ಮುದಗಲ್: ಬ್ಲಾಕ್ ಕಾಂಗ್ರೆಸ್ನಲ್ಲಿ ಭಿನ್ನಮತ
ಮುದಗಲ್: ಲಿಂಗಸ್ಗೂರು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಡಿ.ಎಸ್. ಹೂಲಗೇರಿ ವರ್ತನೆಯು ಮುದಗಲ್ ಬ್ಲಾಕ್ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಯಾವ ಯಾವ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಗಳು ಸೋತಿದ್ದಾರೋ ಅವರಿಗೆ ಮನ್ನಣೆ ನೀಡಲು ಕೆಪಿಸಿಸಿ ಅಧ್ಯಕ್ಷರು ಸೂಚಿಸಿದ್ದರಿಂದ ಅಧಿಕಾರಿಗಳ ವರ್ಗಾವಣೆ, ಸರ್ಕಾರದ ನಾಮನಿರ್ದೇಶಿತ ಸದಸ್ಯರ ಆಯ್ಕೆ ಸೇರಿದಂತೆ ಅನೇಕ ಕೆಲಸ ಕಾರ್ಯಗಳು ನಡೆಯುವ ನಿಟ್ಟಿನಲ್ಲಿ ಸೋತಿರುವ ಅಭ್ಯರ್ಥಿಗಳ ಪತ್ರಕ್ಕೆ ಮನ್ನಣೆ ಕೊಡಲು ತೀರ್ಮಾನಿಸಿದೆ.
ಅಸಮಾಧಾನಕ್ಕೇನು ಕಾರಣ?: ಡಿ.ಎಸ್. ಹೂಲಗೇರಿ ಅವರು ಪುರಸಭೆ, ಪಟ್ಟಣ ಪಂಚಾಯಿತಿ, ಎಪಿಎಂಸಿ ಆರಾಧನೆ, ಆಶ್ರಯ, ಕೆಡಿಪಿ ಸದಸ್ಯರ ನೇಮಕಾತಿಯಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿದ್ದರಿಂದ ಮತ್ತು ಮುದಗಲ್ ಭಾಗದ ಯಾವುದೇ ಸದಸ್ಯರ ನೇಮಕಾತಿ ಮಾಡುವ ಸಮಯದಲ್ಲಿ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಪಕ್ಷಕ್ಕೆ ನಿಷ್ಠರಲ್ಲದವರ ಹೆಸರು ನಾಮನಿರ್ದೇಶನ ಮಾಡಲು ಕಳಿಸಿದ್ದರಿಂದ ಅಸಮಧಾನಕ್ಕೆ ಕಾರಣವಾಗಿದೆ.
ಬಂಡಾಯ: ಇತ್ತೀಚೆಗೆ ನಡೆದ ಎಪಿಎಂಸಿ ಅಧ್ಯಕ್ಷರ ಆಯ್ಕೆ ನಂತರ ಮುದಗಲ್ನ ಡಿ.ಎಸ್. ಹೂಲಗೇರಿ ನಿವಾಸದಲ್ಲಿ ನಡೆದ ಭೋಜನಾ ಕೂಟಕ್ಕೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು, ಯುವ ಮುಖಂಡರು ಭಾಗವಹಿಸದೆ ತಮ್ಮ ಅಸಮಾಧಾನವನ್ನು ಬಹಿರಂಗಪಡಿಸಿದ್ದಾರೆ. ಎಪಿಎಂಸಿ ಅಧ್ಯಕ್ಷ ಸನ್ಮಾನಿಸಿ ಶುಭ ಕೋರಿ ಹೊರ ನಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಮುದಗಲ್ ಭಾಗದಲ್ಲಿ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರ ಕಟ್ಟಾ ಬೆಂಬಲಿಗರು ಮಾತ್ರ ಇದ್ದು ಬಯ್ಯಾಪೂರ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಡಿ.ಎಸ್. ಹೂಲಗೇರಿ ಮಾಡುತ್ತಿದ್ದಾರೆ ಎಂದು ಅನೇಕ ಮುಖಂಡರು ಆರೋಪಿಸಿದ್ದಾರೆ.
ಮುಖಂಡರು ಎಚ್ಚೆತ್ತುಕೊಳ್ಳಲಿ: ಈಗ ಭಿನ್ನಮತ ತಾರಕಕ್ಕೇರುತ್ತಿದ್ದು ಕಾಂಗ್ರೆಸ್ ಇಲ್ಲಿಯೂ ಕ್ಷೀಣಿಸುತ್ತಿದೆ. ಎಲ್ಲ ಬೆಳವಣಿಗೆಯನ್ನು ಗಮನಿಸಿ ಪಕ್ಷದ ಮುಖಂಡರು ಭಿನ್ನಮತ ಶಮನ ಮಾಡದಿದ್ದರೆ ತಾಲೂಕಿನಾದ್ಯಂತ ಪಕ್ಷವು ತನ್ನ ವರ್ಚಸ್ಸನ್ನು ಕಳೆದುಕೊಳ್ಳುವುದರಲ್ಲಿ ಎರಡು ಮಾತಿಲ್ಲ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.