ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನ್ಯಾ. ಸದಾಶಿವ ವರದಿ ತಿರಸ್ಕರಿಸಿ

Mainashree
Updated On : 11 Dec 2013, 10:48 am

ಕ.ಪ್ರ.ವಾರ್ತೆ  ರಾಯಚೂರು  ಡಿ. 10
ನ್ಯಾ. ಸದಾಶಿವ ಆಯೋಗದ ವರದಿಯು ತೀರಾ ಅವೈಜ್ಞಾನಿಕವಾಗಿದೆ. ವರದಿಯನ್ನು ಸರ್ಕಾರ ಜಾರಿಗೆ ತರುವುದಕ್ಕೆ ಕರ್ನಾಟಕ ವಡ್ಡರ(ಭೋವಿ) ಸಂಘ ವಿರೋಧಿಸುತ್ತದೆ ಎಂದಿರುವ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಶಿಕಲಾ ಭೀಮರಾಯ ಅವರು, ಬೆಳಗಾವಿ ಅಧಿವೇಶನದಲ್ಲಿ ಲಿಂಗಸ್ಗೂರು ಶಾಸಕ ಮಾನಪ್ಪ ವಜ್ಜಲ್ ವರದಿ ಜಾರಿಗೆ ಆಕ್ಷೇಪಿಸಿದ್ದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸದಾಶಿವ ಆಯೋಗದ ವರದಿಯಿಂದ ಪರಿಶಿಷ್ಟ ಜಾತಿಯಲ್ಲಿನ ವಿವಿಧ ಜಾತಿಗಳ ಜನತೆಗೆ ಅನ್ಯಾಯವಾಗುತ್ತದೆ.
99 ಜಾತಿ ಜನಾಂಗಕ್ಕೆ ಅನ್ಯಾಯ: ಸದಾಶಿವ ಆಯೋಗವು ಭೋವಿ ವಡ್ಡರ, ಕೊರವ, ಲಮಾಣಿ, ಬೊಪ್ಪೆ, ಜಾತಿಗೇರ ಮತ್ತಿತರೆ ಅನೇಕ ಪರಿಶಿಷ್ಟ ಜಾತಿಗಳ ಜನರನ್ನು ಕಡೆಗಣಿಸಿ ವರದಿ ರೂಪಿಸಿದೆ. ಇಂಥ ವರದಿಯಿಂದ ಈ ಜನಾಂಗದವರಿಗೆ ಅನ್ಯಾಯವಾಗಲಿದೆ. ಈ ಹಿನ್ನೆಲೆಯಲ್ಲಿ ವರದಿಯನ್ನು ಸರ್ಕಾರ ಜಾರಿಗೆ ತರಕೂಡದೆಂದು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ವರದಿ ಜಾರಿಗೆ ಮುಂದಾದಲ್ಲಿ ಅನ್ಯಾಯಕ್ಕೆ ಒಳಗಾದ ಪರಿಶಿಷ್ಟರೆಲ್ಲರೂ ಒಗ್ಗೂಡಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿರುವ ಅವರು, ಬಹುಕಾಲದಿಂದ ವಡ್ಡರ ಜವಾಂಗದವರು ಸಮಾಜದಲ್ಲಿ ತುಳಿತಕ್ಕೊಳಗಾಗಿದ್ದಾರೆ.
ಮೇಲ್ವರ್ಗ ದವರಿಂದ ದೌರ್ಜನ್ಯಕ್ಕೊಳಗಾಗಿದ್ದು, ಈ ಬಗ್ಗೆ ಸದಾಶಿವ ಆಯೋಗಕ್ಕೆ ಅರಿವಿದ್ದೂ ಕೇವಲ ಒಂದೆರಡು ಜಾತಿ ಜನಾಂಗದವರಿಗೆ ಅನುಕೂಲವಾಗುವ ರೀತಿಯಲ್ಲಿ ವರದಿ ತಯಾರಿಸಲಾಗಿದೆ ಎಂದು ಆರೋಪಿಸಿದರು.
ಶಾಸಕ ವಜ್ಜಲ್ ನಿಲುವಿಗೆ ಸ್ವಾಗತ: ಈಚೆಗೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಲಿಂಗಸ್ಗೂರು ಶಾಸಕ ಮಾನಪ್ಪ ವಜ್ಜಲ್ ಅವರು ವರದಿ ಜಾರಿಗೆ ವಿರೋಧಿಸಿರುವುದು ಸೂಕ್ತವಾಗಿದೆ. ಶಾಸಕ ವಜ್ಜಲ್ ಅವರ ನಿಲುವಿಗೆ 99 ಪರಿಶಿಷ್ಟ ಜಾತಿಗಳ ಬೆಂಬಲವಿದೆ. ಪರಿಶಿಷ್ಟರೆಲ್ಲರೂ ಒಂದೇ ಎಂಬ ಭಾವನೆಯಿಂದ ಮುನ್ನಡೆಯುವ ಅವಶ್ಯಕತೆಯಿದೆ ಎಂದು ತಿಳಿಸಿದರು.
ಶಾಸಕ ಮಾನಪ್ಪ ವಜ್ಜಲ್ ಅವರು ಸದಾಶಿವ ಆಯೋಗದ ವರದಿ ಜಾರಿಗೆ ವಿರೋಧಿಸಿದ್ದರಿಂದ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ದಲಿತ ಸಂಘಟನೆಗಳ ಮುಖಂಡರು ಒತ್ತಾಯಿಸಿರುವುದು ಸರಿಯಲ್ಲ. ಹಾಗೆ ಒತ್ತಾಯಿಸುವ ಹಕ್ಕು ದಲಿತ ಸಂಘಟನೆಗಳಿಗಿಲ್ಲ ಎಂದು ಟೀಕಿಸಿದರು.
ಉಗ್ರ ಹೋರಾಟದ ಎಚ್ಚರಿಕೆ: ರಾಜ್ಯ ಸರ್ಕಾರ ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಬೇಕು. ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮೀಸಲಾತಿ ಮುಂದುವರಿಸುವಂತೆ ಆಗ್ರಹಿಸಿರುವ ಅವರು, ಈ ಬಗ್ಗೆ ಸರ್ಕಾರ ವರದಿ ಜಾರಿಗೆ ಮುಂದಾದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement