ಡಾಂಬರೀಕರಣಕ್ಕೆ ಆಗ್ರಹ
ಸಿಂಧನೂರು: ಗಾಂಧಿ ಸರ್ಕಲ್‌ನಿಂದ ಅಗ್ನಿಶಾಮಕ ಠಾಣೆವರೆಗೆ ರಸ್ತೆ ಡಾಂಬರೀಕರಣಗೊಳಿಸಿ ಧೂಳು ನಿಯಂತ್ರಿಸುವಂತೆ ಆಗ್ರಹಿಸಿ ನಗರಾಭಿವೃದ್ಧಿ ಹೋರಾಟ ಸಮಿತಿಯಿಂದ ಡಿಸೆಂಬರ್ 17ರಂದು ನಗರದಲ್ಲಿ ರಸ್ತೆತಡೆ ನಡೆಸಲಾಗುವುದು ಎಂದು ಸಮಿತಿ ಪ್ರಧಾನ ಸಂಚಾಲಕ ಹನುಮನಗೌಡ ಬೆಳಗುರ್ಕಿ ತಿಳಿಸಿದರು.
ಬಸವ ಪ್ರಸಾದ ನಿಲಯದಲ್ಲಿ ನಡೆದ ಸಮಿತಿ ಸಭೆಯಲ್ಲಿ ಮಾತನಾಡಿ, ನಗರಸಭೆ ಸಭಾಂಗಣದಲ್ಲಿ ನವೆಂಬರ್ 17ರಂದು ಜಿಲ್ಲಾಧಿಕಾರಿ ಮತ್ತು ಶಾಸಕ ಹಂಪನಗೌಡ ಬಾದರ್ಲಿ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ತಾತ್ಕಾಲಿಕ ಹಾಗೂ ಶಾಶ್ವತ ಪರಿಹಾರದ ಹಕ್ಕೊತ್ತಾಯಗಳನ್ನು ಸಮಿತಿ ಮುಂದಿಟ್ಟಿತ್ತು. ಪ್ರಮುಖವಾಗಿ ಕುಷ್ಟಗಿ ರಸ್ತೆಯನ್ನು ಧೂಳುಮುಕ್ತಗೊಳಿಸಲು ಡಾಂಬರ್ ಹಾಕುವಂತೆ ಒತ್ತಾಯಿಸಲಾಗಿತ್ತು. ಜಿಲ್ಲಾಧಿಕಾರಿ ಹಾಗೂ ಶಾಸಕ ಹಂಪನಗೌಡ ಪ್ರತಿಕ್ರಿಯಿಸಿ ನಿಗದಿತ ಸಮಯದಲ್ಲಿ ಕಾರ್ಯ ಮುಗಿಸುವುದಾಗಿ ಆಶ್ವಾಸನೆ ನೀಡಿದ್ದರು.
ವಿವಿಧ ವಾರ್ಡ್‌ಗಳಿಗೆ ಮೊರಂ ಹಾಕಿದ್ದು ಹೊರತುಪಡಿಸಿ ಪ್ರಮುಖ ರಸ್ತೆಗಳಿಗೆ ಬೇಕಾಬಿಟ್ಟಿ ಪ್ಯಾಚಪ್ ಕಾರ್ಯ ನಡೆಸಲಾಗಿದೆ. ಗಾಂಧಿಸರ್ಕಲ್‌ನಿಂದ ಅಗ್ನಿಶಾಮಕ ದಳದವರೆಗಿನ ರಸ್ತೆ ದುರಸ್ತಿ ಕೆಲಸವನ್ನು ಶಾಸಕರ ಕಾರ್ಯಾಲಯದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಕೆಎಸ್‌ಆರ್‌ಡಿಸಿಎಲ್‌ನ ಅಧಿಕಾರಿ ಶಿವಯೋಗಿ ಡೊಳ್ಳಿನ್ ಅವರು ಡಿಸೆಂಬರ್ 1ರ ಒಳಗಾಗಿ ಡಾಂಬರ್ ಹಾಕುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸಮಿತಿ ನವೆಂಬರ್ 21ರಂದು ಕರೆ ನೀಡಿದ್ದ ಬಂದ್‌ನ್ನು ತಾತ್ಕಾಲಿಕವಾಗಿ ವಾಪಸ್ಸು ಪಡೆಯಲಾಗಿತ್ತು. ಶಾಸಕರ ಸಮ್ಮುಖದಲ್ಲಿ ಅಧಿಕಾರಿಗಳು ನೀಡಿದ ಭರವಸೆ ಹುಸಿಯಾಗಿದ್ದು, ಕಾರಣ ನಗರಾಭಿವೃದ್ಧಿ ಸಮಿತಿ ಡಿಸೆಂಬರ್ 17ರಂದು ಬೆಳಿಗ್ಗೆ 9 ಗಂಟೆಯಿಂದ ನಗರದ ಗಾಂಧೀಸರ್ಕಲ್‌ನಲ್ಲಿ ಸಂಜೆ 5 ಗಂಟೆಯವರೆಗೆ ರಸ್ತೆತಡೆ ಚಳವಳಿಯನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಸಂಪರ್ಕ ಸಂಚಾಲಕ ಡಿ.ಎಚ್. ಕಂಬಳಿ, ಸಂಚಾಲಕರಾದ ಎಚ್.ಎನ್. ಬಡಿಗೇರ, ವೀರಭದ್ರಪ್ಪ ಕುರುಕುಂದಿ, ಬಸವರಾಜ ಬಾದರ್ಲಿ, ಎಸ್. ದೇವೇಂದ್ರಗೌಡ, ಎಸ್. ಗುರಿಕಾರ, ಗುಂಡಪ್ಪ ಬಳಿಗಾರ, ನಾಗರಾಜ ಬೊಮ್ಮನಾಳ, ಬಸವರಾಜಕೋಟೆ, ಸಮ್ಮದ್ ಚೌದ್ರಿ, ಯಾಕೂಬ್ ಅಲಿ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.