ಲಿಂಗಸ್ಗೂರು; ವಿವಿಧೆಡೆ ಹನುಮ ಜಯಂತಿ ಆಚರಣೆ
ಲಿಂಗಸ್ಗೂರು: ಹನುಮ ಜಯಂತಿ ಅಂಗವಾಗಿ ಶನಿವಾರ ತಾಲೂಕಿನ ವಿವಿಧೆಡೆಯ ಆಂಜನೇಯ ದೇವಸ್ಥಾನಗಳಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪಟ್ಟಣದ ದೊಡ್ಡ ಹನುಮಂತ ದೇವಸ್ಥಾನ ಹಾಗೂ ತಾಲೂಕಿನ ಕಸಬಾ ಲಿಂಗಸ್ಗೂರಿನ ಪ್ರಸಿದ್ಧ ಕುಪ್ಪಿ ಭೀಮರಾಯ ದೇವರು, ವಂದಲಿ, ಛತ್ತರ, ಗುರುಗುಂಟಾ ಸೇರಿ ವಿವಿಧ ಗ್ರಾಮಗಳ ಆಂಜನೇಯ ದೇವಸ್ಥಾನಗಳಲ್ಲಿ ಹನುಮ ವ್ರತ ಮತ್ತು ಹನುಮ ಜಯಂತಿ ನಿಮಿತ್ತ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ಭಕ್ತರು ದೇವರ ದರ್ಶನ ಪಡೆದರು. ಈ ವೇಳೆ ಭಜನೆ, ಸಂಕೀರ್ತನೆ ಸೇರಿ ದೇವರಿಗೆ ವಿಶೇಷ ಅಲಂಕಾರ, ಅಭಿಷೇಕ ನೆರವೇರಿಸಲಾಯಿತು.
ಸದಾಶಿವ ಆಯೋಗ ವರದಿ ಜಾರಿಯಾದರೆ ಹೋರಾಟ
ಲಿಂಗಸ್ಗೂರು: ಒಳ ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗವು ನೀಡಿರುವ ವರದಿಯನ್ನು ಸರ್ಕಾರ ಜಾರಿಗೊಳಿಸಿದಲ್ಲಿ ಪರಿಶಿಷ್ಟ ಜಾತಿಯಲ್ಲಿನ 99 ಜಾತಿ ಜನಾಂಗದವರು ಹೋರಾಟಕ್ಕೆ ಮುಂದಾಗುವುದಾಗಿ ಭೋವಿ ಸಮಾಜದ ಹಿರಿಯ ಮುಖಂಡ, ಪುರಸಭೆ ಮಾಜಿ ಸದಸ್ಯ ಹನುಮಂತಪ್ಪ ಹಿರೇಮನಿ ಎಚ್ಚರಿಸಿದ್ದಾರೆ. ಅವರು ಶನಿವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನಬದ್ಧವಾಗಿ ಅನುಸೂಚಿತ ಜಾತಿಗಳಡಿಯಲ್ಲಿ ಎಲ್ಲ ರಂಗಗಳಲ್ಲೂ ಹಿಂದುಳಿದ 101 ಜಾತಿಗಳನ್ನು ಪರಿಶಿಷ್ಟ ಜಾತಿಗಳೆಂದು ಗುರುತಿಸಿ ಮೂಲ ಸೌಲಭ್ಯ ಕಲ್ಪಿಸಲು ಶೇ.15ರಷ್ಟು ಮೀಸಲಾತಿ ನೀಡಿ ಸಬಲೀಕರಣಗೊಳಿಸಲು ಸರ್ಕಾರ ಅನುಕೂಲ ಕಲ್ಪಿಸಿದೆ. ಆದರೆ ಸದಾಶಿವ ಆಯೋಗದವರು ಭೋವಿ, ಕೊರಮ, ಕೊರಚ, ಭಜಂತ್ರಿ, ವೇಷಗಾರರಿರುವ ಪ್ರದೇಶಕ್ಕೆ ಭೇಟಿ ನೀಡಿ ಅವರ ಬದುಕಿನ ಬಗ್ಗೆ ಅರಿಯುವ ಕಾರ್ಯ ಮಾಡಿಲ್ಲ ಎಂದು ಆರೋಪಿಸಿದರು. ಪರಿಶಿಷ್ಟ ಜಾತಿಗೆಂದೇ ನೀಡಿದ ಶೇ.15ರಷ್ಟು ಮೀಸಲಾತಿಯಲ್ಲಿ ಮಾದಿಗ, ಚಲವಾದಿಗರಿಗಷ್ಟೇ ಶೇ.11ರಷ್ಟು ಹಾಗೂ ಉಳಿದ 99 ಜಾತಿಗಳಿಗೆ ಕೇವಲ ಶೇ.4ರಷ್ಟು ಮೀಸಲಾತಿಗೆ ಶಿಫಾರಸು ಮಾಡಿದ್ದು ಅವೈಜ್ಞಾನಿಕವಾಗಿದೆ ಎಂದು ಅವರು ಆರೋಪಿಸಿದರು.
ಜಿಲ್ಲಾ ಪೊಲೀಸ್ ಕ್ರೀಡಾಕೂಟ
ರಾಯಚೂರಿನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಆರಂಭಗೊಂಡ ಜಿಲ್ಲಾ ಪೊಲೀಸ್ ಕ್ರೀಡಾಕೂಟದಲ್ಲಿ 100 ಮೀ. ಓಟದಲ್ಲಿ ಸ್ಪರ್ಧಿಗಳು ಪಾಲ್ಗೊಂಡಿದ್ದರು.
ವಸತಿ ಯೋಜನೆಯಲ್ಲಿ ಅಕ್ರಮ; ಆರೋಪ
ಮಸ್ಕಿ: ಸಮೀಪದ ಹಾಲಾಪುರ ಗ್ರಾಪಂ.ನ ಪ್ರಸಕ್ತ ಸಾಲಿನ ಇಂದಿರಾ ಆವಾಸ ಮತ್ತು ಬಸವ ವಸತಿ ಮನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ಹಾಗೂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ವಿವಿಧ ಕಾಮಗಾರಿಗಳಲ್ಲಿ ಗ್ರಾಪಂ ಅಧ್ಯಕ್ಷ ಹಾಗೂ ಅಭಿವೃದ್ಧಿ ಅಧಿಕಾರಿ ಸೇರಿ ಅಕ್ರಮ ನಡೆಸಿದ್ದಾರೆಂದು ಗ್ರಾಪಂ ಸದಸ್ಯರಾದ ಕರಿಯಪ್ಪ, ಮಲ್ಲಮ್ಮ ಹಾಗೂ ದಲಿತ ಮುಖಂಡ ಶಿವಪ್ಪ ಆರೋಪಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಮೀಪದ ಹಾಲಾಪುರ ಗ್ರಾಪಂ ವ್ಯಾಪ್ತಿಯ ಯದ್ದಲದಿನ್ನಿ ಗ್ರಾಮದ ಶೇಖರಪ್ಪ ಗೌಡರ ಹೊಲದಿಂದ ಸಂಗನಗೌಡ ಹೊಲದವರೆಗೆ ನಾಲಾ ಹೂಳೆತ್ತುವ ಒಂದು ಲಕ್ಷ ರು., ಕಾಮಗಾರಿ, ಅಮರಪ್ಪನ ಹೊಲದಿಂದ ಕಾಲುವೆಯವರೆಗೆ ನಾಲಾ ಹೂಳೆತ್ತುವ ಒಂದು ಲಕ್ಷ ರು. ಕಾಮಗಾರಿ, ಸಂಗಪ್ಪ ಛಲವಾದಿ ಹೊಲದಿಂದ ಕುಬೇರಪ್ಪನ ಹೊಲದವರೆಗೆ ನಾಲಾ ಹೂಳೆತ್ತುವ ಒಂದು ಲಕ್ಷ ರು. ಕಾಮಗಾರಿಗಳನ್ನು ಕೈಗೊಳ್ಳದೇ ಬೋಗಸ್ ಬಿಲ್ ಸಲ್ಲಿಸಿ ಅಕ್ರಮ ಬಿಲ್ ಪಾವತಿ ಮಾಡಿಕೊಂಡಿದ್ದಾರೆಂದು ದೂರಿದರು. ಪ್ರಸಕ್ತ ಸಾಲಿನಲ್ಲಿ ಮಂಜೂರಾದ 48 ಇಂದಿರಾ ಆವಾಸ್ ಮತ್ತು 20 ಬಸವ ವಸತಿ ಮನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ಅಕ್ರಮ ನಡೆದಿದೆ ಎಂದು ದೂರಿದರು.
ರಸ್ತೆ ಸಂಚಾರಕ್ಕೆ ಅಡಚಣೆ ನಿವಾರಣೆಗೆ ಆಗ್ರಹ
ಲಿಂಗಸ್ಗೂರು: ಸಿಂಧನೂರು ತಾಲೂಕಿನ ದಡೇಸ್ಗೂರು-ಕೆಂಗಲ್-ಸಾಲಗುಂದಾ-ಸೋಮಲಾಪುರ-ರೌಡಕುಂದಾ ಗ್ರಾಮದ ಮೂಲಕ ಹಾದು ಹೋಗುವ ರಾರಾವಿ-ಬೇಲೂರು ರಸ್ತೆಯಲ್ಲಿ ಸಂಚಾರಕ್ಕೆ ತಡೆಯೊಡ್ಡಲಾಗಿದ್ದು, ಕೂಡಲೇ ಸಂಚಾರಕ್ಕೆ ಮುಕ್ತಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಕುರಿತು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿರುವ ಗ್ರಾಮಸ್ಥರು, ರಾರಾವಿ-ಬೇಲೂರು ರಸ್ತೆ ವ್ಯಾಪ್ತಿಯ ಗ್ರಾಮಸ್ಥರು ಹಾಗೂ ರೈತರು ಕೃಷಿ ಚಟುವಟಿಕೆ, ಬಿತ್ತನೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಾಗಿಸಲು 1972 ರಿಂದ ಈ ಮಾರ್ಗವನ್ನು ಬಳಸುತ್ತಿದ್ದರು. ಸಾರಿಗೆ ಸಂಸ್ಥೆಯ ಬಸ್ಗಳೂ ಸಂಚರಿಸುತ್ತಿದ್ದವು. ಆದರೆ ಈಚೆಗೆ ಕೆಲ ವ್ಯಕ್ತಿಗಳು ಈ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಯುಂಟು ಮಾಡಿ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಈ ಮಾರ್ಗದಲ್ಲಿನ ಅಡಚಣೆ ನಿವಾರಣೆಗೆ ಕ್ರಮಕ್ಕೆ ಕೋರಿ ಸಿಂಧನೂರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕಾರಣ ಕೂಡಲೇ ರಸ್ತೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮದ ಯಂಕಪ್ಪ ಕೆಂಗಲ್, ಅಪ್ಪಣ್ಣ ಕಾಂಬ್ಳೆ, ರಮೇಶ, ಸೈಯ್ಯದ್ ಅಜ್ಮೀರ್ ಸೇರಿ ಅನೇಕರು ಆಗ್ರಹಿಸಿದ್ದಾರೆ.
ಕನಕದಾಸ ಕಾಲೇಜಿನಲ್ಲಿ ಅಗಲಿದ ಗಣ್ಯರಿಗೆ ಸಂತಾಪ
ಸಿಂಧನೂರು: ಸ್ಥಳೀಯ ಕನಕದಾಸ ಕಾಲೇಜಿನಲ್ಲಿ ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೆಲಾ ಹಾಗೂ ಮೈಸೂರು ಮಹಾರಾಜ ವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಧನಕ್ಕೆ ಸಂತಾಪ ಸಭೆ ಆಯೋಜಿಸಲಾಗಿತ್ತು. ಕಾಲೇಜಿನ ಆಡಳಿತಾಧಿಕಾರಿ ಎಂ. ದೊಡ್ಡಬಸವರಾಜ್ ಅವರು ಇಬ್ಬರು ಮಹಾನ್ ವ್ಯಕ್ತಿಗಳ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ, ಮಂಡೇಲಾ ದಕ್ಷಿಣ ಆಫ್ರಿಕಾದಲ್ಲಿ ಕರಿಯರ ಹಕ್ಕುಗಳಿಗೆ ನಿರಂತರ ಹೋರಾಟ ನಡೆಸಿದ್ದರು. ಶೋಷಿತರ ಪರವಾಗಿ ದನಿ ಎತ್ತುವ ಮೂಲಕ ಬಿಳಿಯರ ಕೆಂಗಣ್ಣಿಗೆ ಗುರಿಯಾಗಿದ್ದರು ಎಂದರು. ಇಬ್ಬರು ಗಣ್ಯರ ಕುರಿತು ಪಿಯು ಕಾಲೇಜಿನ ಪ್ರಾಚಾರ್ಯ ಮಂಜುನಾಥ ಸೋಮಲಾಪುರ, ಚಿತ್ರಕಲಾ ಶಿಕ್ಷಕ ಮಲ್ಲಿಕಾರ್ಜುನ ಪೂಜಾರ ಮಾತನಾಡಿದರು. ಭೀಮೋಜಿರಾವ್ ಕುಲಕರ್ಣಿ, ಪ್ರಾಚಾರ್ಯರಾದ ಚೆನ್ನಬಸವ ಸಜ್ಜನ, ತಿರುಪತಿ ಒಡಕಿ, ನಾಗಲಿಂಗನಗೌಡ, ಮಲ್ಲಿಕಾರ್ಜುನ ಕುರುಕುಂದ, ಶಿಕ್ಷಕರು, ವಿಧ್ಯಾರ್ಥಿಗಳು ಇದ್ದರು.
ಗಣ್ಯರೊಂದಿಗೆ ಜಿಐಒ ಸಮಾಲೋಚನೆ
ಸಿಂಧನೂರು: ಗರ್ಲ್ಸ್ ಇಸ್ಲಾಮಿಕ್ ಆರ್ಗನೈಜೇಷನ್ ರಾಜ್ಯ ಸಮಿತಿ ಘನತೆ ನನ್ನ ಹಕ್ಕು ನನ್ನ ಹೊಣೆಗಾರಿಕೆ ಎನ್ನುವ ಧ್ಯೇಯ ವಾಕ್ಯದ ಮೇಲೆ ರಾಜ್ಯಾದ್ಯಂತ ಅಭಿಯಾನ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ನಗರದಲ್ಲಿ ಸಮಾಲೋಚನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ಥಳೀಯ ಜಿಐಒ(ಗರ್ಲ್ಸ್ ಇಸ್ಲಾಮಿಕ್ ಆರ್ಗನೈಜೇಷನ್)ಸಂಘಟನೆಯ ಪ್ರಮುಖರು ವಿವಿಧ ಶಾಲಾ ಮುಖ್ಯಸ್ಥರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿತು. ಡೆಫೋಡಿಲ್ಸ್ ಶಾಲೆಯ ಅಧ್ಯಕ್ಷೆ ಲೀಲಾ, ವಾಸವಿ ಕಾಲೇಜಿನ ಪ್ರಾಚಾರ್ಯ ಉಮಾಪತಿ ಅವರೊಂದಿಗೆ ಚರ್ಚಿಸಲಾಯಿತು. ಜಿಐಒ ಮುಖ್ಯಸ್ಥರಾದ ಫಹಿಮುನ್ನಿಸಾ ಸಾಹೇಬಾ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅಧ್ಯಕ್ಷೆ ಫರ್ವೀನ್ ಜಹಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಲಕ್ಷ್ಮಿ ಹಾಗೂ ಶೀಲವಂತಿ ಇದ್ದರು. ಇತ್ತೀಚೆಗೆ ಸಿಂಧನೂರಿನಲ್ಲಿ ಇದೇ ವಿಷಯ ಕುರಿತು ಬಹಿರಂಗ ಸಭೆ ನಡೆಸಲಾಯಿತು. ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ರಮಾದೇವಿ ಶಂಭೋಜಿ, ಪತ್ರಕರ್ತೆ ಶಿವಲೀಲಾ ಹಿರೇಮಠ, ಪ್ರೇಮಾ ಸಿದ್ದಾಂತಿಮಠ ಇದ್ದರು. ಪಹಿಮುನ್ನಿಸಾ, ಪರ್ವೀನ್ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು.
ರೇಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಕ್ಕೆ ಆದೇಶ
ರಾಯಚೂರು: ನಗರದ ನಿಜಲಿಂಗಪ್ಪ ಕಾಲೋನಿಗೆ ಸಂಪರ್ಕ ಕಲ್ಪಿಸುವ ಬಸವೇಶ್ವರ ವೃತ್ತದ ಬಳಿಯ ನಿರ್ಮಾಣ ಹಂತದ ರೇಲ್ವೆ ಮೇಲ್ಸೇತುವೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಆದೇಶಿಸಿದರು. ಅವರು ತಾಲೂಕಿನ ಮಟಮಾರಿ ಗ್ರಾಮದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿ, ಇಲಾಖೆಯಿಂದ ಚಾಲನೆ ನೀಡಿದ ಕಾಮಗಾರಿಗಳು ನಿಗದಿತ ಸಮಯಕ್ಕೆ ಪೂರ್ಣಗೊಳ್ಳುವಂತೆ ಇಲಾಖೆಯ ಮೇಲಧಿಕಾರಿಗಳು ಗಮನಹರಿಸಬೇಕು. ಕಾಮಗಾರಿ ತಡವಾದಲ್ಲಿ ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು. ಕೂಡಲೇ ಕಾಮಗಾರಿ ಚುರುಕುಗೊಳಿಸಿ ಪೂರ್ಣಗೊಳಿಸಲು ಅವರು ದಕ್ಷಿಣ ಮಧ್ಯ ರೇಲ್ವೆಯ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಶ್ರೀವಾಸ್ತವ್ ಅವರಿಗೆ ಸೂಚಿಸಿದರು.
ಕರವೇ ರಾಯಚೂರು ನಗರ ಘಟಕಕ್ಕೆ ನಾಗರಾಜ್ ನೇಮಕ
ರಾಯಚೂರು: ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ರಾಯಚೂರು ನಗರ ಘಟಕದ ಅಧ್ಯಕ್ಷರನ್ನಾಗಿ ವೈ.ಎಸ್. ನಾಗರಾಜ್ ಅವರನ್ನು ನೇಮಿಸಲಾಗಿದೆ. ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪಾಟೀಲ್ ಗೂಳಿ ಪ್ರಕಟಣೆ ನೀಡಿದ್ದು, ಸಂಘಟನೆಯ ರಾಜ್ಯಾಧ್ಯಕ್ಷ ಪಿ. ಕೃಷ್ಣೆಗೌಡರ ಶಿಫಾರಸಿನ ಮೇರೆಗೆ ಕನ್ನಡದ ನೆಲ, ಜಲ, ಭಾಷೆಯ ರಕ್ಷಣೆಯೆಡೆಗೆ ಹಾಗೂ ಅನ್ಯಾಯದ ವಿರುದ್ಧ ಹೋರಾಟ ನಡೆಸುವಂತೆ ಸೂಚಿಸಿದ್ದಾರೆ. ನಗರ ಪ್ರದೇಶದಲ್ಲಿ ಸಂಘಟನೆಯ ಬಲವರ್ಧನೆಗೆ ಶ್ರಮಿಸುವಂತೆ ನಾಗರಾಜ್ ಅವರಿಗೆ ಶ್ರೀಕಾಂತ್ ಪಾಟೀಲ್ ಗೂಳಿ ತಿಳಿಸಿದ್ದಾರೆ.
ಶಾಸಕ, ಸಂಸದರಿಂದ ಸಚಿವರ ಗುಣಗಾನ
ರಾಯಚೂರು: ಕೇಂದ್ರ ರೇಲ್ವೆ ಖಾತೆಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ಕಡಿಮೆ ಅವಧಿಯಲ್ಲಿಯೇ ಹೆಚ್ಚಿನ ಯೋಜನೆಗಳನ್ನು ರಾಜ್ಯಕ್ಕೆ ಕೊಡುಗೆಯಾಗಿ ನೀಡಿರುವ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಂದಾಗಿ ರಾಜ್ಯದ ಅಭಿವೃದ್ಧಿಗೆ ನೆರವಾಗಿದೆ ಎಂದು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು. ಮಟಮಾರಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ರೇಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿ, ಖರ್ಗೆ ದೂರದೃಷ್ಟಿಯ ಫಲವಾಗಿ ರಾಜ್ಯಕ್ಕೆ ಸಾಕಷ್ಟು ನೆರವಾಗಿದೆ. ಯಾದಗಿರಿಯಲ್ಲಿ ರೈಲು ಬೋಗಿಗಳ ನಿರ್ಮಾಣ ಫ್ಯಾಕ್ಟರಿ ಸ್ಥಾಪನೆಗೆ ಈಗಾಗಲೇ ಅವರು ಕ್ರಮ ಕೈಗೊಂಡಿದ್ದಾರೆಂದರು. ಸಂಸದ ಸಣ್ಣ ಫಕೀರಪ್ಪ ಮಾತನಾಡಿ, ರಾಯಚೂರು ನಗರದ ವಿದ್ಯಾಭಾರತಿ ಶಾಲೆಯ ಬಳಿ ರೇಲ್ವೆ ಕೆಳಸೇತುವೆ ನಿರ್ಮಾಣಕ್ಕೆ ಶೀಘ್ರ ಚಾಲನೆ ನೀಡುವ ನಿಟ್ಟಿನಲ್ಲಿ ಈಗಾಗಲೇ ಖರ್ಗೆ ಅವರು ಕ್ರಮ ಕೈಗೊಂಡಿದ್ದು, ಚಾಲನೆ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಲಾ ಮಕ್ಕಳಿಗೆ 'ಸಿಹಿ' ಸವಿಯುವ ಯೋಗ
