ಚುನಾವಣೆಯಲ್ಲಿ ಕಲಂ 371 ಅಸ್ತ್ರ; ಶೀಘ್ರ ನಿರ್ಧಾರ- ವೈಜನಾಥ
ಗುಲ್ಬರ್ಗ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸಂವಿಧಾನದ ಕಲಂ 371(ಜೆ) ಹೋರಾಟವನ್ನೇ ಆಧಾರವಾಗಿಟ್ಟುಕೊಂಡು ಸಲಹೆಗಳು ಕೇಳಿ ಬರುತ್ತಿದ್ದು, ಒಂದೆರಡು ದಿನಗಳಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ, ಮಾಜಿ ಸಚಿವ ವೈಜನಾಥ ಪಾಟೀಲ್ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನದ 371(ಜೆ)ನೇ ತಿದ್ದುಪಡಿಗಾಗಿ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಹೈ.ಕ. ಪ್ರದೇಶದ ಐದು ಜಿಲ್ಲೆಗಳಿಂದ ಈ ಒತ್ತಾಯ ಕೇಳಿ ಬರುತ್ತಿದ್ದು, ಈ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಲಾಗುತ್ತಿದೆ ಎಂದರು. ಸಂವಿಧಾನದ ತಿದ್ದುಪಡಿಯಂತೆ ರಾಜ್ಯ ಸರ್ಕಾರ ಈಗಾಗಲೇ ಖಾಲಿ ಉದ್ಯೋಗಗಳ ಬಗ್ಗೆ ಮಾಹಿತಿ ತರಿಸಿಕೊಳ್ಳುತ್ತಿದೆ. ಈ ಭಾಗದ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಹೈ.ಕ. ಮಂಡಳಿಗೆ 600 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ ಎಂದರು.
ಸಮಿತಿಯಿಂದ ಜ.11ರಂದು ಬೀದರ್ನಲ್ಲಿ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಡಿ.13ರಂದು ಅಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ ಎಂದು ಹೇಳಿದರು. ವಿಠ್ಠಲ್ ಹೇರೂರ್ ಸಂಶಯಾಸ್ಪದ ಸಾವಿನ ಕುರಿತು ಸರ್ಕಾರ ಕೂಡಲೇ ಸಿಒಡಿ ತನಿಖೆ ಮಾಡಲು ಒತ್ತಾಯಿಸಿದರು.