ದುಬಾರಿ ಬೆಲೆಗೆ ಗ್ರಾಪಂ ಟೆಂಡರ್ ಫಾರಂ
ಸಿಂಧನೂರು: ತಾಲೂಕಿನ ದೇವರಗುಡಿ ಗ್ರಾಪಂನಲ್ಲಿ ಗ್ರಾಮ ಸ್ವರಾಜ ಯೋಜನೆಯಡಿ ಅಂಗನವಾಡಿ ಕಟ್ಟಡಕ್ಕೆ ಕರೆದಿರುವ ಟೆಂಡರ್ ಅರ್ಜಿ ಫಾರಂಗಳ ಬೆಲೆ ಭಾರಿ ದುಬಾರಿಯಾಗಿದೆ ಎಂದು ಗುತ್ತೇದಾರ ಬಿ. ನಾಗರಾಜ ದೂರಿದ್ದಾರೆ.
ಈ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ದೂರು ಸಲ್ಲಿಸಿ ಕುನ್ನಟಗಿ ಕ್ಯಾಂಪಿನ ಅಂಗನವಾಡಿ ಕಟ್ಟಡಕ್ಕೆ 11.95 ಲಕ್ಷ ಹಣ ನಿಗಧಿಯಾಗಿದ್ದು, ಟೆಂಡರ್ ಫಾರಂ ಬೆಲೆ ಒಂದಕ್ಕೆ 12 ಸಾವಿರ ನಿಗದಿಗೊಳಿಸಲಾಗಿದೆ. ಒಟ್ಟು ಹತ್ತು ಅರ್ಜಿಗಳನ್ನು ವಿವಿಧ ಗುತ್ತೇದಾರರು ಪಡೆದಿದ್ದಾರೆ. ಇವರಲ್ಲಿ ಒಬ್ಬರಿಗೆ ಮಾತ್ರ ಟೆಂಡರ್ ಸಿಗುತ್ತದೆ. ಆದರೆ ಉಳಿದ ಒಂಬತ್ತು ಜನ ಗುತ್ತೇದಾರರ ಅರ್ಜಿ ಫಾರಂ ಹಣ 1.8 ಲಕ್ಷ ಹಣ ಪಂಚಾಯ್ತಿಗೆ ಉಳಿಯುತ್ತದೆ.
ಇಷ್ಟೊಂದು ದೊಡ್ಡ ಮೊತ್ತದ ಖರ್ಚು ಅರ್ಜಿ ಫಾರಂಗೆ ಆಗುವುದಿಲ್ಲ. ಬೇರೆ ಬೇರೆ ಪಂಚಾಯ್ತಿಗಳಲ್ಲಿ ಇದೆ ಅಂಗನವಾಡಿ ಕಟ್ಟಡ ಕಾಮಗಾರಿಗೆ ಅರ್ಜಿ ಕರೆದಿದ್ದಾರೆ. ಆದರೆ ಇಷ್ಟೊಂದು ದುಬಾರಿ ಬೆಲೆ ಅರ್ಜಿಗಳಿಗೆ ನಿಗದಿ ಪಡಿಸಿಲ್ಲ ಎಂದು ತಿಳಿಸಿದ್ದಾರೆ.