ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಲೇವಿ ಅಕ್ಕಿ ಸಂಗ್ರಹ; ಗಿರಣಿ, ಗ್ರಾಹಕರಿಗೆ ಬಿಸಿತುಪ್ಪ

Rashmi Kasaragodu
Updated On : 14 Dec 2013, 10:51 am


 ಜಗನ್ನಾಥ ಆರ್. ದೇಸಾಯಿ
ಕ.ಪ್ರ. ವಾರ್ತೆ     ರಾಯಚೂರು     ಡಿ.13
ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಗೆ ಅಕ್ಕಿ ಒದಗಿಸಲು ಅಕ್ಕಿ ಗಿರಣಿಗಳ ಮಾಲೀಕರು ಮತ್ತು ಜನಸಾಮಾನ್ಯರಿಗೆ ಜೇಬಿಗೆ ಕತ್ತರಿಯಿಡುವ ಲಕ್ಷಣ ಸ್ಪಷ್ಟವಾಗಿದೆ. ಬೆಂಗಳೂರಿನಲ್ಲಿ ಗುರುವಾರ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಅಕ್ಕಿ ಸಂಗ್ರಹ ಪ್ರಮಾಣ ಮತ್ತು ದರದ ನಿರ್ಧಾರಕ್ಕೆ ಮಿಲ್ಗಳ ಮಾಲೀಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಮುಕ್ತ ಮಾರುಕಟ್ಟೆಯಲ್ಲೂ ದರ ಏರಿಕೆಯ ಭೀತಿ ಎದುರಾಗಿದೆ.
ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡುದಾರರಿಗೆ ಕಡಿಮೆ ದರದಲ್ಲಿ ಅಕ್ಕಿ ಒದಗಿಸುವ ಭರದಲ್ಲಿ ಸರ್ಕಾರ ಕೈಗೊಳ್ಳುತ್ತಿರುವ ನಿರ್ಣಯಗಳೀಗ ಅಕ್ಕಿ ಗಿರಣಿ ಮುಚ್ಚುವಿಕೆಗೆ ದಾರಿ ಮಾಡುತ್ತಿವೆ ಎಂಬ ಕೂಗು ಕೇಳಿಬಂದಿದೆ. ರಾಜ್ಯ ಸರ್ಕಾರ ಗುರುವಾರದ ಸಂಪುಟ ಸಭೆಯಲ್ಲಿ ಪ್ರಸಕ್ತ ವರ್ಷ ರಾಜ್ಯದ ಎಲ್ಲ ಅಕ್ಕಿ ಗಿರಣಿಗಳಿಂದ ಈ ಮೊದಲು ನಿಗದಿಪಡಿಸಿದಂತೆಯೇ ಲೇವಿ ಅಕ್ಕಿ ಸಂಗ್ರಹಕ್ಕೆ ನಿರ್ಧರಿಸಿರುವುದು ಇದಕ್ಕೆ ಕಾರಣ.
ಕಡ್ಡಾಯ: ರೈತರಿಂದ ಬತ್ತ ಖರೀದಿಗೂ ಸರ್ಕಾರ ಮುಂದಾಗಿದೆ. ಆದರೆ ರೈತರು ಸರ್ಕಾರಕ್ಕೆ ಬತ್ತ ಮಾರಾಟ ಮಾಡದಿದ್ದರೂ ಸರಿ. ಅಕ್ಕಿ ಗಿರಣಿಗಳು ಮಾತ್ರ ಕಡ್ಡಾಯ ಸರ್ಕಾರಕ್ಕೆ ಅಕ್ಕಿ ನೀಡಲೇಬೇಕೆಂಬುದು ಆದೇಶ. ರಾಜ್ಯದಲ್ಲಿ ಒಟ್ಟು 1818 ಅಕ್ಕಿ ಗಿರಣಿಗಳಿದ್ದು, ಅವುಗಳಿಗೆ ಸರ್ಕಾರವು 2014ರವರೆಗೆ ತಾತ್ಕಾಲಿಕವಾಗಿ ಒಟ್ಟು 13.5 ಲಕ್ಷ ಟನ್ ಲೇವಿ ಅಕ್ಕಿ ಗುರಿ ನೀಡಿದೆ. ಇದರಲ್ಲಿ ಜಿಲ್ಲೆಯ 121 ಅಕ್ಕಿ ಗಿರಣಿಗಳಿಂದ ಒಟ್ಟು 2.29 ಲಕ್ಷ ಟನ್ ಲೇವಿ ಅಕ್ಕಿ ಸಂಗ್ರಹಣೆ ಗುರಿ ನೀಡಲಾಗಿದೆ.
ಜಿಲ್ಲೆಯಲ್ಲಿ ಕಳೆದ ಬೇಸಿಗೆವರೆಗೆ ಸರ್ಕಾರ 84728 ಮೆಟ್ರಿಕ್ ಟನ್ ಲೇವಿ ಅಕ್ಕಿ ಸಂಗ್ರಹಣೆಗೆ ಗುರಿ ನಿಗದಿ ಮಾಡಿತ್ತು. ಆಗ ಸರ್ಕಾರ ಬೇಸಿಗೆ ಬೆಳೆ ಕೊರತೆ ಹಿನ್ನೆಲೆ ಪ್ರಮಾಣ ತಗ್ಗಿಸಿತ್ತು. ಆದರೆ ಸದ್ಯದ ಸರ್ಕಾರ ದಿಢೀರ್ ಆಗಿ ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಲೇವಿ ಸಂಗ್ರಹಣೆಗೆ ಮುಂದಾಗಿದ್ದು ಆತಂಕ ತಂದಿದೆ. ಸರ್ಕಾರ ಲೇವಿ ಅಕ್ಕಿಯ ದರವನ್ನು 2400 ಪ್ರತಿ ಕ್ವಿಂಟಲ್ ನಿಗದಿ ಮಾಡಿರುವುದು ಮಿಲ್ಗಳನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಲಿದೆ ಎಂಬ ಮಾತಿದೆ.
