ಬತ್ತ ಕಟಾವು ಯಂತ್ರಕ್ಕೆ ಫುಲ್ ಡಿಮ್ಯಾಂಡ್
ಕನ್ನಡಪ್ರಭ ವಾರ್ತೆ, ರಾಯಚೂರು, ಡಿ.10
ಸಮೃದ್ಧ ಬತ್ತದ ಬೆಳೆ ಕಂಡಿದ್ದ ರೈತರಿಗೀಗ ಕಟಾವಿನ ಯಂತ್ರದ ಸಮಸ್ಯೆ ಎದುರಾಗಿದೆ. ಆದ್ದರಿಂದ ಬತ್ತ ಕಟಾವು ಯಂತ್ರಗಳಿಗೆ ಫುಲ್ ಡಿಮ್ಯಾಂಡ್.
ನೆರೆಯ ರಾಜ್ಯಗಳೂ ಸೇರಿ ತುಂಗಭದ್ರಾ ನೀರಾವರಿ ಪ್ರದೇಶದಲ್ಲಿ ಏಕಕಾಲಕ್ಕೆ ಬತ್ತ ಕಟಾವಿಗೆ ಬಂದಿದ್ದು ಯಂತ್ರದ ಸಮಸ್ಯೆ ಹೆಚ್ಚಿಸಿದೆ. ಕಟಾವಿನ ವಿಳಂಬ, ತಾಪಮಾನದ ಕುಸಿತ ಮತ್ತು ಮಂಜಿನ ಕಾಟಕ್ಕೆ ಬತ್ತ ಬೆಳೆದವರು ಅಕ್ಷರಶಃ ಕಂಗಾಲಾಗಿದ್ದಾರೆ.
ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಬತ್ತದ ಬೆಳೆಗಾರರು ಎದುರಿಸುತ್ತಿರುವ ಹೊಸ ಸಮಸ್ಯೆಯ ಕಥೆಯಿದು.
ಪ್ರಧಾನ ಬೆಳೆ: ತುಂಗಭದ್ರಾ ಎಡದಂಡೆ ವ್ಯಾಪ್ತಿಯಲ್ಲಿ ಬತ್ತವೇ ಪ್ರಧಾನ ಬೆಳೆ. ಸುಮಾರು 3 ಲಕ್ಷ ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಬತ್ತ ಬೆಳೆಯುತ್ತಾರೆ.
ಕಳೆದ ಕೆಲ ವರ್ಷಗಳಿಂದಲೂ ಕೂಲಿ ಕಾರ್ಮಿಕರ ಕೊರತೆ ಇದೆ. ಹಾಗಾಗಿ ಬತ್ತದ ನಾಟಿ ಹೊರತುಪಡಿಸಿ ಉಳಿದಂತೆ ಯಂತ್ರಗಳ ಬಳಕೆ ಹೆಚ್ಚು. ಮುಂಗಾರು ಹಂಗಾಮಿಗೆ ಎಡದಂಡೆಯಿಂದ ಎಲ್ಲಾ ರೈತರಿಗೆ ಈ ಬಾರಿ ಸಮರ್ಪಕ ನೀರು ದೊರೆಯುತು. ಆಗಾಗ್ಗೆ ಮಳೆಯಾಗಿದ್ದರಿಂದ ಕಾಲುವೆಯ ಕಡೆ ಭಾಗದ ಮಾನವಿ ತಾಲೂಕಿನಲ್ಲೂ ರೈತರು ಬತ್ತ ಬೆಳೆದಿದ್ದಾರೆ. ಇಲ್ಲಿ ಉತ್ತಮ ಫಸಲು ಬಂದಿದ್ದೇ ಶಾಪವಾಗುವ ಲಕ್ಷಣಗಳಿವೆ.
ಕಟಾವು ಯಂತ್ರಕ್ಕೆ ಬೇಡಿಕೆ: ನೆರೆಯ ಆಂಧ್ರ ಮತ್ತು ತಮಿಳುನಾಡುಗಳಿಂದ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗೆ ಬತ್ತದ ಕಟಾವು ಯಂತ್ರಗಳು ಸಾಮಾನ್ಯವಾಗಿ ಮುಂಗಾರು ಹಂಗಾಮಿನ ಕೊನೆಗೆ ಆಗಮಿಸುವುದು ರೂಢಿ. ಹಾಗೆ ಬರುತ್ತಿದ್ದ ಯಂತ್ರಗಳು ಬತ್ತದ ಕಟಾವು ಮಾಡಿಕೊಳ್ಳುತ್ತಿದ್ದವು.
ಆದರೆ ಈ ಬಾರಿ ಆಂಧ್ರ ಮತ್ತು ತಮಿಳುನಾಡು ರಾಜ್ಯಗಳ ಕೆಲ ಪ್ರದೇಶದಲ್ಲಿ ಬತ್ತದ ಕಟಾವು ಈಗಲೇ ನಡೆದಿದೆ ಎಂದು ಹೇಳಲಾಗಿದೆ.
ಎಡದಂಡೆಯ ವ್ಯಾಪ್ತಿಯ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲೂ ಈಗಲೇ ಬತ್ತ ಕಟಾವಿಗಿದೆ. ಚಂಡಮಾರುತದ ಪರಿಣಾಮ ಕಾಲುವೆಯ ಮೇಲ್ಭಾಗದ ರೈತರು 8 ದಿನ ಕಟಾವು ವಿಳಂಬ ಮಾಡಿದ್ದು ಕಾಲುವೆಯ ಕೆಳ ಭಾಗದ ರೈತರಿಗೆ ಸದ್ಯ ಕಟಾವು ಯಂತ್ರ ದೊರೆಯದಂತೆ ಮಾಡಿದೆ.
ಭಾರೀ ಬೇಡಿಕೆ: ಕೊಪ್ಪಳ ಜಿಲ್ಲೆಯ ಗಂಗಾವತಿ, ರಾಯಚೂರು ಜಿಲ್ಲೆಯ ಸಿಂಧನೂರು, ಮಾನವಿ, ದೇವದುರ್ಗ ತಾಲೂಕುಗಳಲ್ಲಿ ಬತ್ತ ಕಟಾವಿಗೆ ಕಾದಿದೆ. ಅಗತ್ಯ ಸಂಖ್ಯೆಯ ಯಂತ್ರಗಳ ಕೊರತೆಯಿಂದ ಕಟಾವು ವಿಳಂಬವಾಗಿದೆ. ಈ ಮೊದಲು ಪ್ರತಿ ಎಕರೆ ಬತ್ತದ ಕಟಾವಿಗೆ ರು. 1,800 ರಿಂದ ರು. 2,500 ನೀಡುತ್ತಿದ್ದ ರೈತರು ಭಾರೀ ಬೇಡಿಕೆ ಹಿನ್ನೆಲೆ ಸದ್ಯ ಹೆಚ್ಚುವರಿಯಾಗಿ ರು. 500 ತೆರುವಂತಾಗಿದೆ ಎಂಬ ಆರೋಪವಿದೆ.
ಮಂಜಿನ ಕಾಟ: ಅವಳಿ ಜಿಲ್ಲೆಗಳಲ್ಲಿ ಕಳೆದ ಕೆಲ ದಿನಗಳಿಂದ ದಿನವೂ ಬೆಳಗ್ಗೆ ಮಂಜಿನ ಕಾಟ, ಚಳಿಯ ಅಬ್ಬರ. ತಾಪಮಾನ 14ಡಿಗ್ರಿ ಯಿಂದ 17ರವರೆಗಿದೆ. ಇದು ಬೆಳೆಗಾರರ ನಿದ್ದೆಗೆಡಿಸಿದೆ. ಸೋನಾ ಮಸೂರಿ ಬತ್ತವನ್ನು ಸಸಿ ಮಡಿ ತಯಾರಿಸಿದ ದಿನದಿಂದ 5 ತಿಂಗಳ 5 ದಿನಕ್ಕೆ ಕಟಾವು ಮಾಡಲೇಬೇಕು.
ಆದರೆ ಅದು ಸಾಧ್ಯವಾಗುತ್ತಿಲ್ಲ. ಚಳಿಯ ಅಬ್ಬರ, ಮಂಜಿನ ಕಾಟದಿಂದ ಬತ್ತ ನುಚ್ಚಾಗಿ ಬೆಲೆ ಕುಸಿಯುವ ಭೀತಿ ಎದುರಾಗಿದೆ.
ಹೀಗಾಗಿ ರೈತರು ಕಟಾವು ಯಂತ್ರಗಳಿಗೀಗ ಮುಗಿಬೀಳುತ್ತಿದ್ದು, ಹೆಚ್ಚಿನ ದರ ತೆತ್ತಾದರೂ ಕಟಾವು ಮಾಡಿ ಮಾರುಕಟ್ಟೆಗೆ ಬತ್ತ ಕಳಿಸಿದರೆ ಸಾಕು ಎಂಬಂಥ ಅನಿವಾರ್ಯತೆ.
ಈ ಕುರಿತು ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಕೃಷಿ ಕೂಲಿಕಾರರ ಸಮಸ್ಯೆಯಿದೆ. ಹಾಗಾಗಿ ರೈತರು ಯಂತ್ರಗಳಿಗೆ ಮೊರೆ ಹೋಗುವುವುದು ಅನಿವಾರ್ಯ. ಸದ್ಯ ನೆರೆಯ ರಾಜ್ಯ ಸೇರಿ ಎಲ್ಲೆಡೆ ಬತ್ತ ಏಕಕಾಲಕ್ಕೆ ಕಟಾವಿಗೆ ಬಂದಿದೆ. ಆದ್ದರಿಂದಲೇ ಯಂತ್ರಗಳಿಗೆ ಬೇಡಿಕೆ ಹೆಚ್ಚಿದೆ. ವಿಳಂಬವಾದಲ್ಲಿ ಬತ್ತ ನುಚ್ಚಾಗುವ ಭಯವಿದೆ ಎಂದಿದ್ದಾರೆ.
ನಾಟಿ ವಿಳಂಬ: ಮುಂಗಾರು ಹಂಗಾಮಿನ ಕೃಷಿ ಕಾರ್ಯ ಇನ್ನೂ ಮುಗಿದಿಲ್ಲ. ಪರಿಣಾಮ ಹಿಂಗಾರು ವಿಳಂಬವಾಗಲಿದೆ. ಪ್ರತಿ ವರ್ಷ ಹಿಂಗಾರು ಹಂಗಾಮಿಗೆ ಡಿಸೆಂಬರ್ನಲ್ಲಿ ಬತ್ತದ ಸಸಿ ನಾಟಿಯಾಗುತ್ತಿತ್ತು. ಆದರೆ ಈ ಬಾರಿ ಕಟಾವು ವಿಳಂಬದಿಂದ ಮುಂದಿನ ಹಂಗಾಮಿನ ಬತ್ತದ ನಾಟಿ ಬಹಳ ತಡವಾಗಲಿದೆ. ಇದು ಬೇಸಿಗೆಯಲ್ಲಿ ಕಾಲುವೆಯ ನೀರಿನ ಅಭಾವಕ್ಕೆ ದಾರಿಯಾಗುವುದರಲ್ಲಿ ಸಂದೇಹವಿಲ್ಲ.
ಜಗನ್ನಾಥ ಆರ್. ದೇಸಾಯಿ