ಮೆದಕಿನಾಳ ನವಗ್ರಾಮ ಮೂಲೆಗುಂಪು
ಪಂಪಯ್ಯ ಮಠ
ಕನ್ನಡಪ್ರಭ ವಾರ್ತೆ ಮುದಗಲ್ ಡಿ.11
ಸರ್ಕಾರ ಗ್ರಾಮೀಣ ಪ್ರದೇಶದ ಕಡು ಬಡವರಿಗೆ, ನಿರ್ಗತಿಕರಿಗೆ, ನಿರಾಶ್ರಿತರಿಗಾಗಿ ಆಶ್ರಯ, ಅಂಬೇಡ್ಕರ್, ಇಂದಿರಾ, ಬಸವ.. ಹೀಗೆ ಅನೇಕ ವಸತಿ ಯೋಜನೆಗಳನ್ನು ಜಾರಿ ಮಾಡಿ ಪ್ರತಿ ವರ್ಷ ಲಕ್ಷಾಂತರ ಮನೆಗಳನ್ನು ಮಂಜೂರು ಮಾಡಿತ್ತದೆ.
ಅದೇ ರೀತಿ ಸಮೀಪದ ಮೆದಕಿನಾಳ ಗ್ರಾಮದ ಕಡು ಬಡವರಿಗಾಗಿ 2004- 05ರಲ್ಲಿ ನವಗ್ರಾಮ ಯೋಜನೆಯಡಿ 50 ಮನೆಗಳನ್ನು ನಿರ್ಮಾಣ ಮಾಡಿ 8 ವರ್ಷ ಗತಿಸಿದರೂ ಈವರೆಗೆ ಅಲ್ಲಿ ಯಾರೂ ವಾಸಿಸುತ್ತಿಲ್ಲ. ಪರಿಣಾಮ ಮನೆಗಳಿಗೆ ಅಳವಡಿಸಲಾದ ಸಿಮೆಂಟ್ ಶೀಟ್ಗಳು ಮಳೆ, ಗಾಳಿಗೆ ಹಾರಿ ಹೋಗಿದ್ದರಿಂದ ಯೋಜನೆ ಅಕ್ಷರಶಃ ಗಾಳಿ ಪಾಲಾಗಿದೆ.
ಮೆದಕಿನಾಳ ಗ್ರಾಪಂ.ನಿಂದ 50 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು, ಸರ್ಕಾರ ಮನೆಗಳ ನಿರ್ಮಾಣಕ್ಕೆ 4.20 ಲಕ್ಷ ಬಿಡುಗಡೆ ಮಾಡಿ ಕಾಮಗಾರಿಯನ್ನು ಭೂ ಸೇನಾ ನಿಗಮಕ್ಕೆ ನೀಡಿತ್ತು. 41 ಮನೆಗಳ ಕಾಮಗಾರಿ ಪೂರ್ಣಗೊಳಿಸಿದ ಭೂಸೇನಾ ನಿಗಮದ ಅಧಿಕಾರಿಗಳು ಎಲ್ಲ ಮನೆಗಳನ್ನು ಗ್ರಾ.ಪಂ.ಗೆ ಹಸ್ತಾಂತರ ಮಾಡಿದ್ದಾರೆ.
ವಾಸಿಸಲು ಹಿಂದೇಟು: ಪ್ರತಿ ಮನೆ ನಿರ್ಮಾಣಕ್ಕೆ ಸರ್ಕಾರ ಕೇವಲ 20 ಸಾವಿರ ಬಿಡುಗಡೆ ಮಾಡಿದ್ದರಿಂದ ಗುಣಮಟ್ಟದ ಕಾಮಗಾರಿ ನಡೆದಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಆದರೆ ಗ್ರಾಪಂ ನಿರ್ಲಕ್ಷ್ಯದಿಂದಾಗಿ ಫಲಾನುಭವಿಗಳಿಗೆ ಹಸ್ತಾಂತರಿಸದೆ ಇಲ್ಲಿ ಕುಡಿವ ನೀರು, ವಿದ್ಯುತ್, ರಸ್ತೆ ನಿರ್ಮಾಣ ಆಗದೆ ಇದ್ದುದಿರಿಂದ ಮತ್ತು ಗ್ರಾಮದಿಂದ 2 ಕಿಮೀ ದೂರ ಇದ್ದುದರಿಂದ ಫಲಾನುಭವಿಗಳು ವಾಸಿಸಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.
ಶೀಟ್ಗಳು ಚಿಂದಿ: ಮೆದಕಿನಾಳ ಗ್ರಾಮದ ಹೊರ ವಲಯದಲ್ಲಿರುವ 41 ಆಶ್ರಯ ಮನೆಗಳ ಛಾವಣಿಯ ಸಿಮೆಂಟ್ ಶೀಟ್ಗಳು ಇತ್ತೀಚೆಗೆ ಮಳೆ, ಗಾಳಿಗೆ ಹಾರಿ ಚಿಂದಿ ಚಿಂದಿಯಾಗಿವೆ. ಮನೆಗಳಿಗೆ ಅಳವಡಿಲಾದ ಬಾಗಿಲು, ಕಿಟಕಿ ಗಳನ್ನು ದುಷ್ಕರ್ಮಿಗಳು ಕಿತ್ತಿಕೊಂಡು ಹೋಗಿದ್ದರಿಂದ ಮನೆಗಳ ಬಗ್ಗೆ ಕಾಳಜಿ ಮಾಡುವವರಾರೂ ಇಲ್ಲದಾಗಿದೆ. ಗ್ರಾಮ ಪಂಚಾಯಿತಿಯವರು ಈ ಮನೆಗಳು ತಮಗೆ ಸಂಬಂಧ ಇಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ.
ಅನೈತಿಕ ಕೇಂದ್ರ: ಗ್ರಾಮದ ಹೊರವಲಯದಲ್ಲಿ ಈ ಮನೆಗಳನ್ನು ನಿರ್ಮಿಸಿದ್ದು, ಜನವಸತಿ ಇಲ್ಲದ ಕಾರಣ ಇಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ಆನೇಕ ಮನೆಗಳ ಛಾವಣಿ ಗಾಳಿಗೆ ಹಾರಿವೆ.
2004- 05ರಲ್ಲಿ ಅಶ್ರಯ ಮನೆಗಳ ನಿರ್ಮಾಣಕ್ಕೆ ಪ್ರತಿ ಮನೆಗೆ ಸರ್ಕಾರ 20 ಸಾವಿರ ಮಾತ್ರ ನೀಡಿದೆ. ಆ ಪ್ರಕಾರ 4.20 ಲಕ್ಷ ವೆಚ್ಚದಲ್ಲಿ 41 ಮನೆಗಳನ್ನು ನಿರ್ಮಾಣ ಮಾಡಿ ಗ್ರಾಪಂ.ಗೆ ಹಸ್ತಾಂತರ ಮಾಡಲಾಗಿದೆ. ಗ್ರಾಪಂ ನಿರ್ಲಕ್ಷ್ಯದಿಂದಾಗಿ ಫಲಾನುಭವಿಗಳಿಗೆ ಮನೆಗಳ ಹಸ್ತಾಂತರ ಮಾಡದೆ ಹಾಗೂ ನಿರ್ವಹಣೆಯಿಲ್ಲದೆ ಮನೆಗಳು ಹಾಳಾಗಿವೆ ಎಂದು ಭೂ ಸೇನಾ ನಿಗಮದ ಅಧಿಕಾರಿ “OÚ«ÚsÚ®ÚúڒOæQ ತಿಳಿಸಿದರು. ಸರ್ಕಾರ ಲಕ್ಷಾಂತರ ಖರ್ಚು ಮಾಡಿ ನಿರ್ಮಿಸಿರುವ ಆಶ್ರಯ ಮನೆಗಳನ್ನು ದುರಸ್ತಿಗೊಳಿಸಿ ನಿರ್ಗತಿಕ, ಕಡು ಬಡವರಿಗೆ ಮನೆಗಳನ್ನು ಹಸ್ತಾಂತರ ಮಾಡಿ ಯೋಜನೆಯ ಸದುಪಯೋಗವಾಗುವಂತೆ ಶಾಸಕ ಪ್ರತಾಪಗೌಡ ಪಾಟೀಲ್ ಅವರು ಗಮನಹರಿಸಬೇಕಾಗಿದೆ.