ಬೆಳಗ್ಗೆ ಪ್ರಾಥಮಿಕ ಶಾಲೆ, ರಾತ್ರಿ ಇಸ್ಪೀಟ್ ಅಡ್ಡೆ!
ಸಿಂಧನೂರು: ತಾಲೂಕಿನ ಅಮರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಅನೈತಿಕ ಚಟುವಟಿಕೆಗಳ ತಾಣ.
ಸಂಜೆ ತರಗತಿ ಮುಗಿದು ಶಾಲೆಗೆ ಬೀಗ ಹಾಕುವುದನ್ನೇ ಕಾಯುತ್ತಾ ಕುಳಿತುಕೊಳ್ಳುವ ಪುಂಡರು ಶಾಲಾ ಸಿಬ್ಬಂದಿ ಶಾಲೆಯಿಂದ ತುಸು ದೂರ ನಡೆಯುತ್ತಲೇ ತಮ್ಮ ಆಟ ಶುರುವಿಟ್ಟುಕೊಳ್ಳುತ್ತಿದ್ದಾರೆ. ಆವರಣದಲ್ಲಿ ಎಲ್ಲೆಂದರಲ್ಲಿ ಬಿದ್ದ ಇಸ್ಪೀಟ್ ಎಲೆಗಳು, ಮದ್ಯದ ಬಾಟಲಿಗಳೇ ಇದಕ್ಕೆ ತಾಜಾ ಉದಾಹರಣೆ.
ವಿದ್ಯಾರ್ಥಿಗಳು ಬೆಳಿಗ್ಗೆ ಶಾಲೆಗೆ ಆಗಮಿಸುತ್ತಿದ್ದಂತೆ ಪುಂಡರು ಮಾಡಿದ ಹೊಲಸನ್ನು ಎತ್ತಿಹಾಕಿ ಹಸನು ಮಾಡಬೇಕಾಗಿದೆ. ಶಾಲಾ ಆವರಣಕ್ಕೆ ಕಂಪೌಂಡ್ ಇಲ್ಲದೇ ಇರುವುದರಿಂದ ಮಹಿಳೆಯ ಬಯಲು ಶೌಚಾಲಯವಾಗಿ ಮಾರ್ಪಟ್ಟಿದೆ. ಸುತ್ತಮುತ್ತಲಿನ ಮನೆಗಳ ಮಹಿಳೆಯರು ಇಲ್ಲಿಯೇ ಬಹಿರ್ದೆಸೆಗೆ ಬರುವುದರಿಂದ ಆಟದ ಮೈದಾನ ಮತ್ತು ಕೊಠಡಿಯ ಆಜುಬಾಜು ಗಬ್ಬು ವಾಸನೆ. ಇದು ಮಕ್ಕಳ ಮನಸಿನ ಮೇಲೆ ಪರಿಣಾಮ ಬೀರುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಪೊಲೀಸ್ ದತ್ತು ಗ್ರಾಮ: ಅಮರಾಪುರ ಪೊಲೀಸ್ ಇಲಾಖೆಯ ದತ್ತು ಗ್ರಾಮವಾಗಿದ್ದರೂ ಖುಲ್ಲಂ..ಖುಲ್ಲಾ.. ಇಸ್ಪೀಟ್. ಅದು ಶಾಲಾ ಆವರಣದಲ್ಲಿಯೇ ನಡೆಯುತ್ತಿದ್ದರೂ ಗಮನಹರಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ. ಪುಂಡರ ಹಾವಳಿ ತಪ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.