16ರಂದು ನಗರಸಭೆಗೆ ಮುತ್ತಿಗೆ
ಕ.ಪ್ರ.ವಾರ್ತೆ, ರಾಯಚೂರು, ಡಿ. 11
ನಗರಸಭೆಯ ಶೇ.22.75ರ ಅನುದಾನದ ದುರ್ಬಳಕೆ, ಕಾನೂನು ಬಾಹಿರವಾಗಿ ನಿರ್ಮಿಸುತ್ತಿರುವ ಬಹುಮಹಡಿ ಕಟ್ಟಡಗಳ ವಿರುದ್ಧ ಕ್ರಮ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಿ.16ರಂದು ನಗರಸಭೆಗೆ ಮುತ್ತಿಗೆ ಹಾಕಲಾಗುತ್ತಿದೆ ಎಂದು ವಿವಿಧ ಸಂಘಟನೆಗಳ ಪ್ರಮುಖರು ಜಿಲ್ಲಾ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಬುಧವಾರ ಜಿಲ್ಲಾ ಎಸ್ಪಿ ಎಂ.ಎನ್. ನಾಗರಾಜ್ ಅವರನ್ನು ನಿಯೋಗದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿರುವ ಸಂಘಟನೆಯ ಪ್ರಮುಖರು, ಕಳೆದ ಮೂರು ವರ್ಷಗಳಿಂದ ನಗರದ ಜನತೆ ಹಿತ ಕಾಪಾಡುವ ಉದ್ದೇಶದಿಂದ ಹಾಗೂ ಸರ್ಕಾರದಿಂದ ಬಿಡುಗಡೆಯಾದ ಅನುದಾನದ ಸದ್ಬಳಕೆ ನಿಟ್ಟಿನಲ್ಲಿ ಸಂಘಟನೆಗಳು ಹೋರಾಡುತ್ತಿವೆ.
ಸರ್ಕಾರ ಸೂಚನೆ ಲೆಕ್ಕಕ್ಕಿಲ್ಲ: ಅದರ ಫಲವಾಗಿ ನಗರಸಭೆಯಲ್ಲಿ ಅನುದಾನ ದುರ್ಬಳಕೆ ಮಾಡಿಕೊಂಡಿರುವ ಹಿಂದಿನ ಪೌರಾಯುಕ್ತರಾಗಿದ್ದ ತಿಪ್ಪೇಶ್, ರಾಧಾಕೃಷ್ಣ ಮದನಕರ್, ಎಂ.ತಿಮ್ಮಪ್ಪ ಹಾಗೂ ಎಇಇ ಮಲ್ಲಿಕಾರ್ಜುನ ಗೋಪಶೆಟ್ಟಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸರ್ಕಾರ ಸೂಚಿಸಿದೆ ಎಂದರು.
ಸರ್ಕಾರದ ಸೂಚನೆಯ ಹೊರತಾಗಿಯೂ ಈವರೆಗೆ ತಪ್ಪಿತಸ್ಥರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಹಾಲಿ ಪೌರಾಯುಕ್ತರಿಗೆ ಸರ್ಕಾರದಿಂದ ಸೂಚನೆ ಬಂದಿದ್ದರೂ ಅವರು ಕಾಲಹರಣ ಮಾಡುತ್ತಿದ್ದಾರೆ. ದೂರು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆಂದು ಆರೋಪಿಸಿದರು.
ಡಿಸಿ ಹೇಳಿಕೆಗೆ ಖಂಡನೆ: ಭ್ರಷ್ಟಾಚಾರ ತಡೆಯುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಪ್ರಮುಖ ಸಂಘಟನೆಗಳ ನಾಯಕರು ಹೋರಾಟ ನಡೆಸುತ್ತಿದ್ದು, ಸಂಘಟನೆಗಳ ಕುರಿತು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅವರು ವಸೂಲಿ ಸಂಘಟನೆಗಳು ಎಂದು ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ದೂರಿದರು. ಜಿಲ್ಲಾ ಎಸ್ಪಿ ಎಂ.ಎನ್. ನಾಗರಾಜ್ ಪ್ರತಿಕ್ರಿಯಿಸಿ ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚಿಸಲಾಗುತ್ತದೆ. ನಂತರ ಹೋರಾಟಕ್ಕೆ ಅನುಮತಿ ನೀಡುವ ಬಗ್ಗೆ ಇಲಾಖೆ ನಿರ್ಧರಿಸಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಅಂಬಣ್ಣ ಅರೋಲಿಕರ್, ಜೆ.ಬಿ. ರಾಜು, ರವೀಂದ್ರನಾಥ ಪಟ್ಟಿ, ನರಸಪ್ಪ ದಂಡೋರಾ, ಶಿವುಕುಮಾರ್ ಯಾದವ್, ಅಶೋಕಕುಮಾರ್ ಜೈನ್, ರಾಜು ಪಟ್ಟಿ, ಹೇಮರಾಜ ಅಸ್ಕಿಹಾಳ ಸೇರಿ ಅನೇಕರಿದ್ದರು.