ಲಿಂಗಸ್ಗೂರು: ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಒಂದೇ ತೆರನಾದ ಊಟ ಸವಿಯುತ್ತಿದ್ದ ಶಾಲಾ ಮಕ್ಕಳಿಗೆ ಬಿಸಿಯೂಟ ಯೋಜನೆಯಡಿ ಬಿಸಿಯೂಟಕ್ಕೆ ಚಪಾತಿ, ಉಪ್ಪಿಟ್ಟು ಹಾಗೂ ಗೋಧಿ ಪಾಯಸ ಸವಿಯೋಗ ಒದಗಿದೆ. ಕೇಂದ್ರ ಸರ್ಕಾರ 2013-14ನೇ ಸಾಲಿಗೆ ಮೊದಲ ತ್ರೈ ಮಾಸಿಕದಲ್ಲಿ ರಾಗಿ ಮತ್ತು ಗೋಧಿಯನ್ನು ಬಿಡುಗಡೆಗೊಳಿಸಿರಲಿಲ್ಲ. ರಾಜ್ಯ ಸರ್ಕಾರ ಮೂರು ಹಾಗೂ ನಾಲ್ಕನೇ ತ್ರೈ ಮಾಸಿಕ ಆಹಾರ ಧಾನ್ಯ ಹಂಚಿಕೆಯಲ್ಲಿ ಗೋಧಿ ಬಿಡುಗಡೆಗೊಳಿಸುವ ಮೂಲಕ ಈ ಹೊಸ ಯೋಜನೆಗೆ ಚಾಲನೆ ನೀಡಿದೆ. ವಾರದಲ್ಲಿ ಒಂದು ಅಥವಾ ಎರಡು ದಿನದಂತೆ 1ರಿಂದ 5ನೇ ತರಗತಿ ಮಕ್ಕಳಿಗೆ 100 ಗ್ರಾಂ. ಗೋಧಿ, 6ರಿಂದ 10ನೇ ತರಗತಿ ಮಕ್ಕಳಿಗೆ 150 ಗ್ರಾಂ. ಗೋಧಿ ಹಂಚಿಕೆ ಮಾಡಲಾಗಿದೆ. ಗೋಧಿಯನ್ನು ಹಿಟ್ಟು ಅಥವಾ ರವೆ ಮಾಡಲು ತಗಲುವ ವೆಚ್ಚ ಮಧ್ಯಾಹ್ನ ಉಪಹಾರ ಯೋಜನೆ ಅನುದಾನದಲ್ಲಿ ಭರಿಸಬೇಕಿದೆ.
ಕಾಡು ಕೃಷಿ; ಸಿಂಧನೂರಿನಲ್ಲಿ 24ರಂದು ಸಂವಾದ
ಸಿಂಧನೂರು: ಅಸಹಜ ಕೃಷಿಯಿಂದಾಗಿ ಪರಿಸರ ನಾಶವಾಗುತ್ತಿದ್ದು, ಕಾಡು ಕೃಷಿಯೊಂದೇ ಪರಿಹಾರ ಎಂದು ಕೃಷಿ ಭಾರತ ಪತ್ರಿಕೆ ಸಂಪಾದಕ, ಹೋರಾಟಗಾರ ಚಂದ್ರಶೇಖರ ಬಾಳೆ ಹೇಳಿದರು. ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಸೂರಿನಲ್ಲಿ ವಿಜ್ಞಾನಿ ಡಾ. ಖಾದರ್ 8 ಎಕರೆ ಜಮೀನನ್ನು ಖರೀದಿಸಿ ಕಾಡು ಕೃಷಿ ಮೂಲಕ 36 ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ. ಭೂಮಿಯಲ್ಲಿ ಸೂಕ್ಷ್ಮಾಣು ಜೀವಿಗಳನ್ನು ಉತ್ಪತ್ತಿ ಮಾಡಿ ಕಾಡು ಕೃಷಿ ಕೈಗೊಂಡಿದ್ದಾರೆ. ಅತಿಯಾದ ರಸಗೊಬ್ಬರಗಳ ಬಳಕೆಯಿಂದಾಗಿ ಭೂಮಿ ಸತ್ವಹೀನವಾಗಿದೆ. ಇದಕ್ಕೆ ಡಾ. ಖಾದರವರ ಕಾಡು ಕೃಷಿ ರೈತರಿಗೆ ಮಾದರಿಯಾಗುತ್ತದೆ ಎಂದು ವಿವರಿಸಿದರು. ಈ ಹಿನ್ನೆಲೆಯಲ್ಲಿ ಡಿ.24ರಂದು ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕೃಷಿ ವಿವಿ ಸಭಾಂಗಣದಲ್ಲಿ ಸುಮಾರು 600 ಜನ ರೈತರಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದಾದ್ಯಂತ ರೈತರು ಭಾಗವಹಿಸುವರು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ರೈತರಾದ ರಾಮನಗೌಡ ಜಾಲಿಬೆಂಚಿ, ಮಾಣಿಕಪ್ಪ, ಮುಖಂಡರಾದ ಬಿ. ಲಿಂಗಪ್ಪ, ಕಂಟೆಪ್ಪ ಉಪಸ್ಥಿತರಿದ್ದರು.
