ಸುದ್ದಿ ಸಂಕ್ಷೇಪ
ನಿಲ್ಲದ ಅಕ್ರಮ ಮರಳು ಸಾಗಾಣಿಕೆ
ಸಿಂಧನೂರು: ನಗರದ ಬಪ್ಪೂರು ಹಳ್ಳ ಹಾಗೂ ಹಿರೇಹಳ್ಳದ ಸುಕಾಲಪೇಟೆಯ ಭಾಗದಲ್ಲಿ ಎಗ್ಗಿಲ್ಲದೆ ಅಕ್ರಮ ಮರಳು ದಂಧೆ ಮುಂದುವರೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈಚೆಗೆ ತಹಸೀಲ್ದಾರ್ ದಾಳಿ ಮಾಡಿ ಕೆಲವು ಟ್ರ್ಯಾಕ್ಟರ್ಗಳನ್ನು ವಶಪಡಿಸಿಕೊಂಡು ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮರಳು ಸಾಗಾಣಿಕೆದಾರರ ಮೇಲೆ ಮಾತ್ರ ಕೇಸ್ ದಾಖಲಿಸಲಾಗಿದೆ. ಆದರೆ ನಗರ ಪ್ರದೇಶದಲ್ಲಿ ಹಲವು ದಿನಗಳಿಂದ ಅಧಿಕಾರಿಗಳ ಕಣ್ಣ ಮುಂದೆ ಪ್ರತಿನಿತ್ಯ ಟ್ರ್ಯಾಕ್ಟರ್ ಮೂಲಕ ದಂಧೆಕೋರರು ಹೇರಳ ಪ್ರಮಾಣದಲ್ಲಿ ಉಸುಕು ಸಾಗಿಸುತ್ತಿದ್ದಾರೆ. ಅವರ ಮೇಲೆ ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕಂದಾಯ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಟ್ರ್ಯಾಕ್ಟರ್ ಮಾಲೀಕರೊಂದಿಗೆ ಕೈಮಿಲಾಯಿಸಿ ಅನೈತಿಕ ಒಪ್ಪಂದ ಮಾಡಿಕೊಂಡು, ಉಸುಕು ಸಾಗಾಣಿಕೆಗೆ ಅನುವು ಮಾಡಿಕೊಟ್ಟಿದ್ದಾರೆಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಟೆಂಡರ್ ಕರೆಯದೆ ನೈಸರ್ಗಿಕ ಸಂಪನ್ಮೂಲಗಳ ಲಾಭ ಪಡೆಯುವುದು ಶಿಕ್ಷಾರ್ಹ ಅಪರಾಧ. ಆದರೆ ಈ ಕಾನೂನು ಸಿಂಧನೂರಿಗೆ ಅನ್ವಯಿಸದಂತೆ ಕಾಣುತ್ತಿಲ್ಲ ಎಂಬುದು ಅಧಿಕಾರಿಗಳ ಧೋರಣೆಯೇ ಸಾಕ್ಷಿಯಾಗಿದೆ. ಆ ಮೂಲಕ ಸರ್ಕಾರದ ಕಣ್ಣಿಗೆ ಮಣ್ಣೆರಚಿ ನಷ್ಟವನ್ನುಂಟು ಮಾಡುವ ಕಾರ್ಯ ವ್ಯವಸ್ಥಿತವಾಗಿ ನಡೆದಿದೆ. ಕಾರಣ ಸಂಬಂಧಪಟ್ಟ ಮೇಲಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬೇಕಿದೆ.