ವಜ್ಜಲ್ ವಿರುದ್ಧ ಅಸ್ಪೃಶ್ಯ ಸಮಾಜ ಗರಂ
ಕ.ಪ್ರ.ವಾರ್ತೆ, ರಾಯಚೂರು, ಡಿ. 11
ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೆ ಲಿಂಗಸ್ಗೂರು ಶಾಸಕ ಮಾನಪ್ಪ ವಜ್ಜಲ್ ಬೆಳಗಾವಿ ಅಧಿವೇಶನದಲ್ಲಿ ವಿರೋಧಿಸಿದ ರೀತಿ ವಿವಾದಕ್ಕೆ ದಾರಿ ಮಾಡಿದ್ದು, ಶಾಸಕರು ವರದಿಯ ಶಿಫಾರಸು ಟೀಕಿಸಿದ ಪರಿಗೆ ರಾಜ್ಯ ಅಸ್ಪೃಶ್ಯ ಸಮಾಜ ಮಹಾಸಭಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಜಿಲ್ಲಾಧ್ಯಕ್ಷ ಪಿ. ಲಕ್ಷ್ಮಣ ಸೀತಿಮಠ ಮಾತನಾಡಿ, ಲಿಂಗಸ್ಗೂರು ಶಾಸಕ ಮಾನಪ್ಪ ವಜ್ಜಲ್ ಅವರು ಅಧಿವೇಶನದಲ್ಲಿ ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೆ ಸಂಬಂಧಿಸಿದ ಚರ್ಚೆಯ ವೇಳೆ ವರದಿ ಜಾರಿಯಾದರೆ ರಕ್ತಪಾತವಾಗುತ್ತದೆಂದು ಹೇಳುವ ಮೂಲಕ ಸದನದ ಘನತೆಗೆ ಕುಂದುಂಟು ಮಾಡಿದ್ದಾರೆಂದು ಟೀಕಿಸಿದರು.
ಶಾಸಕ ವಜ್ಜಲ್ ಅವರ ವರ್ತನೆಯು ಅಸಂವಿಧಾನಿಕ ಮತ್ತು ರಾಜದ್ರೋಹವಾಗುತ್ತದೆ. ಪ್ರಜಾಪ್ರಭುತ್ವವಿರೋಧಿ ವರ್ತನೆ ಪ್ರದರ್ಶಿಸಿದ್ದಾರೆ. ಅವರ ವರ್ತನೆ ವಿರುದ್ಧ ಸದನ ಸಮಿತಿಯಿಂದ ತನಿಖೆ ನಡೆಸಿ ಶಾಸಕ ಸ್ಥಾನದಿಂದ ಅವರನ್ನು ಅನರ್ಹಗೊಳಿಸಬೇಕೆಂದು ಒತ್ತಾಯಿಸಿದರು.
ಮೀಸಲಾತಿ ಕಬಳಿಕೆ: 1944ರಲ್ಲಿ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ವಡ್ಡರ ಸಮಾಜದ ಸಮಾವೇಶದಲ್ಲಿ ಆಗಿನ ಮೈಸೂರು ಸರ್ಕಾರದ ಆಡಳಿತಕ್ಕೆ ಮಾಡಿಕೊಂಡ ಮನವಿ ಹಿನ್ನೆಲೆ ಅಂದಿನಿಂದ ವಡ್ಡರ ಸಮಾಜವನ್ನು ಬೋಯಿ ಎಂದು ಕರೆಯಲು ಆದೇಶ ಹೊರಡಿಸಲಾಯಿತು. ಆನಂತರದಲ್ಲಿ ಮೀಸಲಾತಿ ಲಾಭ ಪಡೆಯುವ ಉದ್ದೇಶದಿಂದ ಬೋಯಿ ಜನಾಂಗಕ್ಕೆ ಸೇರಿದವರು ಭೋವಿ ಎಂದು ಪ್ರಮಾಣ ಪತ್ರ ಪಡೆಯುವ ಮೂಲಕ ಪರಿಶಿಷ್ಟ ಜಾತಿಯ ಮೀಸಲಾತಿ ಕಬಳಿಸಿದ್ದಾರೆಂದು ಆರೋಪಿಸಿದರು.
ಮೂಲ ಭೋವಿ ಜನಾಂಗದವರು ರಾಜರ ಕಾಲದಲ್ಲಿ ಮೇಣೆಗಳನ್ನು ಹೊತ್ತು ಸಾಗುವ ಕಾಯಕ ಮಾಡುತ್ತಿದ್ದರು. ಆದರೆ, ಭೋವಿ ಎಂದು ಸದ್ಯ ಹೇಳಿಕೊಳ್ಳುತ್ತಿರುವವರಿಗೆ ಅಂಥ ಯಾವುದೇ ಮೂಲ ಕಾಯಕವಿಲ್ಲ. ಬದಲಿಗೆ ಮಣ್ಣು ವಡ್ಡ, ಬಂಡಿ ವಡ್ಡರ, ಕಲ್ಲು ವಡ್ಡರ ಎಂಬವರು ಸೇರಿ ಭೋವಿ ಎಂದು ಕರೆಯಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಸೂಕ್ತ ದಾಖಲೆ ಶಾಸಕ ಮಾನಪ್ಪ ವಜ್ಜಲ್ ಪ್ರದರ್ಶಿಸಲಿ ಎಂದು ಸವಾಲು ಹಾಕಿದರು.
1979ಕ್ಕೂ ಮುಂಚೆ ಬಿಸಿಎಂ ಎ ಕೆಟಗರಿಯಲ್ಲಿದ್ದ ವಡ್ಡರ ಸಮಾಜವು ಆನಂತರದಲ್ಲಿ ಎಸ್ಸಿ ಜಾತಿಗೆ ಸೇರ್ಪಡೆಗೊಂಡಿರುವುದಾಗಿ ಹೇಳಿಕೊಳ್ಳುತ್ತಿದ್ದು, ರಾಷ್ಟ್ರಪತಿಗಳು ಈ ಬಗ್ಗೆ ಅಂಕಿತ ಹಾಕಿದ ಆದೇಶ ಹೊರಡಿಸಿದ್ದಾರೆಯೇ ಎಂಬುದನ್ನು ಶಾಸಕರು ಸಾರ್ವಜನಿಕರಿಗೆ ಮಾಹಿತಿ ಒದಗಿಸಬೇಕಿದೆ ಎಂದು ಆಗ್ರಹಿಸಿದರು.
ಹೋರಾಟ ನಡೆಸಿಲ್ಲ: ದಲಿತರೊಂದಿಗೆ ಮೀಸಲಾತಿ ಹಂಚಿಕೊಳ್ಳುತ್ತಿರುವ ವಡ್ಡರ ಸಮಾಜದವರು ಎಂದಿಗೂ ದಲಿತರ ಮೇಲೆ ದೌರ್ಜನ್ಯದ ಸಂದರ್ಭ ದಲಿತರ ಪರವಾಗಿ ನಿಲವು ತಳೆದು ಹೋರಾಟಕ್ಕಿಳಿದಿಲ್ಲ. ಶಾಸಕ ಮಾನಪ್ಪ ವಜ್ಜಲ್ ಅವರು ಎಂದಿಗೂ ದಲಿತರ ಪರ ಧ್ವನಿ ಎತ್ತಿಲ್ಲ ಎಂದು ಟೀಕಿಸಿದರು.
ರಾಜ್ಯದ ಎಲ್ಲಿಯೂ ವಡ್ಡರ ಸಮಾಜದವರು ದಲಿತರಂತೆ ದೇವಸ್ಥಾನಕ್ಕೆ ಬಹಿಷ್ಕಾರ, ಪ್ರತ್ಯೇಕ ಕುಡಿಯುವ ನೀರಿನ ವ್ಯವಸ್ಥೆ ಹೊಂದಿ ಬದುಕು ಸಾಗಿಸಿಲ್ಲ ಎಂದು ಟೀಕಿಸಿದ ಅವರು, ವಡ್ಡರ ಸಮಾಜಕ್ಕೆ ಸೇರಿದ ಅನೇಕ ಮುಖಂಡರು ಲಿಂಗಸ್ಗೂರು ಮತ್ತು ರಾಯಚೂರುಗಳಲ್ಲಿ ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೆ ವಿರೋಧಿಸಿ ಹೇಳಿಕೆ ನೀಡಿದ್ದು ಸಮಂಜಸವಲ್ಲ ಎಂದರು.
ಸಂಘಟನೆಯ ಪ್ರಮುಖರಾದ ರವಿಕುಮಾರ್, ಭೀಮಣ್ಣ, ನರಸಿಂಹಲು ಸೇರಿ ಅನೇಕರಿದ್ದರು.