ಕಾರ್ಮಿಕರ ಕಾಲನಿ ಸೌಲಭ್ಯಕ್ಕೂ ಕುತ್ತು
ಕನ್ನಡಪ್ರಭ ವಾರ್ತೆ ರಾಯಚೂರು ಡಿ.12
ತಾಲೂಕಿನ ಹೆಗ್ಗಸನಹಳ್ಳಿ ಬಳಿಯಿರುವ ಮೈಸೂರು ಪೆಟ್ರೋ ಕೆಮಿಕಲ್ಸ್ ಕಾರ್ಖಾನೆಯನ್ನು ಕಾನೂನು ಬಾಹಿರವಾಗಿ ಮುಚ್ಚಿದ್ದು ಕಾರ್ಮಿಕರ ಬದುಕು ಅತಂತ್ರಗೊಂಡಿದೆ. ಸದ್ಯ ಕಾರ್ಮಿಕರನ್ನು ಕಾರ್ಖಾನೆಯ ಕಾಲನಿಯಲ್ಲಿ ವಾಸವಾಗಿರಲು ಅವಕಾಶ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಹೆಗ್ಗಸನಹಳ್ಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೈಕ್ ರ್ಯಾಲಿ ನಡೆಸಿದ ಹೋರಾಟಗಾರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಕಳೆದ ಜು.16ರಂದು ಎಂಪಿಸಿಎಲ್ ಕಾರ್ಖಾನೆಯನ್ನು ಆಡಳಿತ ಮಂಡಳಿಯವರು ಕಾರ್ಮಿಕರಿಗೆ ಯಾವುದೇ ಮುನ್ಸೂಚನೆ ನೀಡದೇ ಮುಚ್ಚಿದ್ದು ಕಾನೂನು ಬಾಹಿರವಾಗಿದೆ ಎಂದು ದೂರಿದರು.
ಆಡಳಿತದ ಮೊಂಡುತನ: ಈಗಾಗಲೇ ಅನೇಕ ಬಾರಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಡಳಿತ ಮಂಡಳಿ ಮತ್ತು ಕಾರ್ಮಿಕರ ಸಭೆ ಕರೆದು ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡುವ ಕಾರ್ಯ ಮಾಡಿದ್ದರೂ, ಆಡಳಿತ ಮಂಡಳಿ ಮಾತ್ರ ತನ್ನ ವಾದ ಬಿಟ್ಟಿಲ್ಲ. ಕಾರ್ಮಿಕರ ಸಮಸ್ಯೆ ಪರಿಹರಿಸುವ ಕಾರ್ಯ ಮಾಡಿಲ್ಲ ಎಂದು ಆರೋಪಿಸಿದರು.
ಕಾರ್ಖಾನೆಯನ್ನು ಪುನಾ ಪ್ರಾರಂಭಿಸಬೇಕು. ಇಲ್ಲವೇ ಕಾರ್ಮಿಕರಿಗೆ ಸೂಕ್ತ ಪರಿಹಾರ ನೀಡಬೇಕೆಂಬ ಬೇಡಿಕೆಗೆ ಆಡಳಿತ ಮಂಡಳಿಯು ಇದುವರೆಗೆ ಸ್ಪಂದಿಸಿಲ್ಲ. ಸಮಸ್ಯೆ ಪರಿಹಾರ ಕಾಣುವವರೆಗೆ ಕಾರ್ಮಿಕರ ಕಾಲೋನಿಯಲ್ಲಿಯೇ ಕಾರ್ಮಿಕರ ವಸತಿಗೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದರು.
ಕಾರ್ಮಿಕರ ಕಾಲೋನಿ ಸೌಲಭ್ಯಕ್ಕೆ ಕುತ್ತು: ಸದ್ಯ ಕಾರ್ಮಿಕರ ಕಾಲೋನಿಗೆ ಒದಗಿಸಿದ ವಿದ್ಯುತ್, ಕುಡಿವ ನೀರು ಮತ್ತಿತರೆ ಸೌಲಭ್ಯಗಳನ್ನು ಆಡಳಿತ ಮಂಡಳಿಯವರು ಕಡಿತಗೊಳಿಸುತ್ತಿದ್ದಾರೆ. ಕಾರ್ಮಿಕರನ್ನು ಅವರ ಮನೆಗಳಿಂದ ಹೊರಹಾಕುವ ನಿಟ್ಟಿನಲ್ಲಿ ಸೌಲಭ್ಯಗಳನ್ನು ಸ್ಥಗಿತಗೊಳಿಸುವ ಕಾರ್ಯ ಮಾಡುತ್ತಿದ್ದು ಕೂಡಲೇ ಅದಕ್ಕೆ ತಡೆಯೊಡ್ಡುವಂತೆ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದರು.
ಕಾರ್ಖಾನೆಯ ಆಡಳಿತ ಮಂಡಳಿಯವರು ದುರುದ್ದೇಶದಿಂದ ಕಾರ್ಮಿಕರಿರುವ ಕಾಲನಿಯ ವಿದ್ಯುತ್ ಬಿಲ್ ಪಾವತಿಸಿಲ್ಲ. ಅದರಿಂದಾಗಿ ವಿದ್ಯುತ್ ಇಲಾಖೆಯವರು ವಿದ್ಯುತ್ ಕಡಿತಗೊಳಿಸುವ ಸಾಧ್ಯತೆಯಿದೆ. ಕಾರ್ಮಿಕರ ಸಮಸ್ಯೆ ಪರಿಹಾರ ಕಾಣುವವರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ಸೂಚಿಸಲು ಒತ್ತಾಯಿಸಿದರು.
ನ್ಯಾಯಾಲಯಕ್ಕೆ ಮೊರೆ: ಕಾರ್ಖಾನೆಯ ಆಡಳಿತ ಮಂಡಳಿಯು ಕಾರ್ಮಿಕರಿಗೆ ಸೂಕ್ತ ಪರಿಹಾರ ನೀಡಿಕೆ ನಿಟ್ಟಿನಲ್ಲಿ ಒಪ್ಪಿಗೆ ಸೂಚಿಸುತ್ತಿಲ್ಲ. ಹಾಗಾಗಿ ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರುವುದು ಖಚಿತವಾಗಿದೆ. ಅಂಥ ಸಂದರ್ಭದಲ್ಲಿ ಕಾರ್ಮಿಕರ ಕುಟುಂಬಗಳು ಅತಂತ್ರ ಸ್ಥಿತಿಗೆ ಸಿಲುಕಲಿರುವ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಅವರಿರುವ ಕಾಲನಿಯಲ್ಲಿಯೇ ವಾಸವಾಗಿರಲು ಅವಕಾಶ ನೀಡುವಂತೆ ಆಡಳಿತ ಮಂಡಳಿಗೆ ಸೂಚಿಸಲು ಮನವಿ ಮಾಡಿದರು.
ಕಾರ್ಖಾನೆಯ ಆಡಳಿತ ಮಂಡಳಿಯ ಅಧೀನದಲ್ಲಿರುವ ಜಾಗವನ್ನು ರೈತರಿಂದ ಕಾಖಾರ್ನೆಯ ಸ್ಥಾಪನೆ ಉದ್ದೇಶಕ್ಕೆ ಖರೀದಿಸಿದ್ದು, ಬೇರಾವುದೇ ಕಾರಣಕ್ಕೆ ಬಳಸದಂತೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಸರ್ಕಾರ ಈ ನಿಟ್ಟಿನಲ್ಲಿ ಕಂಪನಿಗೆ ಪರವಾನಗಿ ನೀಡದಂತೆ ತಾಕೀತು ಮಾಡಿದರು.
ಈ ವೇಳೆ ಹೋರಾಟದ ನೇತೃತ್ವವನ್ನು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಕ್ಷಾ ಖಾದ್ರಿ, ಎಂಪಿಸಿಎಲ್ ನೌಕರರ ಸಂಘದ ಅಧ್ಯಕ್ಷ ಭೀಮಣ್ಣ, ಕಾರ್ಯದರ್ಶಿ ಅಬ್ದುಲ್ ನಬಿ ವಹಿಸಿದ್ದರು. ಸಿಐಟಿಯು ಜಿಲ್ಲಾಧ್ಯಕ್ಷೆ ಎಚ್.ಪದ್ಮಾ, ಡಿ.ಎಸ್. ಶರಣಬಸವ, ಕೆ.ಜಿ. ವೀರೇಶ್, ಸುರೇಶ್ ಬಾಬು, ಮಧುಕರ್, ಮರಡಿಸಾಬ್, ಬಾಷುಮಿಯಾ, ಅಮರೇಶ್, ಶಿವಶರಣಗೌಡ, ಸಂಜೀವರೆಡ್ಡಿ ಸೇರಿ ಅನೇಕರಿದ್ದರು.