ಬಿಲ್ ಪಾವತಿ: ಸ್ಪಷ್ಟನೆ
ರಾಯಚೂರು: ತಡೆರಹಿತ ವಿದ್ಯುತ್ ಸರಬರಾಜು ಮಾರ್ಗ ಅಳವಡಿಕೆ ಕಾಮಗಾರಿಗೆ ಸಂಬಂಧಿಸಿ ಜೆಸ್ಕಾಂ ಮತ್ತು ನಗರಸಭೆಯ ಅಧಿಕಾರಿಗಳು ನೀಡಿದ ಶಿಫಾರಸ್ಸಿನಂತೆ ಹಣ ಪಾವತಿಸಲಾಗಿದೆ. ಅದರಲ್ಲಿ ತಮ್ಮ ದೋಷವಿಲ್ಲ ಎಂದು ನಗರಸಭೆಯ ಈ ಹಿಂದಿನ ಪೌರಾಯುಕ್ತ ಹಾಗೂ ಹಾಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ತಿಮ್ಮಪ್ಪ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ತಮ್ಮ ವಿರುದ್ಧ ಸಂಘಟನೆಗಳು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅವರು, ಕಾಮಗಾರಿಯ ಉಸ್ತುವಾರಿ ವಹಿಸಲು ಜೆಸ್ಕಾಂ 6 ಲಕ್ಷ ಶುಲ್ಕ ಪಡೆದು ಕಾಮಗಾರಿ ಪೂರ್ಣಗೊಂಡ ಬಗ್ಗೆ ಮತ್ತು ತಡೆರಹಿತ ವಿದ್ಯುತ್ ಸರಬರಾಜಿಗೆ ದೃಢೀಕೃತ ಪ್ರಮಾಣ ಪತ್ರ ನೀಡಿದ್ದಾರೆ. ಅದೇ ರೀತಿ 2011ರ ನ. 26ರಂದು ಜೆಸ್ಕಾಂನ ಬಳ್ಳಾರಿ ವಿಭಾಗದ ತಾಂತ್ರಿಕ ಹಾಗೂ ಗುಣಮಟ್ಟ ನಿಯಂತ್ರಣ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಕಾಮಗಾರಿ ತೃಪ್ತಿಕರವಾಗಿದೆ ಎಂದು ದೃಢೀಕರಿಸಿದ್ದಾರೆ. 2012ರ ಡಿ.7ರಂದು ಎಂ.ಬಿ. ಪುಸ್ತಕದಲ್ಲಿ ಕಾಮಗಾರಿ ಪೂರ್ಣಗೊಂಡು ತೃಪ್ತಿಕರವಾಗಿದೆ ಎಂದು ನಗರಸಭೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮೋಹನರಾಜ್ ದೃಢೀಕರಿಸಿದ್ದಾರೆ. ಆಗಿನ ಶಾಸಕ ಸೈಯದ್ ಯಾಸೀನ್ ಅವರು ಹಾಗೂ ಗುಲ್ಬರ್ಗ ಮುಖ್ಯ ಅಭಿಯಂತರರು ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಈ ಅಂಶಗಳ ಆಧಾರದಲ್ಲಿ ಕಾಮಗಾರಿಯ ಮೊತ್ತ ಪಾವತಿಗೆ ಸೂಚಿಸಿದ್ದಾಗಿ ತಿಳಿಸಿದ್ದಾರೆ.