ಆಶ್ರಯ ಮನೆ ಮಂಜೂರಿಗೆ ಅಡ್ಡಿ: ಆರೋಪ
ಮುದಗಲ್: ರಾಜ್ಯ ಸರ್ಕಾರದ ಬಸವ ವಸತಿ ಯೋಜನೆಯಡಿ ಪ್ರತಿ ಗ್ರಾಪಂಗೆ ಬಂದಿರುವ 20 ಮನೆಗಳ ಮಂಜೂರಾತಿಗೆ ನಾಗಲಾಪುರ ಜಿಪಂ ಕ್ಷೇತ್ರದ ಸದಸ್ಯ ಮಹಾದೇವಪ್ಪಗೌಡ ಪೊಲೀಸ ಪಾಟೀಲ್ ಫಲಾನುಭವಿಗಳ ಆಯ್ಕೆಪಟ್ಟಿ ರದ್ದುಪಡಿಸುವಂತೆ ಜಿಪಂಗೆ ದೂರು ನೀಡಿದ್ದಾರೆಂದು ತಿಳಿದು ಬಂದಿದೆ.
ನಾಗಲಾಪುರ ಜಿಪಂ ಕ್ಷೇತ್ರದ ವ್ಯಾಪ್ತಿಗೆ ಬರುವ ಕನ್ನಾಳ, ಮಟ್ಟೂರ, ನಾಗಲಾಪುರ, ತಲೇಖಾನ ಗ್ರಾಪಂ.ಗಳಲ್ಲಿ ಬಂದಿರುವ 2013-14ನೇ ಸಾಲಿನ ಬಸವ ವಸತಿ ಯೋಜನೆಯ ಮನೆಗಳ ಆಯ್ಕೆ ಪಟ್ಟಿ ಸಮರ್ಪಕವಾಗಿಲ್ಲ. ಸರ್ಕಾರ ನಿಯಮವನ್ನು ಗಾಳಿಗೆ ತೂರಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕೆಲ ಗ್ರಾಪಂ ಸದಸ್ಯರು ಸೇರಿ ಕೊಂಡು ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ರಾಜೀವಗಾಂಧಿ ವಸತಿ ನಿಗಮದ ಅನುಮೋದನೆ ಪಡೆಯಲು ಮುಂದಾಗಿದ್ದಾರೆಂದು ಆರೋಪಿಸಿದರು.
ಜಿಪಂ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಜಿಪಂ ಸದಸ್ಯರ ದೂರಿನಿಂದಾಗಿ ಫಲಾನುಭವಿಗಳಿಗೆ ವಸತಿ ಯೋಜನೆಗಳು ಮರಿಚಿಕೆಯಾಗಿವೆ. ವೈಯಕ್ತಿಕ ಪ್ರತಿಷ್ಠೆಯ ಕಚ್ಚಾಟದಿಂದ ಬಸವ ವಸತಿ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ತೊಂದರೆಯಾಗುತ್ತಿದೆ ಎಂದು ತಲೇಖಾನ್ ಗ್ರಾಪಂ ಸದಸ್ಯರಾದ ಹನುಮಂತ ಗೊಲ್ಲರ, ರಸೂಲ ಬೀ, ಉಮ್ಮವ್ವ ಗ್ಯಾನಪ್ಪ ರಾಠೋಡ ಆರೋಪಿಸಿದ್ದಾರೆ.