ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಂಡಾ ಕಲ್ಲಿಗೆ ಗಣಿ ಏಟು!

Lingaraj Badiger
Updated On : 10 Dec 2013, 10:43 am

ಕನ್ನಡಪ್ರಭ ವಾರ್ತೆ, ಮುದಗಲ್, ಡಿ.9
ಅಕ್ರಮ ಗಣಿಗಾರಿಕೆ ಸದ್ದು ರಾಜ್ಯದೆಲ್ಲೆಡೆ ತಲ್ಲಣಗೊಳಿಸಿದ್ದು, ಮುದಗಲ್ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ತನಿಖೆ ಗಣಿ ಮಾಲೀಕರನ್ನು ನಿದ್ದೆಗೆಡಿಸಿದೆ.
  ಮುದಗಲ್, ಮಾಕಾಪುರ, ಆದಾಪುರ ಗ್ರಾಮಗಳ ಗ್ರಾನೈಟ್ ಶಿಲೆಗಳು ದೂರದ ಚೈನಾ, ಹಾಂಕಾಂಗ್, ಮಲೇಶಿಯಾ ರಾಷ್ಟ್ರಗಳಿಗೆ ರಫ್ತಾಗುವ ಆಗುವ ಮೂಲಕ ಮಾಲೀಕರು ಡಾಲರ್ ಲೆಕ್ಕದಲ್ಲಿ ಹಣ ಎಣಿಕೆ ಮಾಡಿಕೊಳ್ಳುತ್ತಿದ್ದರು. ಆದರೀಗ ತನಿಖೆ ಆದೇಶದಿಂದಾಗಿ ಗಣಿ ಮಾಲೀಕರು ನಷ್ಟದ ಚಿಂತೆಯಲ್ಲಿ ಮುಳುಗಿದ್ದಾರೆ. ಸ್ಥಳೀಯ ಗ್ರಾನೈಟ್ ಫ್ಯಾಕ್ಟರಿಗಳಿಗೆ ಸಾಗಿಸುತ್ತಿರುವ ಕಂಡಾ ಸೈಜ್ ಕಲ್ಲಿಗೆ ಗಣಿ ಇಲಾಖೆ ಮಾನದಂಡಗಳು ಗಾಳಿಗೋಪುರವಾಗಿವೆ.
  ಪಟ್ಟಣದ ಹೊರವಲಯದಲ್ಲಿ ನಡೆಯುತ್ತಿರುವ ಗ್ರಾನೈಟ್ ಗಣಿಗಾರಿಕೆಯಲ್ಲಿ ಸ್ವೀಕೃತವಾಗದ ಕಾರಣ ಕಲ್ಲು ಶಿಲೆಗಳನ್ನು ಕಂಡಾ ಸೈಟ್ ಮಾಡಿ ಹುನಗುಂದ ತಾಲೂಕಿನ ಇಳಕಲ್, ಸ್ಥಳೀಯ ಕಲ್ಲು ಪಾಲಿಶ್ ಫ್ಯಾಕ್ಟರಿಗಳಿಗೆ ಸಾಗಿಸಲಾಗುತ್ತಿದೆ. ಭೂ ಮತ್ತು ಗಣಿ ವಿಜ್ಞಾನ ಇಲಾಖೆ ನಿಯಮದ ಪ್ರಕಾರ ಗ್ರಾನೈಟ್ ಕಲ್ಲು ಯಾವುದೇ ಸೈಜಿನಲ್ಲಿದ್ದರೂ ಅದನ್ನು ಎಲ್ಲಿಗೆ ಸಾಗಿಸಬೇಕಾದರೂ ಸರ್ಕಾರಕ್ಕೆ ರಾಯಲ್ಟಿ (ರಾಜ್ಯಧನ) ಕಟ್ಟಬೇಕು ಎನ್ನುವ ನಿಯಮ ಇದೆ.
