ಅನರ್ಹರ ಆಯ್ಕೆ; ಪಟ್ಟಿ ರದ್ದತಿಗೆ ಆಗ್ರಹ
ರಾಯಚೂರು: ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿಯ ಮಲದಕಲ್ ಗ್ರಾಪಂ.ನಲ್ಲಿ ಭೂಒಡೆತನ ಯೋಜನೆಯಡಿ ಅರ್ನಹರಿಗೆ ಆಯ್ಕೆ ಮಾಡಿದ್ದು ಕೂಡಲೇ ಅಂಥ ಆಯ್ಕೆಪಟ್ಟಿ ರದ್ದುಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿರುವ ಸಂಘಟನೆಯು, ಭೂಒಡೆತನ ಯೋಜನೆ ಅಡಿ ಸರ್ಕಾರದ ಸೂಚನೆಯಂತೆ ಯೋಜನೆ ವ್ಯಾಪ್ತಿಯ ಐದು ಕಿಮೀ ವ್ಯಾಪ್ತಿಯಲ್ಲಿ ಬಡ ಕೃಷಿ ಕಾರ್ಮಿಕರನ್ನು ಗ್ರಾಮಸಭೆ ಮೂಲಕ ಆಯ್ಕೆ ಮಾಡಬೇಕೆಂದಿದೆ. ಆದರೆ ಮಲದಕಲ್ ಗ್ರಾಪಂ ವ್ಯಾಪ್ತಿಯ ಮಲದಕಲ್ ಗ್ರಾಮದಲ್ಲಿನ ಸರ್ವೇ ನಂ. 240 ಮತ್ತು 205ರಲ್ಲಿನ ಒಟ್ಟು 20 ಎಕರೆ ಪ್ರದೇಶಕ್ಕೆ ದೂರದ ಅರಕೇರಾ ಗ್ರಾಮದವರನ್ನು ಫಲಾನುಭವಿಗಳಾಗಿ ಆಯ್ಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ನಿಯಮಗಳನ್ನು ಉಲ್ಲಂಘಿಸಿ ವಿವಿಧ ಆಮಿಷಗಳಿಗೆ ಬಲಿಯಾಗಿರುವ ಅಧಿಕಾರಿಗಳು ಖೊಟ್ಟಿ ದಾಖಲೆ ಸೃಷ್ಟಿಸುವ ಮೂಲಕ ಕೃಷಿಯೇತರ ಫಲಾನುಭವಿಗಳ ಆಯ್ಕೆಗೆ ಮುಂದಾಗಿದ್ದಾರೆ. ಕಾರಣ ಕೂಡಲೇ ಸದ್ಯ ಆಯ್ಕೆ ಮಾಡಿ ಸಲ್ಲಿಸಿರುವ ಫಲಾನುಭವಿಗಳ ಪಟ್ಟಿ ರದ್ದುಗೊಳಿಸಬೇಕು. ಅರ್ಹರಿಗೆ ಆಯ್ಕೆ ಮಾಡಬೇಕು. ತಪ್ಪಿದಲ್ಲಿ ಸಂಘಟನೆಯಿಂದ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದೆ. ಈ ಸಂದರ್ಭದಲ್ಲಿ ದಸಂಸ ಸಂಘಟನೆಯ ನಗರ ಸಂಚಾಲಕ ರಾಜುಪಟ್ಟಿ ಇದ್ದರು.