ಸಾಂಕ್ರಾಮಿಕ ರೋಗ ಭೀತಿಯಲ್ಲಿ ಮೂಡಲದಿನ್ನಿ ಜನ
ಕ.ಪ್ರ.ವಾರ್ತೆ ಮುದಗಲ್ ಡಿ. 10
ಸರ್ಕಾರದ ಅನುದಾನಕ್ಕಿಲ್ಲ ಕೊರತೆ ಆದರೂ ಗ್ರಾಪಂ ವ್ಯಾಪ್ತಿಯಲ್ಲಿನ ಕೆಲ ಗ್ರಾಮಗಳಲ್ಲಿ ಸೌಲಭ್ಯಗಳೆಲ್ಲಾ ಮರೀಚಿಕೆ. ಇದಕ್ಕೆ ಕನ್ನಾಳ ಗ್ರಾಪಂಗೆ ವ್ಯಾಪ್ತಿಯ ಮೂಡಲದಿನ್ನಿ ಗ್ರಾಮದ ರಸ್ತೆಗಳೇ ಸಾಕ್ಷಿಯಾಗಿವೆ.
ಸುಮಾರು ಒಂದು ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿನ ಮುಖ್ಯ ರಸ್ತೆಗಳೇ ಚರಂಡಿಗಳಾಗಿ ಮಾರ್ಪಟ್ಟಿವೆ. ಗ್ರಾಪಂ ಸದಸ್ಯರು ಗ್ರಾಪಂ ಸಭೆಯಲ್ಲಿ ಹಲವಾರು ಬಾರಿ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಇಂತಹ ಅವ್ಯವಸ್ಥೆಯನ್ನು ಕಂಡೂ ಕಾಣದವರಂತೆ ಗ್ರಾಪಂ ಕಾರ್ಯನಿರ್ವಹಿಸುತ್ತಿರುವುದು ವಿಪರ್ಯಾಸವೇ ಸರಿ. ಗ್ರಾಮ ಸಭೆಗಳಲ್ಲಿ ಕೂಡ ಗ್ರಾಮಸ್ಥರು ಗ್ರಾಮದ ಅಭಿವೃದ್ಧಿಗೆ ಗಮನ ಹರಿಸುತ್ತಿಲ್ಲವೆಂದು ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ಯಾರೇ ಎನ್ನುತ್ತಿಲ್ಲ.
ಮುಖ್ಯರಸ್ತೆಯ ಮುಂದೆಯೇ ಅಂಗನವಾಡಿ ಕೇಂದ್ರವಿದ್ದು, ಬಾಲ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮಕ್ಕಳ ಶಿಕ್ಷಣ ಕುಂಠಿತವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಬದುಕುವ ಪರಿಸ್ಥಿತಿ ಎದುರಾಗಿದೆ ಎಂದು ಅಲ್ಲಿನ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕೂಡಲೇ ಗ್ರಾಪಂ ಇತ್ತ ಕಡೆ ಗಮನ ಹರಿಸಿ ಗ್ರಾಮದ ಸ್ವಚ್ಛತೆಗೆ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.