ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಕ್ರಮ: ಪರಿಷ್ಕೃತ ವರದಿಗೆ ಡಿಸಿ ಸೂಚನೆ

Rashmi Kasaragodu
Updated On : 13 Dec 2013, 11:26 am

ರಾಯಚೂರು; ತಡೆರಹಿತ ವಿದ್ಯುತ್ ಮಾರ್ಗ ಅಳವಡಿಕೆ ಕಾಮಗಾರಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಸಹಾಯಕ ಆಯುಕ್ತೆ ಮಂಜುಶ್ರೀ ಅವರು ಸಲ್ಲಿಸಿರುವ ತನಿಖಾ ವರದಿಯ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ವರದಿಯಲ್ಲಿನ ಕೆಲ ಅಂಶಗಳ ಬಗ್ಗೆ ಸಂಶಯ ವ್ಯಕ್ತಪಡಿಸಿ ಆ ಬಗ್ಗೆ ತನಿಖೆ ನಡೆಸಿ ಪರಿಷ್ಕೃತ ವರದಿ ಸಲ್ಲಿಸಲು ಸೂಚಿಸುವುದಾಗಿ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ನಗರದ ಜನತೆಗೆ ಸಮರ್ಪಕ ಕುಡಿಯುವ ನೀರೊದಗಿಸುವ ನಿಟ್ಟಿನಲ್ಲಿ ತಡೆರಹಿತ ವಿದ್ಯುತ್ ಮಾರ್ಗ ಅಳವಡಿಕೆ ಕಾಮಗಾರಿಯಲ್ಲಿ 53 ಲಕ್ಷ ಅಕ್ರಮ ನಡೆದಿರುವುದು ಸ್ಪಷ್ಟವಾಗಿದೆ ಎಂದು ತಿಳಿಸಿದರು.
ಗುತ್ತಿಗೆದಾರನ ಹೆಸರೇ ಇಲ್ಲ: ಗುತ್ತಿಗೆದಾರರಿಗೆ ಕಾಮಗಾರಿ ಮುಗಿಯುವ ಮುನ್ನವೇ 53 ಲಕ್ಷ ಬಿಲ್ ಪಾವತಿಸಿರುವ ಬಗ್ಗೆ ಸಹಾಯಕ ಆಯುಕ್ತೆ ಮಂಜುಶ್ರೀ ಅವರು ಸಲ್ಲಿಸಿದ ವರದಿಯಲ್ಲಿ ಹೇಳಲಾಗಿದೆ. ಆದರೆ ಬಿಲ್ ಪಾವತಿ ಸಂದರ್ಭದಲ್ಲಿ ನಗರಸಭೆಯ ಮೇಲಧಿಕಾರಿಗಳಾಗಿದ್ದ ಹಾಗೂ ಹಾಲಿ ಅಪರ ಜಿಲ್ಲಾಧಿಕಾರಿ ತಿಮ್ಮಪ್ಪ ಮತ್ತಿತರರನ್ನು ಮಾತ್ರ ಅಕ್ರಮಕ್ಕೆ ಕಾರಣರು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಆದರೆ ಗುತ್ತಿಗೆದಾರನು ತಾನು ಕಾಮಗಾರಿ ಪೂರ್ಣಗೊಳಿಸಿದ್ದಾಗಿ ಸುಳ್ಳು ದಾಖಲೆ ಸೃಷ್ಟಿಗೆ ಕಾರಣನಾಗಿದ್ದರೂ ಗುತ್ತಿಗೆದಾರನ ವಿರುದ್ಧ ಕ್ರಮಕ್ಕೆ ತನಿಖಾ ವರದಿಯಲ್ಲಿ ಶಿಫಾರಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಕಲಿ ಇ-ಸ್ಟ್ಯಾಂಪ್ ಪರಿಶೀಲನೆಗೆ ಸೂಚನೆ: ಅದೇ ರೀತಿ ತನಿಖಾ ವರದಿಯೂ ಕೆಲ ವಿಚಾರಗಳಿಗೆ ಸಂಬಂಧಿಸಿ ಅಪೂರ್ಣವಾಗಿದ್ದು, ವಿಸ್ತೃತ ತನಿಖಾ ವರದಿ ಪರಿಷ್ಕೃತವಾಗಿ ಸಲ್ಲಿಸಲು ಸಹಾಯಕ ಆಯುಕ್ತರಿಗೆ ಸೂಚಿಸಲಾಗುತ್ತದೆ ಎಂದು ಹೇಳಿದ ಅವರು, ಜಿಲ್ಲೆಯಲ್ಲಿ ನಕಲಿ ಇ-ಸ್ಟ್ಯಾಂಪ್ ಜಾಲದ ಬಗ್ಗೆ ಜಿಲ್ಲಾ ರಿಜಿಸ್ಟ್ರಾರ್ ಅವರಿಗೆ ಪತ್ರ ಬರೆದು ಅಕ್ರಮದ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಸೂಚಿಸುವುದಾಗಿ ತಿಳಿಸಿದರು. ರಾಯಚೂರು ತಾಲೂಕಿನ ನಾರದಗಡ್ಡೆಯ ಮಠದ ಪೀಠಾಧಿಪತಿಗಳಿಗೆ ಆಸ್ತಿ ಹಸ್ತಾಂತರ ವಿಚಾರದಲ್ಲಿ ಯಾವುದೇ ಆತುರ ತೋರಿಲ್ಲ. ಎಲ್ಲವನ್ನೂ ಪರಿಶೀಲಿಸಿಯೇ ಆಸ್ತಿ ಮರಳಿಸಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಆಸ್ತಿ ಮರಳಿಸಲಾಗಿದೆ ಎಂದು ತಿಳಿಸಿದರು.
ಹೆಚ್ಚುವರಿ ಜಮೀನು- ಮಾಹಿತಿಗೆ ಆದೇಶ: ಜಿಲ್ಲೆಯಲ್ಲಿ ಭೂ ಸುಧಾರಣೆ ಕಾಯಿದೆ ಅನ್ವಯ ಹೆಚ್ಚುವರಿ ಜಮೀನು ಹೊಂದಿದವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಕಾಯಿದೆಯಲ್ಲಿ ಸೂಚಿಸಿದ್ದಕ್ಕಿಂತ ವ್ಯಕ್ತಿಗಳು ಹೆಚ್ಚಿನ ಜಮೀನು ಹೊಂದಿದ್ದಲ್ಲಿ ಅಂಥವರಿಂದ ಜಮೀನು ವಶಪಡಿಸಿಕೊಳ್ಳಲಾಗಿದೆಯೇ, ವಶಕ್ಕೆ ಪಡೆದು ಬಡವರಿಗೆ ಹಂಚಿಕೆ ಮಾಡಲಾಗಿದೆಯೇ ಎಂಬುದು ಸೇರಿ ಹಲವಾರು ವಿಚಾರಗಳ ಬಗ್ಗೆ ಮಾಹಿತಿ ಕೇಳಿ ತಹಸೀಲ್ದಾರರಿಗೆ ಆದೇಶ ಹೊರಡಿಸಲಾಗುತ್ತದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement