16ರಂದು ಜಿಲ್ಲಾದ್ಯಂತ ಅನಿರ್ದಿಷ್ಟ ಧರಣಿ
ಸಿಂಧನೂರು: ರಾಯಚೂರು ಜಿಲ್ಲೆಯ ಬಿಎಸ್ಎನ್ಎಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಕಾರ್ಮಿಕರನ್ನು ಕಾನೂನು ಬಾಹಿರವಾಗಿ ಕೆಲಸದಿಂದ ವಜಾಗೊಳಿಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಹಾಗೂ ಡಿ.15ರ ಒಳಗಾಗಿ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಡಿಸೆಂಬರ್ 16ರಂದು ಅನಿರ್ದಿಷ್ಟ ಧರಣಿ ನಡೆಸಲಾಗುವುದು ಎಂದು ಸಮಿತಿಯ ಗೌರವಾಧ್ಯಕ್ಷ ಶೇಕ್ಷಾಖಾದ್ರಿ ಪ್ರಾದೇಶಿಕ ಆಯುಕ್ತರಿಗೆ ಮನವಿ ನೀಡಿ ಒತ್ತಾಯಿಸಿದ್ದಾರೆ.
ಬಿಎಸ್ಎನ್ಎಲ್ನ ಅಧಿಕಾರಿಗಳಾದ ಪ್ರಹ್ಲಾದಾಚಾರ ಹಾಗೂ ಬಸವರಾಜ ಅವರು ವಿನಾಕಾರಣ 8 ಜನ ಗುತ್ತಿಗೆ ಕಾರ್ಮಿಕರನ್ನು ವಜಾಗೊಳಿಸಿ ಇತರೆ 4 ಜನರನ್ನು ನೇಮಿಸಿಕೊಂಡಿದ್ದಾರೆ. ಇದು ಕಾನೂನು ಬಾಹಿರವಾಗಿದೆ. ಗುತ್ತಿಗೆ ಕಾರ್ಮಿಕರು ನ್ಯಾಯಯುತ ಬೇಡಿಕೆಗಳನ್ನು ಕೇಳಿದರೆ ಅವರನ್ನು ವಜಾಗೊಳಿಸುವ ಮತ್ತು ಅವರ ಮೇಲೆ ಇಲ್ಲದ ಆರೋಪ ಹೊರಿಸಿ ತೆಗೆದು ಹಾಕುತ್ತಿರುವುದು ನಿಜಕ್ಕೂ ಖೇದಕರ ಸಂಗತಿ.
ಈ ರೀತಿ ವರ್ತಿಸುವ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಗುತ್ತಿಗೆ ಕಾರ್ಮಿಕರಿಗೆ ದೊರಕಬೇಕಾದ ಭವಿಷ್ಯನಿಧಿ ಇನ್ನಿತರೆ ಸೌಲಭ್ಯಗಳು ಕೈತಪ್ಪಿಹೋಗಿದ್ದು, ಅವುಗಳನ್ನು ಪುನಃ ಒದಗಿಸುವಂತೆ ಆಗ್ರಹಿಸಿದ್ದಾರೆ. ಕಾರ್ಮಿಕ ಸಮಸ್ಯೆಗಳನ್ನು ಶೀಘ್ರ ಇತ್ಯರ್ಥಗೊಳಿಸುವಂತೆ ಜಿಲ್ಲಾಧ್ಯಕ್ಷ ವಿಠಲ್ ಕಾರ್ಯದರ್ಶಿ ಧುರೇಂದ್ರ ಪ್ರಾದೇಶಿ ಆಯುಕ್ತರನ್ನು ಮನವಿ ಮಾಡಿದ್ದಾರೆ.