ಉಡುಮಗಲ್ ಖಾನಾಪುರ ಗ್ರಾಮದಲ್ಲಿ ಏಡ್ಸ್ ದಿನಾಚರಣೆ
ರಾಯಚೂರು: ತಾಲೂಕಿನ ಉಡುಮಗಲ್ ಖಾನಾಪುರ ಗ್ರಾಮದಲ್ಲಿ ಇತ್ತೀಚೆಗೆ ವಿಶ್ವ ಏಡ್ಸ್ ದಿನಾಚರಣೆ ಸಮಾರಂಭ ಆಯೋಜಿಸಲಾಗಿತ್ತು. ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ ಮಾತನಾಡಿ, ಏಡ್ಸ್ ಹರಡುವಿಕೆಯ ವಿಧಾನಗಳು ಮತ್ತು ರೋಗ ನಿಯಂತ್ರಣ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಪ್ರಭಾರಿ ಮುಖ್ಯಗುರು ಖಾಜಾ ಹುಸೇನ್ ಆನಾಹೊಸೂರು ವಹಿಸಿ ಆರೋಗ್ಯಕರ ಜೀವನ ನಡೆಸಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಆರೋಗ್ಯ ಸಹಾಯಕ ನರಸಿಂಹಲು, ಶಿಕ್ಷಕರಾದ ರವಿ ಮುದಗಲ್, ಭಾಗ್ಯಲಕ್ಷ್ಮಿ ಉಪಸ್ಥಿತರಿದ್ದರು. ಶಾಲೆಯ ವಿದ್ಯಾರ್ಥಿಗಳು, ಬೋಧಕ ವರ್ಗ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಚುನಾವಣೆ ಫಲಿತಾಂಶದಿಂದ ಪರಿಣಾಮವಿಲ್ಲ: ಖರ್ಗೆ
ರಾಯಚೂರು: ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಕಾಂಗ್ರೆಸ್ಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಸೋಲಾಗುತ್ತದೆ ಎಂಬ ಲೆಕ್ಕಾಚಾರ ಸರಿಯಲ್ಲ. ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶವು ಲೋಕಸಭೆ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಅವರು ತಾಲೂಕಿನ ಮಟಮಾರಿ ಗ್ರಾಮದಲ್ಲಿ ಶನಿವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಥಳೀಯ ಸರ್ಕಾರಗಳ ಆಡಳಿತ ವಿರೋಧಿ ಅಲೆ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಣುತ್ತೇವೆ ಎಂದರು, ನರೇಂದ್ರ ಮೋದಿ ಪ್ರಭಾವ ಬೀರಲಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ ತಾವು ರೇಲ್ವೆ ಇಲಾಖೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದು ರಾಜಕೀಯ ವಿಚಾರಗಳ ಚರ್ಚೆ ಬೇಡ ಎಂದು ಜಾರಿಕೊಂಡರು.
