ಬೆಳೆ ಸಾಲ ಬಡ್ಡಿ ಅವಧಿ 3 ವರ್ಷಕ್ಕೆ ವಿಸ್ತರಿಸಲು ಆಗ್ರಹ
ಮುದಗಲ್: ಒಕ್ಕಲುತನಕ್ಕೆ ಬೇಕಾಗುವ ಅತ್ಯವಶ್ಯಕ ಸಾಮಗ್ರಿಗಳು, ರಸಗೊಬ್ಬರ ದರ ದಿನದಿಂದ ದಿನಕ್ಕೆ ಬೆಲೆ ಏರಿಕೆಯಿಂದ ಒಕ್ಕಲುತನ ಬಲು ದುಬಾರಿಯಾಗುತ್ತಿದ್ದು ರೈತರು ಸಂಕಷ್ಟದಲ್ಲಿ ಸಿಲುಕುವಂತಾಗಿದೆ. ರೈತರಿಗೆ ನೀಡುತ್ತಿರುವ ಶೇ. 4 ರ ಬಡ್ಡಿ ಸಾಲದ ಅವಧಿಯನ್ನು ಒಂದು ವರ್ಷದಿಂದ ಮೂರು ವರ್ಷಕ್ಕೆ ವಿಸ್ತರಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಒಕ್ಕಲುತನದ ಸಾಮಗ್ರಿಗಳು ಮತ್ತು ರಸಗೊಬ್ಬರ ದರದ ಏರಿಕೆಯಲ್ಲದೆ ಹೊಲಕ್ಕೆ ನೀರು ಹರಿಸಬೇಕಾದರೆ, ವಿದ್ಯುತ್ ಸಮಸ್ಯೆಗಾಗಿ ಹೋರಾಟ ಮಾಡಿಯೇ ತಾತ್ಕಾಲಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ರೈತರು ಬೆಳೆದ ಧವಸ- ಧಾನ್ಯಗಳಿಗೆ ವೈಜ್ಞಾನಿಕ ಬೆಲೆ ಸಿಗದೆ ಇರುವದರಿಂದ ರೈತನು ದಿನದಿಂದ ದಿನಕ್ಕೆ ಸಾಲಗಾರನಾಗುತ್ತಿದ್ದಾನೆ.
ಯೋಜನೆ ತಲುಪಿಲ್ಲ: ಮಾರುಕಟ್ಟೆಯಲ್ಲಿ ಕೂಡ ರೈತ ಬೆಳೆದ ಧಾನ್ಯಗಳಿಗೆ ತೂಕ, ದಲ್ಲಾಳಿಗಳಿಂದ ಮೋಸ ಹೋಗುತ್ತಿದ್ದಾನೆ. ದಲ್ಲಾಳಿಯ ಹಿಡಿತದಲ್ಲಿಯೇ ರೈತ ಬದುಕುವಂತಾಗಿದೆ. ರೈತನು ಸಾಲ ಪಡೆದಾಗ ಸಂಬಂಧಿಸಿದ ಬ್ಯಾಂಕ್ ಮತ್ತು ಸಂಘಗಳು ಬೆಳೆ ವಿಮೆಯನ್ನು ರೈತನ ಒಪ್ಪಿಗೆ ಪಡೆದು ಆತನ ಖಾತೆಗೆ ಖರ್ಚು ಹಾಕಬೇಕೆಂದು ಒತ್ತಾಯಿಸಿದರು.