ಸಮಚಿತ್ತದಿಂದ ಸವಾಲು ಎದುರಿಸಿ
ಸಿಂಧನೂರು: ವಿದ್ಯಾರ್ಥಿಗಳು ಸಮಚಿತ್ತದಿಂದ ಸವಾಲುಗಳನ್ನು ಎದುರಿಸುವ ಮೂಲಕ ಗುರಿ ಸಾಧಿಸುವಂತೆ ಪತ್ರಕರ್ತ ಡಿ.ಎಚ್. ಕಂಬಳಿ ಕರೆ ನೀಡಿದರು.
ನಗರದ ಅಂಬೇಡ್ಕರ್ ಹಾಸ್ಟೆಲ್ನಲ್ಲಿ ಅಂಬೇಡ್ಕರ್ 57ನೇ ಪರಿನಿರ್ವಾಣ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸೇವಾ ವಲಯಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಹಿಡಿತ ಹೆಚ್ಚುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಸರ್ಕಾರಿ ಉದ್ಯೋಗಗಳು ಮತ್ತಷ್ಟು ಇಳಿಮುಖವಾಗಲಿವೆ. ಇದು ಪರೋಕ್ಷವಾಗಿ ಶೋಷಿತ ಸಮುದಾಯದ ಮೇಲೆ ಪರಿಣಾಮ ಬೀರುತ್ತದೆ. ಖಾಸಗಿ ವಲಯಗಳಲ್ಲಿಯೂ ಮೀಸಲಾತಿ ನೀಡುವ ವ್ಯವಸ್ಥೆ ಬರಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೆ.ಆರ್.ಎಸ್. ಜಿಲ್ಲಾಧ್ಯಕ್ಷ ಎಚ್.ಎನ್. ಬಡಿಗೇರ ಮಾತನಾಡಿದರು. ಮನುಜಮತ ಬಳಗದ ಗೌರವ ಅಧ್ಯಕ್ಷ ವೈ. ನರೇಂದ್ರನಾಥ, ಪತಂಜಲಿ ಯೋಗ ಸಮಿತಿ ರಾಜ್ಯ ಯುವ ಪ್ರಭಾರಿ ಎಂ. ಭಾಸ್ಕರ್ ಮಾತನಾಡಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣಾಧಿಕಾರಿ ರಮೇಶ ಮಾತನಾಡಿದರು. ಶಿಕ್ಷಕ ಕೊಟ್ರೇಶ.ಬಿ, ಬಸವರಾಜ ಹಳ್ಳಿ ಹಸಮಕಲ್ ಉಪಸ್ಥಿತರಿದ್ದರು.