ನಿಲ್ಲದ ಅಕ್ರಮ ಮರಳು ಸಾಗಣೆ: ಸಾರ್ವಜನಿಕರ ಆಕ್ರೋಶ
ಸಿಂಧನೂರು: ನಗರದ ಬಪ್ಪೂರು ಹಳ್ಳ, ಹಿರೇಹಳ್ಳದ ಸುಕಾಲಪೇಟೆಯ ಭಾಗದಲ್ಲಿ ಎಗ್ಗಿಲ್ಲದೆ ಅಕ್ರಮ ಮರಳು ದಂಧೆ ಮುಂದುವರೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈಚೆಗೆ ತಹಸೀಲ್ದಾರರು ದಾಳಿ ಮಾಡಿ ಟ್ರ್ಯಾಕ್ಟರ್‌ಗಳನ್ನು ವಶಪಡಿಸಿಕೊಂಡು ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮರಳು ಸಾಗಾಣಿಕೆದಾರರ ಮೇಲೆ ಮಾತ್ರ ಕೇಸ್ ದಾಖಲಿಸಿದ್ದಾರೆ. ಆದರೆ ನಗರ ಪ್ರದೇಶದಲ್ಲಿ ಹಲವು ದಿನಗಳಿಂದ ಅಧಿಕಾರಿಗಳ ಕಣ್ಣ ಮುಂದೆಯೇ ಪ್ರತಿನಿತ್ಯ ಟ್ರ್ಯಾಕ್ಟರ್ ಮೂಲಕ ದಂಧೆಕೋರರು ಹೇರಳ ಪ್ರಮಾಣದಲ್ಲಿ ಮರಳು ಸಾಗಿಸುತ್ತಿದ್ದರು ಕ್ರಮ ಮಾತ್ರ ಜರುಗಿಲ್ಲ ಎಂಬ ಆರೋಪ ವ್ಯಾಪಕವಾಗಿದೆ. ಕಂದಾಯ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಟ್ರ್ಯಾಕ್ಟರ್ ಮಾಲೀಕರೊಂದಿಗೆ ಶಾಮೀಲಾಗಿ ಮರಳು ಸಾಗಾಣಿಕೆಗೆ ಅನುವು ಮಾಡಿದ್ದಾರೆಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ. ಟೆಂಡರ್ ಕರೆಯದೆ ನೈಸರ್ಗಿಕ ಸಂಪನ್ಮೂಲಗಳ ಮಾರಾಟದ ಮೂಲಕ ಅಕ್ರಮ ಲಾಭ ಪಡೆಯುವುದು ಅಪರಾಧ. ಆದರೆ ಈ ಕಾನೂನು ಸಿಂಧನೂರಿಗೆ ಅನ್ವಯಿಸಿದಂತೆ ಕಾಣುತ್ತಿಲ್ಲ ಎಂಬುದು ಅಧಿಕಾರಿಗಳ ಧೋರಣೆಗೆ ಸಾಕ್ಷಿ. ಮೇಲಧಿಕಾರಿಗಳು ಅಕ್ರಮ ತಡೆಗೆ ಮುಂದಾಗಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯ.
-