ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿ
ಸಿಂಧನೂರು: ಶಿವಾ ಇಂಟರ್ ನ್ಯಾಷನಲ್ ಕರಾಟೆ ಅಸೋಸಿಯೇಶನ್ನಿಂದ ಡಿ.21 ಹಾಗೂ 22ರಂದು ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ಎಂ.ಶಂಕರ ಹೇಳಿದರು.
ನಗರದ ಶಾದಿಮಹಲ್ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು, ಮಾನಸಿಕ, ದೈಹಿಕ ಹಿಂಸೆಗಳು ನಡೆಯುತ್ತಿವೆ. ಇವುಗಳನ್ನು ತಡೆಗಟ್ಟಲು ಮತ್ತು ತಮ್ಮ ರಕ್ಷಣೆಗಾಗಿ ಕರಾಟೆಯನ್ನು ಕಲಿಯಬೇಕು. ಇದರಿಂದ ಅವರು ನಿರ್ಭೀತರಾಗಿ ಬದುಕಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ತಮ್ಮ ಸಂಸ್ಥೆ ಮಹಿಳೆಯರಿಗಾಗಿ ಕರಾಟೆ ಶಿಬಿರಗಳನ್ನು ನಡೆಸುತ್ತಿದೆ ಎಂದರು.
21ರಂದು ಬೆ.10.30ಕ್ಕೆ ಶಾದಿ ಮಹಲ್ನಲ್ಲಿ ಪಂದ್ಯಾವಳಿ ಉದ್ಘಾಟನೆಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಶಾಸಕ ಹಂಪನಗೌಡ ಬಾದರ್ಲಿ, ನಗರಸಭಾಧ್ಯಕ್ಷ ಜಾಫರ್ ಜಾಗೀರದಾರ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಪಾಲ್ಗೊಳ್ಳುವರು.
ಎರಡು ದಿನಗಳ ಕಾಲ ನಡೆಯುವ ಪಂದ್ಯಾವಳಿಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿದಂತೆ ಆಂಧ್ರಪ್ರದೇಶ, ಕೇರಳ, ಚೆನ್ನೈ, ಒರಿಸ್ಸಾ ಮತ್ತಿತರ ರಾಜ್ಯಗಳ ಕರಾಟೆ ಪಟುಗಳು, ವಿವಿಧ ರಾಜ್ಯಗಳ ಕರಾಟೆ ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಳ್ಳುವರು. ಪಂದ್ಯಾವಳಿಗಳಲ್ಲಿ ಜಿಲ್ಲೆಯಿಂದ ಹೆಚ್ಚು ಕರಾಟೆ ಪಟುಗಳು ಭಾಗವಹಿಸಬೇಕೆಂದು ವಿನಂತಿಸಿದ್ದಾರೆ.
---
ಜ.5ರಂದು ಮಕ್ಕಳ ಹಬ್ಬ ಕಾರ್ಯಕ್ರಮ
ರಾಯಚೂರು: ನಗರದ ಕಲಾ ಸಂಕುಲ ಸಂಸ್ಥೆ ಮತ್ತು ಪ್ರಾರ್ಥನಾ ಎಜುಕೇಷನಲ್ ಟ್ರಸ್ಟ್ ನಿಂದ ಜ.5ರಂದು ಜಿಲ್ಲಾ ಮಟ್ಟದ ಮಕ್ಕಳ ಹಬ್ಬ ಹಮ್ಮಿಕೊಂಡಿದ್ದು, ಈ ಸಮಾರಂಭದಲ್ಲಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ನಗರದಲ್ಲಿ ಮೊದಲ ಬಾರಿಗೆ ಮಕ್ಕಳ ಹಬ್ಬ ಆಯೋಜಿಸುತ್ತಿದ್ದು 3 ವರ್ಷದಿಂದ 12 ವರ್ಷದ ಮಕ್ಕಳಿಗೆ ಗೀತಗಾಯನ, ಸಿನಿಮಾ ನೃತ್ಯ, ಸಂಗೀತ, ಮಿಮಿಕ್ರಿ, ಭರತನಾಟ್ಯ ಸೇರಿದಂತೆ ನಾಡಿನ ಸಾಂಸ್ಕೃತಿಕ ಕಲೆಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಉತ್ತಮ ಪ್ರದರ್ಶನ ನೀಡುವ ಮಕ್ಕಳಿಗೆ ಟ್ಯಾಲೆಂಟ್ ಅವಾರ್ಡ್ ಪ್ರದಾನ ಮಾಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಆಸಕ್ತ ಮಕ್ಕಳು ಕಲಾ ಪ್ರದರ್ಶನ ನೀಡಲು ಅರ್ಜಿಗಳನ್ನು ಸಲ್ಲಿಸಲು ಡಿ.28 ಕಡೆಯ ದಿನವಾಗಿದೆ. ಅರ್ಜಿಗಳನ್ನು ಅದೋನಿ ಲಕ್ಷ್ಮಮ್ಮ ಪ್ರಾಥಮಿಕ ಶಾಲೆ, ಬಸವನಭಾವಿ ವೃತ್ತ, ಗಂಜ್ ರಸ್ತೆ, ರಾಯಚೂರು ಇಲ್ಲಿಗೆ ಸಂಪರ್ಕಿಸಲು ಕಲಾ ಸಂಕುಲ ಸಂಸ್ಥೆಯ ಕಾರ್ಯದರ್ಶಿ ಮಾರುತಿ ಬಡಿಗೇರ್ ತಿಳಿಸಿದ್ದಾರೆ.