  ಆದರೆ, ಇಲ್ಲಿ ಪ್ರತಿ ದಿನ ನೂರಾರು ಲಾರಿಗಳಲ್ಲಿ ಕಂಡಾ ಸೈಜ್ ಕಲ್ಲು ಶಿಲೆಗಳನ್ನು ಸಾಗಿಸುತ್ತಿದ್ದರೂ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯಾಗಲಿ, ಪೊಲೀಸ್, ಕಂದಾಯ ಇಲಾಖೆಯಾಗಲಿ ಕ್ಯಾರೆ ಎನ್ನುವುದಿಲ್ಲ. ಮೂಲಗಳ ಪ್ರಕಾರ ಸ್ಥಳೀಯ ಪೊಲೀಸರು ಕಂಡಾ ಸೈಜ್ ಕಲ್ಲು ಸಾಗಿಸುವ ಮಧ್ಯವರ್ತಿಗಳಿಂದ ತಿಂಗಳ ಮಾಮೂಲಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ರಾತ್ರಿ ಸಾಗಾಟ:  ಇಳಕಲ್, ಹುನಗುಂದ, ಗಜೇಂದ್ರಗಡ, ಹನುಮಸಾಗರ ಮುಂತಾದ ಕಡೆಗಳಲ್ಲಿರುವ ಗ್ರಾನೈಟ್ ಪಾಲಿಶ್ ಫ್ಯಾಕ್ಟರಿಗಳಿಗೆ ಕಂಡಾ ಸೈಟ್ ಕಲ್ಲುಗಳನ್ನು ರಾತ್ರಿ ವೇಳೆಯಲ್ಲಿ ಸಾಗಿಸಲಾಗುತ್ತಿದೆ. ಹಗಲಿನಲ್ಲಿ ಅಧಿಕಾರಿಗಳ ಕಾಟ ಹೆಚ್ಚಿದ್ದರಿಂದ ರಾತ್ರಿ ವೇಳೆಯಲ್ಲಿ ಪೊಲೀಸರಿಗೆ ಮಾಮೂಲಿ ಕೊಟ್ಟು ಸಾಗಾಟ ಮಾಡಲಾಗುತ್ತಿದೆ ಎನ್ನಲಾಗಿದೆ. ಕಂಡಾ ಸೈಜ್ ಕಲ್ಲು ಮಾರಾಟ ಮಾಡುವ ಮಧ್ಯವರ್ತಿಗಳು ಕಂಡಾ ಸೈಜ್ ಶಿಲೆಗಳನ್ನು ಸಿದ್ಧಪಡಿಸುವವ ರೊಂದಿಗೆ ಕಲ್ಲಿಗೆ ಇಷ್ಟು ಎಂದು ಗುತ್ತಿಗೆ ಮಾತನಾಡಿಕೊಂಡಿರುತ್ತಾರೆ.
ವಿರಳ:  ಮುದಗಲ್, ಮಾಕಾಪುರ, ಆದಾಪುರ ಗ್ರಾಮಗಳಿಂದ ಪ್ರತಿ ದಿನ  ಕಂಡಾ ಸೈಜ್ ಕಲ್ಲುಗಳನ್ನು ರಾಜಾ ರೋಷವಾಗಿ ಸಾಗಿಸುತ್ತಿದ್ದರೂ ಅಂಥವರ ಮೇಲೆ ಪ್ರಕರಣಗಳ ದಾಖಲಾಗಿರುವುದು ವಿರಳ. ಅಕ್ರಮ ದಂಧೆಯಲ್ಲಿ ಸದ್ದಿಲ್ಲದೆ ಸಾಗಿರುವುದು ಈ ಕಂಡಾ ಸೈಜ್ ಕಲ್ಲು ಶೀಲೆಗಳ ಮಾರಾಟ ದಂಧೆ. ಸರ್ಕಾರ ಅಕ್ರಮ ಗಣಿಗಾರಿಕೆ ತನಿಖೆ ನಡೆಸುವ ಮೂಲಕ ಒಂದು ಹೆಜ್ಜೆ ಮುಂದಾಗಿದ್ದರೆ, ಇತ್ತ ಮಧ್ಯವರ್ತಿಗಳು ಕಂಡಾ ಸೈಜ್ ಕಲ್ಲು ಶಿಲೆಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವುದು ತನಿಖೆಗೆ ಒಳಪಡುವುದೇ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
  ಗ್ರಾನೈಟ್ ಕಲ್ಲು ಶಿಲೆಗಳನ್ನು ತುಂಬಿಕೊಂಡು ಸ್ಥಳೀಯ ಪೊಲೀಸ್ ಠಾಣೆ ಮುಂದೆ ಸಾಗುತ್ತಿದ್ದರು. ಅದಕ್ಕೆ ಪರವಾನಗಿ ಇದೆಯೋ ಇಲ್ಲವೋ ಎನ್ನುವುದನ್ನು ಸಹಿತ ಇಲ್ಲಿನ ಪೊಲೀಸರು ಪರಿಶೀಲನೆ ಮಾಡುವುದಿಲ್ಲ. ಅಕ್ರಮ ಕಲ್ಲು ದಂಧೆಯಲ್ಲಿ ಸ್ಥಳೀಯ ಪೊಲೀಸರ, ಕಂದಾಯ ಅಧಿಕಾರಗಳ ಕುಮ್ಮಕ್ಕು ಇದೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಏನು ಕ್ರಮ ಜರುಗಿಸುವರೋ ಕಾದು ನೋಡಬೇಕಾಗಿದೆ.
- ಪಂಪಯ್ಯ ಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement