ಕರ ವಸೂಲಿಗೆ ಪ್ರಾಮುಖ್ಯ ನೀಡಲು ಸೂಚನೆ
ಕ.ಪ್ರ. ವಾರ್ತೆ, ರಾಯಚೂರು, ಡಿ.9
ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಕರ ವಸೂಲಿಗೆ ಪಿಡಿಒಗಳು ಹೆಚ್ಚು ಒತ್ತು ನೀಡಬೇಕು. ಗ್ರಾಮೀಣ ಭಾಗದ ಸಮಸ್ಯೆಗಳ ನಿವಾರಣೆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಜಿಪಂ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್ ಸೂಚಿಸಿದರು.
ನಗರದಲ್ಲಿ ಸೋಮವಾರ ಜಿಪಂ ಸಭಾಂಗಣದಲ್ಲಿ ನಡೆದ ಗ್ರಾಪಂ ಪಿಡಿಒಗಳ ಸಭೆಯಲ್ಲಿ ಮಾತನಾಡಿ, ಗ್ರಾಪಂನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಪ್ರತಿ ತಿಂಗಳು ಸಮರ್ಪಕ ವೇತನ ನೀಡಿಕೆಗೆ ಕರ ವಸೂಲಿಯಲ್ಲಿ ಉತ್ತಮ ಸಾಧನೆ ಮಾಡುವುದು ಅವಶ್ಯಕ ಎಂದು ಹೇಳಿದರು.
ಗ್ರಾಪಂ ಸಿಬ್ಬಂದಿ ವೇತನಕ್ಕಾಗಿ ಹೋರಾಟ ನಡೆಸುವ ಪರಿಸ್ಥಿತಿಯಿದೆ. ಈಗಾಗಲೇ ಡಿ. 12ರಂದು ಹೋರಾಟ ನಡೆಸುವುದಾಗಿ ನೌಕರರು ಎಚ್ಚರಿಸಿದ್ದಾರೆ. ಗ್ರಾಪಂ ಮಟ್ಟದಲ್ಲಿನ ಕರ ವಸೂಲಿಗೆ ಸಂಬಂಧಿಸಿ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳದಿದ್ದಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ತೊಂದರೆಯಾಗುವ ಮೂಲಕ ವೇತನ ವಿಳಂಬವಾಗುತ್ತದೆ ಎಂದು ಎಚ್ಚರಿಸಿದರು.
ಪಿಡಿಒಗಳು ಕರ ವಸೂಲಿ ಪ್ರಮಾಣ ಹೆಚ್ಚಿಸಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸುವತ್ತ ಆದ್ಯತೆ ನೀಡುವಂತೆ ಆದೇಶಿಸಿದರು.
ಜಿಪಂ ಯೋಜನಾಧಿಕಾರಿ ಟಿ. ರೋಣಿ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಪಿಡಿಒಗಳಿದ್ದರು.