಅಸ್ಪೃಶ್ಯತೆಯ ಆಚರಣೆ ನಡೆಯುತ್ತಿದೆ ಎಂದು ಟೀಕಿಸಿದರು.
ಕರ್ನಾಟಕದಲ್ಲಿ ಬಂದು ಹೋದ ಎಲ್ಲ ಮಹನೀಯರು ಮಾನವರೆಲ್ಲರೂ ಸಮಾನರು ಎಂಬ ಸಂದೇಶ ನೀಡಿದ್ದಾರೆ. ಆದರೆ ಪರಿಪಾಲನೆ ಮಾತ್ರ ನಡೆಯುತ್ತಿಲ್ಲ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಆಡಳಿತ ಮಡೆಮಡ ಸ್ನಾನ ತಡೆಯುವಲ್ಲಿ ವಿಫಲವಾಗಿದೆ ಎಂದುಆರೋಪಿಸಿದರು.
ವೈಜ್ಞಾನಿಕ ಆಧಾರಗಳಿಲ್ಲ: ಬ್ರಾಹ್ಮಣರ ಉಂಡ ಎಲೆ ಮೇಲೆ ಹೊರಳಾಡುವ ಮಡೆ ಮಡಸ್ನಾನದಂಥ ಅನಿಷ್ಟ ಪದ್ಧತಿಯ ಆಚರಣೆಯು ಅಮಾನವೀಯ ಹಾಗೂ ಅನಾಗರಿಕ ಪದ್ಧತಿಯಾಗಿದೆ ಎಂದು ದೂರಿದ ಹೋರಾಟಗಾರರು, ಬ್ರಾಹ್ಮಣರು ಉಂಡು ಬಿಟ್ಟ ಎಲೆಗಳ ಮೇಲೆ ಹೊರಳಾಡಿದರೆ ಚರ್ಮರೋಗಗಳು ಗುಣವಾಗಿರುವುದು ಎಲ್ಲಿಯೂ ಸಾಬೀತಾಗಿಲ್ಲ. ಆಚರಣೆಯಿಂದ ರೋಗ ಸುಧಾರಿಸುತ್ತ ಎಂಬುದಕ್ಕೆ ವೈಜ್ಞಾನಿಕ ಆಧಾರಗಳಿಲ್ಲ ಎಂದು ತಿಳಿಸಿದರು.
ಹಿಂದಿನಿಂದಲೂ ಬಂದಿರುವ ನಂಬಿಕೆಯೆಂಬ ಹೆಸರಿನಲ್ಲಿ ಪ್ರತಿ ವರ್ಷ ಮಡೆಮಡೆ ಸ್ನಾನದ ಆಚರಣೆ ಎಗ್ಗಿಲ್ಲದೇ ಸಾಗಿದೆ. ಇದೊಂದು ಅನಾಗರಿಕತೆಯ ಲಕ್ಷಣವಾಗಿದೆ. ಇಂಥ ಯಾವುದೇ ಅನಿಷ್ಟ ಆಚರಣೆಗಳನ್ನು ಸಿಪಿಎಂ ಪಕ್ಷ ಖಂಡಿಸುತ್ತದೆ ಎಂದು ಟೀಕಿಸಿದರು.
ಕಾನೂನು ಜಾರಿಗೆ ತನ್ನಿ: ಸತಿಸಹಗಮನ, ಬೆತ್ತಲೆ ಸೇವೆ, ದೇವದಾಸಿ ಬಿಡುವುದು, ನರಬಲಿ ಕೊಡುವುದು ಸೇರಿ ಅದೆಷ್ಟೋ ಅನಿಷ್ಟ ಆಚರಣೆಗಳಿಗೆ ವಿವಿಧ ಹಂತದಲ್ಲಿ ಕಾನೂನು ಜಾರಿ ಮೂಲಕ ನಿಯಂತ್ರಣ ಹೇರಲು ಸಾಧ್ಯವಾಗಿದೆ. ಅದೇ ಮಾದರಿಯಲ್ಲಿ ಪಂಕ್ತಿಭೇದ ಹಾಗೂ ಮಡೆಮಡ ಸ್ನಾನಕ್ಕೂ ಕಾನೂನು ಜಾರಿ ಮೂಲಕ ನಿಯಂತ್ರಿಸುವ ಅವಶ್ಯಕತೆಯಿದೆ ಎಂದು ಎಚ್ಚರಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಉದ್ದೇಶಿತ ಮೂಢನಂಬಿಕೆ ಪ್ರತಿಬಂಧಕ ಶಾಸನ ಜಾರಿಗೆ ತರಲು ಯೋಚಿಸಿರುವುದು ಸ್ವಾಗತಾರ್ಹ. ಸಮಾಜದಲ್ಲಿರುವ ಎಲ್ಲ ಜಾತಿ ಜನಾಂಗದವರು ಸಮಾನರು ಎಂಬ ಶರಣರ ತತ್ವಗಳು ಜಾರಿಯಾಗಬೇಕು. ಅದಕ್ಕೆ ರಾಜ್ಯದಲ್ಲಿ ಕಠಿಣ ಕಾನೂನಿನ ಜಾರಿ ಅವಶ್ಯ. ಈ ಹಿನ್ನೆಲೆಯಲ್ಲಿ ಕೂಡಲೇ ರಾಜ್ಯ ಸರ್ಕಾರ ಮೂಢನಂಬಿಕೆ ಪ್ರತಿಬಂಧಕ ಕಾಯಿದೆ ಜಾರಿಗೆ ತಂದು ಅನಿಷ್ಟ ಆಚರಣೆಗಳಿಗೆ ಕಡಿವಾಣ ಹಾಕುವತ್ತ ಬಿಗಿ ಕ್ರಮ ಕೈಗೊಳ್ಳುವಂತೆ ಹೋರಾಟಗಾರರು ಒತ್ತಾಯಿಸಿದರು.
ಪ್ರತಿಭಟನಾ ಧರಣಿಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಲ್ಲಯ್ಯ ಜಾಲಹಳ್ಳಿ, ತಾಲೂಕು ಕಾರ್ಯದರ್ಶಿ ಕೆ.ಜಿ. ವೀರೇಶ್, ಎಚ್. ಪದ್ಮಾ, ರಂಗಪ್ಪ ಯಾಪಲದಿನ್ನಿ, ವೆಂಕಟೇಶ, ಶಾಂತಕುಮಾರ್, ಸರೋಜಾ, ಶ್ಯಾಮಸುಂದರ್, ಶ್ರೀಧರ್, ಎಂ.ಶರಣಗೌಡ ಸೇರಿ ಅನೇಕರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement