ಸಮಗ್ರ ತನಿಖೆಗೆ ಆಗ್ರಹ
ರಾಯಚೂರು: ನಗರದ ಲಕ್ಷಾಂತರ ನಿವಾಸಿಗಳಿಗೆ ಸಮರ್ಪಕ ಕುಡಿವ ನೀರೊದಗಿಸುವ ಉದ್ದೇಶದಿಂದ ಜಾರಿಗೆ ತರಲು ರೂಪಿಸಿದ್ದ ತಡೆರಹಿತ ವಿದ್ಯುತ್ ಮಾರ್ಗ ಅಳವಡಿಕೆ ಕಾಮಗಾರಿಯಲ್ಲಿ 53.42 ಲಕ್ಷ ಅಕ್ರಮ ನಡೆದಿರುವುದು ಜಿಲ್ಲೆಯ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರ ಆಡಳಿತ ವೈಫಲ್ಯವನ್ನು ಬಿಂಬಿಸುತ್ತದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಆರೋಪಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘದ ಅಧ್ಯಕ್ಷ ಮಹೆಬೂಬ್ ಪಾಷಾ ಮೂಲಿಮನಿ, ಜಿಲ್ಲಾಡಳಿತದ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಅಕ್ರಮದಲ್ಲಿ ಶಾಮೀಲಾಗಿರುವುದು ಜಿಲ್ಲೆಯ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳ ನೈತಿಕ ಸ್ಥಿರತೆಯನ್ನು ಸಾರ್ವಜನಿಕರು ಪ್ರಶ್ನಿಸುವಂತೆ ಮಾಡಿದೆ ಎಂದು ಟೀಕಿಸಿದ್ದಾರೆ.
ಪ್ರಕರಣದ ತನಿಖೆ ಪೊಲೀಸರಿಗೆ ಒಪ್ಪಿಸಿ: ತಡೆರಹಿತ ವಿದ್ಯುತ್ ಮಾರ್ಗದ ಅಳವಡಿಕೆಯ ಕಾಮಗಾರಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸಿ ಸಹಾಯಕ ಆಯುಕ್ತರು ಸಲ್ಲಿಸಿರುವ ವರದಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ಮುಂದಿನ ದಿನಗಳಲ್ಲಿ ಇಂಥ ಅಕ್ರಮಗಳಿಗೆ ಕಡಿವಾಣ ಹಾಕಲು ಹಾಗೂ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಇಡೀ ಪ್ರಕರಣದ ತನಿಖೆಯನ್ನು ಪೊಲೀಸರಿಗೆ ಒಪ್ಪಿಸಬೇಕು. ವೈಫಲ್ಯಕ್ಕೆ ಸಂಬಂಧಿಸಿ ಇಲಾಖಾ ತನಿಖೆಯನ್ನೂ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಅಕ್ರಮ ನಡೆಯಲು ಕಾರಣವಾಗಿರುವಂಥ ಅಧಿಕಾರಿಗಳು ಜಿಲ್ಲೆಯ ಉನ್ನತ ಸ್ಥಾನದಲ್ಲಿದ್ದು, ನಿಷ್ಪಕ್ಷಪಾತ ತನಿಖೆಯಾಗುವವರೆಗೆ ಹಾಗೂ ತನಿಖೆಯು ಯಾವುದೇ ರೀತಿಯ ಪ್ರಭಾವಕ್ಕೆ ಒಳಗಾಗದಂತೆ ಸಂಬಂಧಿಸಿದ ಅಧಿಕಾರಿಗಳನ್ನೂ ಆ ಹುದ್ದೆಗಳಿಂದ ದೂರವಿರಿಸಲು ಒತ್ತಾಯಿಸಿದ್ದಾರೆ.