ಜಿಪಂ ಸದಸ್ಯರ ಅಲಭ್ಯತೆ; ಆರೋಪ
ಮಸ್ಕಿ: ಮಸ್ಕಿ ಜಿಪಂ ಸದಸ್ಯ ಎಚ್.ಬಿ. ಮುರಾರಿ ಅವರು ಸಾರ್ವಜನಿಕರಿಗೆ ಲಭ್ಯರಿಲ್ಲ. ದೂರು ಹೇಳಲೂ ಲಿಂಗಸ್ಗೂರು ಪಟ್ಟಣಕ್ಕೆ ತೆರಳುವಂತಾಗಿದೆ ಎಂದು ಪಟ್ಟಣದ ರಾಮಕೃಷ್ಣ ಕಾಲನಿಯ ನಿವಾಸಿಗಳು ದೂರಿದ್ದಾರೆ. ರಾಮಕೃಷ್ಣ ಕಾಲನಿಯ ಯುವ ಮುಖಂಡರಾದ ಕೃಷ್ಣ ಚಿಗರಿ, ನಾಗರಾಜ್ ಗುಡಸಲಿ, ಮಂಜುನಾಥ ಬಿ. ಮತ್ತಿತರರು ಈ ಕುರಿತು ಪ್ರಕಟಣೆ ನೀಡಿ, ಪಟ್ಟಣದ 12ನೇ ವಾರ್ಡಿನ ಧನಗರವಾಡಿ ಶಾಲೆಯ ಹತ್ತಿರದ ಚರಂಡಿ ಹಾಗೂ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಅದರ ಸಮಗ್ರ ದುರಸ್ತಿಗೆ ದೂರವಾಣಿ ಮೂಲಕ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.
ಇಂದು ದಿನಾಚರಣೆ
ದೇವದುರ್ಗ: ತಾಲೂಕಿನ ಗಬ್ಬೂರು ಗ್ರಾಮದ ಸದ್ಗುರು ಕರಿಗೂಳಿ ಮಹಾರಾಜರ 18ನೇ ಪುಣ್ಯ ದಿನಾಚರಣೆಯು ಡಿ. 10 ರಂದು ನಡೆಯಲಿದೆ. ಬೆಳಗ್ಗೆ 9ಕ್ಕೆ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, 108 ಗುರುನಾಮಾವಳಿ ಪಠಣ, ನಂತರ ಭೂರಿ ಗಣಾರಾಧನೆ, ಭಕ್ತರಿಂದ ಸೇವೆ ಸಮರ್ಪಣೆ, ರಾತ್ರಿ 9ರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಗಬ್ಬೂರು ಗ್ರಾಮದ ಭಕ್ತ ಮಂಡಳಿಯ ಪ್ರಕಟಣೆ ತಿಳಿಸಿದೆ.
3 ಟ್ರ್ಯಾಕ್ಟರ್ ಜಪ್ತಿ
ಸಿಂಧನೂರು: ನಗರದಲ್ಲಿ ರಾಜಾರೋಷವಾಗಿ ಅಕ್ರಮ ಮರಳು ಸಾಗಣೆ ಮಾಡುತ್ತಿರುವ ವರದಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದಂತೆ ತಾಲೂಕಾಡಳಿತ ಎಚ್ಚೆತ್ತುಕೊಂಡು ಒಂದು ಜೆಸಿಬಿ, 3 ಟ್ರ್ಯಾಕ್ಟರ್ ಜಪ್ತಿ ಮಾಡಿ ಶಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ತಹಸೀಲ್ದಾರ್ ವಿ.ಆರ್. ಪಾಟೀಲ್ ನೇತೃತ್ವದ ತಂಡ ಶನಿವಾರ ಮಧ್ಯಾಹ್ನ ಉಪ್ಪಾರವಾಡಿ ಬಳಿ ಇರುವ ಹಳ್ಳದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಜೆಸಿಬಿ ಹಾಗೂ ಟ್ರ್ಯಾಕ್ಟರ್‌ಗಳನ್ನು ಜಪ್ತಿ ಮಾಡಿದರು. ಶಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.