ಸರ್ಕಾರದ ನಿರ್ಣಯದಂತೆ ರೈತರ ಬತ್ತಕ್ಕೆ 1600 ಪ್ರತಿ ಕ್ವಿಂಟಲ್ಗೆ ನೀಡಿದರೆ, ಅಕ್ಕಿ ಗಿರಣಿಗಳ ಮಾಲೀಕರಿಂದ ಪಡೆಯುವ ಪ್ರತಿ ಕ್ವಿಂಟಲ್ ಅಕ್ಕಿಗೆ 2400 ರು. ನೀಡಲಿದೆ. ಆದರೆ ಸದ್ಯ ಮಾಲೀಕರು ಪ್ರತಿ ಕ್ವಿಂಟಲ್ ಅಕ್ಕಿ ಉತ್ಪಾದನೆಗೆ ಸುಮಾರು 2600ರಿಂದ 2800 ರು.ವರೆಗೆ ವ್ಯಯಿಸುತ್ತಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು 'ಕನ್ನಡಪ್ರಭ'ಕ್ಕೆ ಮಾತನಾಡಿದ ಮಾಜಿ ಶಾಸಕ ಹಾಗೂ ಅಕ್ಕಿ ಗಿರಣಿ ಮಾಲಿಕರ ಸಂಘದ ಅಧ್ಯಕ್ಷ ಪಾಪಾರೆಡ್ಡಿ ಅವರು, ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರದಿಂದ ಅಕ್ಕಿ ಗಿರಣಿಗಳ ಮಾಲೀಕರು ನಷ್ಟಕ್ಕೆ ಸಿಲುಕಲಿದ್ದಾರೆ. ಸರ್ಕಾರ ನಿಗದಿ ಮಾಡಿದ ಲೇವಿ ಅಕ್ಕಿ ಪ್ರಮಾಣ ತಗ್ಗಿಸಬೇಕು. ಲೇವಿ ಅಕ್ಕಿಯ ಬೆಲೆಯೇರಿಸಬೇಕು. ಇಲ್ಲದಿದ್ದರೆ ಗಿರಣಿಗಳನ್ನು ಮುಚ್ಚುವಂಥ ಸ್ಥಿತಿ ಬರಲಿದೆ. ಮುಕ್ತ ಮಾರುಕಟ್ಟೆಯಲ್ಲೂ ಅಕ್ಕಿ ದರ ಏರಿಕೆಯಾಗುವುದು ಸಹಜ ಎಂದಿದ್ದಾರೆ.
ಕೇಂದ್ರ ಸರ್ಕಾರ ರಾಜ್ಯಕ್ಕೆ 177,000 ಟನ್ ಅಕ್ಕಿಯನ್ನು ಪಡಿತರ ವ್ಯವಸ್ಥೆಯಡಿ ನೀಡುತ್ತದೆ. ಇದಲ್ಲದೇ ರಾಜ್ಯ ಸರ್ಕಾರ ರಾಜ್ಯದಲ್ಲಿನ ಅಕ್ಕಿ ಗಿರಣಿಗಳಿಂದ 13.5 ಲಕ್ಷ ಟನ್ ಲೇವಿ ಅಕ್ಕಿ ಸಂಗ್ರಹದ ಗುರಿ ನೀಡಿದೆ. ರಾಜ್ಯದಲ್ಲಿನ ಸುಮಾರು 9.8 ಮಿಲಿಯನ್ ಬಿಪಿಎಲ್ ಕಾರ್ಡುದಾರರಿಗೆ ಅನ್ನಭಾಗ್ಯ ಯೋಜನೆ ಅಡಿ ಪ್ರತಿ ತಿಂಗಳು ಅಕ್ಕಿಯನ್ನು ತಪ್ಪದೇ ಒದಗಿಸಲು ಇದು ಅನಿವಾರ್ಯ ಎಂಬಂಥ ಪರಿಸ್ಥಿತಿಯಲ್ಲಿ ಸರ್ಕಾರವಿದೆ.
ಗ್ರಾಹಕರಿಗೆ ಬಿಸಿ: ರಾಜ್ಯ ಸರ್ಕಾರದ ನಿರ್ಧಾರದಿಂದ ಅಕ್ಕಿ ಗಿರಣಿಗಳ ಮಾಲೀಕರಿಗೆ ಬಿಸಿ ತಟ್ಟುವುದು ಖಚಿತ. ಹಾಗೆಯೇ ಅನ್ನಭಾಗ್ಯ ಫಲಾನುಭವಿಗಳಿಗೆ ಅಕ್ಕಿ ಒದಗಿಸುವ ಭರದಲ್ಲಿ ಜನ ಸಾಮಾನ್ಯರಿಗೂ ಅಕ್ಕಿ ಬೆಲೆಯೇರಿಕೆಯ ಚುರುಕು ತಟ್ಟಲಿದೆ. ಸದ್ಯ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ದರ ಪ್ರತಿ ಕ್ವಿಂಟಲ್ಗೆ 4500 ರು. ನಿಂದ 5 ಸಾವಿರ ರು. ವರೆಗಿದೆ. ಲೇವಿ ಅಕ್ಕಿ ಸಂಗ್ರಹ ಆರಂಭಗೊಳ್ಳುತ್ತಿದ್ದಂತೆಯೇ ಅಕ್ಕಿ ಮತ್ತಷ್ಟು ದುಬಾರಿಯಾಗಲಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement