ವೃತ್ತಿ ವೈಷಮ್ಯ; ತನಿಖಾ ವರದಿ ಬಲಿ?
ಕ.ಪ್ರ. ವಾರ್ತೆ ರಾಯಚೂರು ಡಿ.13
ರಾಜಕೀಯ ಪ್ರಭಾವದ ಕೈವಾಡ, ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳ ಮಧ್ಯೆ ಇದೆ ಎಂದು ಹೇಳಲಾಗುತ್ತಿರುವ ವೃತ್ತಿ ವೈಷಮ್ಯದಿಂದಾಗಿ ತಡೆರಹಿತ ವಿದ್ಯುತ್ ಮಾರ್ಗ ಅಳವಡಿಕೆ ಕಾಮಗಾರಿಯಲ್ಲಿನ ಅಕ್ರಮದ ತನಿಖಾ ವರದಿ ಬಹುತೇಕ ಮೂಲೆ ಸೇರುವ ಎಲ್ಲ ಲಕ್ಷಣಗಳು ಈಗ ಗೋಚರಿಸತೊಡಗಿವೆ.
ನಗರಸಭೆ ನಗರದ ಜನತೆಗೆ ಸಮರ್ಪಕ ಕುಡಿಯುವ ನೀರೊದಗಿಸುವ ಉದ್ದೇಶದಿಂದ ತಡೆರಹಿತ ವಿದ್ಯುತ್ ಮಾರ್ಗ ಅಳವಡಿಕೆಗೆ ಕೈಗೊಂಡ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಪೂರ್ಣ ಹಣ ಪಾವತಿಸಿದ್ದು ಬಹಿರಂಗಗೊಂಡಿದ್ದು, ಅದರಲ್ಲಿ ಹಿರಿಯ ಅಧಿಕಾರಿಗಳು ಶಾಮೀಲಾಗಿರುವ ಆರೋಪ ಕೇಳಿಬಂದಿದೆ. ತನಿಖಾ ವರದಿ ಬಹಿರಂಗಗೊಂಡ ನಂತರದಲ್ಲಿ ಕಾನೂನು ಕ್ರಮದಿಂದ ಪಾರಾಗಲು ರಾಜಕೀಯ ಪ್ರಭಾವ ಬಳಕೆ, ವರದಿಯನ್ನೇ ಬುಡಮೇಲು ಮಾಡುವ ತಂತ್ರಗಾರಿಕೆ ಆರಂಭಗೊಂಡಿದೆ.
ಟೆಂಡರ್: ನಗರದ 3.5 ಲಕ್ಷ ಜನತೆಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ವಿದ್ಯುತ್ನ ಮೇಲಿಂದ ಮೇಲೆ ಕಡಿತದಿಂದಾಗುತ್ತಿದ್ದ ತೊಂದರೆ ತಪ್ಪಿಸಲು ನಗರಸಭೆಯು 2009-10ರಲ್ಲಿ ತಡೆರಹಿತ ವಿದ್ಯುತ್ ವಿದ್ಯುತ್ ಮಾರ್ಗ(ಎಕ್ಸ್ಪ್ರೆಸ್ ಲೈನ್) ಅಳವಡಿಕೆಗೆ ಟೆಂಡರ್ ಕರೆದು ಒಟ್ಟ ರು. 64,37,933 ವೆಚ್ಚದ ಕಾಮಗಾರಿಗೆ ಆಂಧ್ರದ ಕರೀಂ ನಗರ ಮೂಲದ ಗುತ್ತಿಗೆ ಸಂಸ್ಥೆ ವೆಂಕಟೇಶ್ವರ ಇಂಡಸ್ಟ್ರೀಸ್ಗೆ ಕಾಮಗಾರಿ ನೀಡಿತ್ತು.
ವಿದ್ಯುತ್ ಕಾಮಗಾರಿ ಆರಂಭಿಸಿದ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸುವ ಮುನ್ನವೇ ಗುತ್ತಿಗೆದಾರರಿಗೆ ಕಾಮಗಾರಿಯ ಪೂರ್ಣ ಮೊತ್ತವನ್ನು ಪಾವತಿಸಿರುವುದು ಅಕ್ರಮದ ತನಿಖೆ ವೇಳೆ ಹೊರಬಿದ್ದಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರ ಸೂಚನೆ ಮೇರೆಗೆ ಸಹಾಯಕ ಆಯುಕ್ತೆ ಮಂಜುಶ್ರೀ ಅವರು ನಡೆಸಿದ ಸಮಗ್ರ ತನಿಖೆಯ ವೇಳೆ ಕಾಮಗಾರಿ ಪೂರ್ಣಗೊಳ್ಳದಿದ್ದರೂ ನಗರಸಭೆಯ ಆಗಿನ ಪೌರಾಯುಕ್ತ ಎಂ.ತಿಮ್ಮಪ್ಪ, ತಾಂತ್ರಿಕ ವಿಭಾಗದ ಅಧಿಕಾರಿಗಳಾದ ಮೋಹನ್ ರಾಜ್, ಶ್ರೀನಿವಾಸ್ ಅವರು ಸ್ಥಳ ಪರಿಶೀಲಿಸದೇ ಗುತ್ತಿಗೆದಾರರಿಗೆ 53,42,134 ರು. ಪಾವತಿಸಿದ್ದಾರೆಂಬ ಸಂಶಯ ವರದಿಯಲ್ಲಿ ವ್ಯಕ್ತಪಡಿಸಲಾಗಿದೆ.
ಅಧಿಕಾರಿಗಳ ರಕ್ಷಣೆ: ವಾಸ್ತವದಲ್ಲಿ ರು. 10,75,797.92 ಮೊತ್ತದ ಕಾಮಗಾರಿ ಮುಗಿದಿದೆ ಎಂದು ವರದಿಯಲ್ಲಿ ತಿಳಿಸಿದ್ದು, ಸದ್ಯ ಈ ವರದಿಯಲ್ಲಿ ಹೆಸರಿಸಿರುವ ಅಧಿಕಾರಿಗಳ ರಕ್ಷಣೆಗೆ ರಾಜಕೀಯ ಪ್ರಭಾವ ಮುಂದಾಗಿರುವ ಮಾತು ಕೇಳಿಬಂದಿದೆ. ತನಿಖಾ ವರದಿ ಕೈಸೇರು ತ್ತಿದ್ದಂತೆಯೇ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅವರು ಆಗಿನ ಪೌರಾಯುಕ್ತ ಹಾಗೂ ಹಾಲಿ ಅಪರ ಡಿಸಿ ಎಂ. ತಿಮ್ಮಪ್ಪ ಮತ್ತಿತರರಿಗೆ ಶೋಕಾಸ್ ನೋಟಿಸ್ ನೀಡುವ ಮಾತನಾಡಿದ್ದರು.
ಆದರೆ ದಿನಗಳೆದಂತೆ ಜಿಲ್ಲಾಧಿಕಾರಿ ರಾಗ ಬದಲಿಸಿದ್ದು, ಈಗ ವರದಿಯಲ್ಲಿನ ಕೆಲ ಅಂಶಗಳ ಬಗ್ಗೆ ಸಂಶಯವಿದೆ. ಮೇಲಧಿ ಕಾರಿಗಳನ್ನೇ ಹೊಣೆಯಾಗಿಸುವುದು ಸರಿಯಲ್ಲ. ಹಾಗಾಗಿ ಪರಿಷ್ಕೃತ ವರದಿ ಸಲ್ಲಿಕೆಗೆ ಸಹಾಯಕ ಆಯುಕ್ತೆ ಮಂಜುಶ್ರೀ ಅವರಿಗೆ ಕೇಳುವುದಾಗಿ ಹೇಳಿದ್ದಾರೆ.
ವೃತ್ತಿ ವೈಷಮ್ಯದ ಆರೋಪ: ಈ ಮಧ್ಯೆ ಸಹಾಯಕ ಆಯುಕ್ತೆ ಮಂಜುಶ್ರೀ ಮತ್ತು ಅಕ್ರಮದ ಆರೋಪ ಹೊತ್ತಿರುವ ಅಪರ ಡಿಸಿ ಎಂ.ತಿಮ್ಮಪ್ಪ ಅವರ ಮಧ್ಯೆ ವೃತ್ತಿ ವೈಷಮ್ಯವಿದೆ ಎಂದು ಬಿಂಬಿಸುವ ಕಾರ್ಯ ಈಗ ಆರಂಭಗೊಂಡಿದೆ. ಒಂದೆಡೆ ಜಿಲ್ಲಾಡಳಿತದ ಪ್ರಮುಖ ಅಧಿಕಾರಿಗಳು ಅಕ್ರಮದಿಂದ ಪಾರಾಗಲು ಪ್ರಯತ್ನ ಆರಂಭಿಸಿದ್ದರೆ, ಮತ್ತೊಂದೆಡೆ ವಿವಿಧ ಪ್ರಗತಿ ಪರ ಸಂಘಟನೆಗಳು ಹೋರಾಟದ ಹಾದಿ ಹಿಡಿದಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಮುಖಂಡ ಅಂಬಣ್ಣ ಅರೋಲಿ, ಜಿಲ್ಲಾಡಳಿತಅಕ್ರಮದ ಕುರಿತ ತನಿಖಾ ವರದಿಯನ್ನು ದುರ್ಬಲಗೊಳಿಸುವ ಕಾರ್ಯಕ್ಕೆ ಕೈಹಾಕಿದ್ದಾರೆ. ಅಧಿಕಾರಿಗಳ ರಕ್ಷಣೆಗೆ ನಿಂತಿರುವುದು ಸ್ಪಷ್ಟ. ಆದರೆ ಸಂಘಟನೆಗಳು ಇಂಥದ್ದಕ್ಕೆ ಅವಕಾಶ ನೀಡುವುದಿಲ್ಲ. ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದಾರೆ.
ದಿಕ್ಕು ತಪ್ಪಿಸುವ ತಂತ್ರ: ಒಂದೆಡೆ ಸಹಾಯಕ ಆಯುಕ್ತರ ವರದಿಯ ಬಗ್ಗೆ ಸಂಘಟನೆಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಮೇಲಧಿಕಾರಿಗಳಲ್ಲಿ ಅಸೂಯೆ ಮೂಡಿಸಿರಲಿಕ್ಕೂ ಸಾಕು. ಹೀಗೆ ಹತ್ತು ಹಲವು ಗೊಂದಲಗಳ ಮಧ್ಯೆಯೇ ಜಿಲ್ಲಾಧಿಕಾರಿಗಳು ತನಿಖೆಯ ಕುರಿತು ಪರಿಷ್ಕೃತ ವರದಿ ಸಲ್ಲಿಸಲು ಸೂಚಿಸಿರುವುದು ಇಡೀ ಪ್ರಕರಣವನ್ನೇ ದಿಕ್ಕು ತಪ್ಪಿಸುವ ತಂತ್ರಗಾರಿಕೆ ಬಗ್ಗೆ ಸಾರ್ವಜನಿಕರಲ್ಲಿ ಸಂದೇಹ ವ್ಯಕ್ತವಾಗಿದೆ.