ರೈತರಿಗೆ ಎಪಿಎಂಸಿ ಸಲಹೆ
ರಾಯಚೂರು: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಗಾಗುತ್ತಿರುವ ಸಮಸ್ಯೆಗಳನ್ನು ತಪ್ಪಿಸಲು ಎಂಪಿಎಂಸಿ ಆಡಳಿತ ಕೆಲ ಸಲಹೆಗಳನ್ನು ರೈತರಿಗೆ ನೀಡಿದೆ.
ರೈತರು ಅಧಿಸೂಚಿತ ಕೃಷಿ ಉತ್ಪನ್ನಗಳನ್ನು ನಿಗದಿತ ಸಮಯದೊಳಗೆ ಮಾರಾಟಕ್ಕೆ ತರಬೇಕು. ಉತ್ಪನ್ನಗಳನ್ನು ಸ್ವಚ್ಛಗೊಳಿಸಿ ಒಣಗಿಸಿ ವರ್ಗೀಕರಿಸಿ ಮಾರಾಟಕ್ಕೆ ತರಬೇಕು. ರೈತರು ಸಂಭಾಂಗಣದಲ್ಲಿನ ದಲ್ಲಾಳಿಗಳ ಮೂಲಕ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿ ಸ್ಪರ್ಧಾತ್ಮಕ ಬೆಲೆ ಪಡೆಯಬಹುದು. ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಪ್ರಾಂಗಣದ ಹೊರಗಡೆ ಅನಧಿಕೃತ ವ್ಯಕ್ತಿಗಳ ಮೂಲಕ ಮಾರಾಟ ಮಾಡಿದಲ್ಲಿ ದರ, ತೂಕದಲ್ಲಿ ವ್ಯತ್ಯಾಸವಲ್ಲದೇ ಕಮಿಷನ್, ಇನ್ಸುರೆನ್ಸ್ ಮತ್ತಿತರೆ ಕಡಿತಗಳನ್ನು ದರದಲ್ಲಿ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಮಾರಾಟದ ವಿವರವನ್ನು ಅಧಿಕೃತ ಪಟ್ಟಿಯಲ್ಲಿ ದಾಖಲಿಸಿ ಪಡೆಯಬೇಕು. ಬಿಳಿ ಹಾಳೆ ಮೇಲೆ ಯಾವುದೇ ರೀತಿಯ ವಿವರ ಪಡೆಯಬಾರದು. ಹತ್ತಿ ಬೆಳೆಗ ರೈತರು ನೀರು ಸಿಂಪರಣೆ ಮಾಡುವುದರಿಂದ ಗುಣಮಟ್ಟ ಕಳೆದುಕೊಂಡು ಬೆಲೆ ಕಡಿಮೆಯಾಗುವ ಸಾಧ್ಯತೆಯಿರುತ್ತದೆ. ಹತ್ತಿ, ಅರಳೆಯನ್ನು ಒಣಗಿಸಿ ಮಾರಾಟ ಮಾಡಬೇಕು. ಕೃಷಿ ಉತ್ಪನ್ನ ಮಾರಾಟ ಮಾಡಿದ ಮೇಲೆ ರೈತರಿಂದ ಕಮಿಷನ್ ಇನ್ಶುರೆನ್ಸ್, ಸ್ಯಾಂಪಲ್ ಇನ್ನಿತರ ಯಾವುದೇ ಕಡಿತಗಳಿಗೆ ಅವಕಾಶ ನೀಡಬಾರದು ಎಂದು ಸಲಹೆ ನೀಡಿದೆ. ಈ ಎಲ್ಲ ಅಂಶಗಳನ್ನು ಗಮನಿಸಿ ರೈತರು ಯಾವುದೇ ತಕರಾರು ಬಂದಲ್ಲಿ ಕಾರ್ಯದರ್ಶಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರಾಯಚೂರು ಇವರನ್ನು ಸಂಪರ್ಕಿಸಲು ಕೋರಿದ್ದಾರೆ.