16ರಂದು ನಗರಸಭೆ ಮುತ್ತಿಗೆ
ಕ.ಪ್ರ. ವಾರ್ತೆ, ರಾಯಚೂರು, ಡಿ.9
ನಗರಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಕೆ ನಿಟ್ಟಿನಲ್ಲಿ ನಗರಸಭೆಯಿಂದ ಜಾರಿಗೆ ತರಲುದ್ದೇಶಿಸಿದ್ದ ಎಕ್ಸ್‌ಪ್ರೆಸ್ ವಿದ್ಯುತ್ ಲೈನ್ ಅಳವಡಿಕೆಯಲ್ಲಿನ ಅಕ್ರಮ, ಶೇ. 22.75ರ ಅನುದಾನದ ದುರ್ಬಳಕೆ ಸೇರಿ ವಿವಿಧ ಅಕ್ರಮಗಳಿಗೆ ಸಂಬಂಧಿಸಿ ಜಿಲ್ಲಾಧಿಕಾರಿಗಳು ಪ್ರಕರಣ ದಾಖಲಿಸಲು ತೋರುತ್ತಿರುವ ನಿರ್ಲಕ್ಷ್ಯ ಖಂಡಿಸಿ ಡಿ.16ರಂದು ನಗರಸಭೆಗೆ ಮುತ್ತಿಗೆ ಹಾಕುವುದಾಗಿ ಹೈ.ಕ. ವಿಮೋಚನಾ ವೇದಿಕೆಯ ಮುಖಂಡ ಅಂಬಣ್ಣ ಅರೋಲಿಕರ್ ಎಚ್ಚರಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ನಗರಸಭೆಯಿಂದ ಎಕ್ಸ್‌ಪ್ರೆಸ್ ವಿದ್ಯುತ್ ಮಾರ್ಗ ಅಳವಡಿಕೆಗೆ ಕಾಮಗಾರಿ ಪಡೆದಿದ್ದ ಖಾಸಗಿ ಕಂಪನಿಯು ಕೇವಲ 10,75,797.92 ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದರೂ ಆ ಕಂಪನಿಗೆ ನಗರಸಭೆಯ ಅಧಿಕಾರಿಗಳು ಕಾಮಗಾರಿಗೆ ನಿಗದಿಯಾಗಿದ್ದ 64,37,933 ಪಾವತಿಸುವ ಮೂಲಕ ಅಕ್ರಮ ಎಸಗಿದ್ದಾರೆಂದು ಆರೋಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಅವರ ಸೂಚನೆ ಮೇರೆಗೆ ಈಚೆಗೆ ಸಹಾಯಕ ಆಯುಕ್ತೆ ಮಂಜುಶ್ರೀ ಅವರು ನಡೆಸಿದ ತನಿಖೆಯಲ್ಲಿ ಅಕ್ರಮ ಬಯಲಿಗೆ ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ನಗರಸಭೆಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅಕ್ರಮ ನಡೆದ ಅವಧಿಯಲ್ಲಿ ನಗರಸಭೆಯ ಪ್ರಭಾರಿ ಪೌರಾಯುಕ್ತರಾಗಿದ್ದ ಎಂ. ತಿಮ್ಮಪ್ಪ, ನಗರಸಭೆಯ ಎಂಜಿನಿಯರ್ ಮೋಹನ್‌ರಾಜ್, ಶ್ರೀನಿವಾಸ್, ಜೆಸ್ಕಾಂ ಎಂಜಿನಿಯರ್ ಶಂಕರ್ ತೋಟದ್ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ನಿರ್ಲಕ್ಷ್ಯ ಆರೋಪ: ಎಸ್ಸಿ ಮತ್ತು ಎಸ್ಟಿ ಜನಾಂಗದವರಿಗೆ ಮೀಸಲಿರಿಸಿದ ಶೇ. 22.75ರ ಅನುದಾನದ ಬಳಕೆಯಲ್ಲಿ ಅಕ್ರಮ ನಡೆದಿದ್ದು, ಅದರ ಕುರಿತು ಸರ್ಕಾರವು ಪ್ರಕರಣ ದಾಖಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದೆ. ಹಾಗೆಯೇ ಜಿಲ್ಲಾಧಿಕಾರಿಗಳು ಪ್ರಕರಣ ದಾಖಲಿಸುವಂತೆ ಮತ್ತು ಎಫ್‌ಐಆರ್ ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಸೂಚಿಸಿದ್ದರೂ ಪೌರಾಯುಕ್ತ ಬಸಪ್ಪ ಅವರು ಈ ಕೇಸ್‌ಗೆ ಸಂಬಂಧಿಸಿ ನಿರ್ಲಕ್ಷ್ಯ ತೋರಿದ್ದಾರೆಂದು ಟೀಕಿಸಿದರು.
ಕಾಲಾವಕಾಶ: ನಗರಸಭೆಯಲ್ಲಿ ನಡೆದ ಎಲ್ಲ ಅಕ್ರಮಗಳಿಗೆ ಸಂಬಂಧಿಸಿ ಜಿಲ್ಲಾಧಿಕಾರಿಗಳು ಕೂಡಲೇ ಕೇಸ್ ದಾಖಲಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಒಂದು ವಾರದ ಅವಕಾಶ ನೀಡಲಾಗುತ್ತದೆ. ಅವರು ನಿರ್ಲಕ್ಷ್ಯದ ಧೋರಣೆ ಮುಂದುವರಿಸಿದಲ್ಲಿ ಡಿ. 16ಕ್ಕೆ ನಗರಸಭೆಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ಎಚ್ಚರಿಸಿದರು.
ಸಂಘಟನೆಗಳ ಪ್ರಮುಖರಾದ ಜೆ.ಬಿ.ರಾಜು, ರಾಜುಪಟ್ಟಿ, ಅಮರೇಶ್, ಅಶೋಕಕುಮಾರ್ ಜೈನ್ ಅನೇಕರಿದ್ದರು.
-----