ಲೋಹ ಸಂಗ್ರಹಣ ಸಮಿತಿ; ಇಂದು ಏಕತಾ ಓಟ
ರಾಯಚೂರು: ಲೋಹ ಸಂಗ್ರಹಣ ಸಮಿತಿಯ ಜಿಲ್ಲಾ ಘಟಕದಿಂದ ಲೋಹಪುರುಷ ಸರ್ದಾರ್ ವಲ್ಲಭಭಾಯಿ ಪಟೇಲರ ಪ್ರತಿಮೆ ಸ್ಥಾಪನೆ ಅಭಿಯಾನದ ಅಂಗವಾಗಿ ನಗರದಲ್ಲಿ ಡಿ.15ರಂದು ಏಕತಾ ಓಟ ಆಯೋಜಿಸಲಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಯ ಜಿಲ್ಲಾ ಸಂಚಾಲಕ ಗಿರೀಶ್ ಕನಕವೀಡು ಅವರು, ಸರ್ದಾರ್ ವಲ್ಲಭಭಾಯಿ ಪಟೇಲರ ಪುಣ್ಯತಿಥಿಯ ಅಂಗವಾಗಿ ಡಿ.15ರಂದು ಏಕತಾ ಓಟ ಮತ್ತು ನಡಿಗೆ ನಗರದ ವಲ್ಲಭಭಾಯಿ ಪಟೇಲರ ಪುತ್ಥಳಿಯಿಂದ ಆರಂಭಗೊಳ್ಳಲಿದ್ದು, ನಗರದ ಚಂದ್ರಮೌಳೇಶ್ವರ ವೃತ್ತ, ಜೈನ್ ಮಂದಿರ್, ಸೂಪರ್ ಮಾರ್ಕೆಟ್, ತೀನ್ ಕಂದೀಲ್ ಮಾರ್ಗವಾಗಿ ಶೆಟ್ಟಿಬಾವಿ ಚೌಕ್ವರೆಗೆ ಸಾಗಲಿದೆ ಎಂದು ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದ್ದಾರೆ.
ಬಾಲ್ಯ ವಿವಾಹ, ಕಾರ್ಮಿಕ ಪದ್ಧತಿ ತಡೆ; ಸಂವಾದ
ರಾಯಚೂರು: ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಬಾಲ್ಯ ವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿ ತಡೆಯುವಲ್ಲಿ ಬಾಲಕಿಯರ ಪಾತ್ರ ಎಂಬ ವಿಷಯದ ಕುರಿತು ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾಲೇಜಿನ ಪ್ರಾಚಾರ್ಯ ಸದಾಶಿವಪ್ಪ, ಪ್ರತಿ ಕುಟುಂಬ, ಗ್ರಾಮಸ್ಥರು, ದೇಶ ಮತ್ತು ಸಮಾಜದ ಅಭಿವೃದ್ಧಿಗೆ ಮಾರಕವಾಗಿರುವ ಬಾಲ್ಯ ವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿಗಳನ್ನು ತಡೆಯಲು ಮುಂದಾಗುವಂತೆ ಸಲಹೆ ನೀಡಿದರು. ಯುನಿಸೆಫ್ನ ಮಕ್ಕಳ ಸಂರಕ್ಷಣಾ ಯೋಜನೆಯ ಸಂಯೋಜಕ ರಾಘವೇಂದ್ರ ಭಟ್ ಮಾತನಾಡಿ, ಬಾಲ್ಯ ವಿವಾಹದ ದುಷ್ಪರಿಣಾಮಗಳು, ಸಾಧಕ- ಬಾಧಕಗಳು ಅದರಿಂದಾಗುವ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿನಿಯರಿಗೆ ತಿಳಿಸಿಕೊಟ್ಟರು. ಉಪನ್ಯಾಸಕಿ ಬಸಮ್ಮ ಪ್ರತಿಜ್ಞಾ ವಿಧಿ ಬೋಧಿಸಿದರು. ಉಪನ್ಯಾಸಕರಾದ ಡಾ. ಕುಂಟೆಪ್ಪ ಗೌರೀಪುರ, ರಾಜಾಸಾಬ್ ಸೇರಿ ಇನ್ನಿತರ ಬೋಧಕ ವರ್ಗದವರು ಹಾಗೂ ವಿದ್ಯಾರ್ಥಿನಿಯರಿದ್ದರು. ಯುನಿಸೆಫ್ನ ಸಹ ಸಂಯೋಜಕ ನಾಗರಾಜ್ ಇದ್ದರು.
ಚಾಲಕ- ನಿರ್ವಾಹಕರರನ್ನು ಭ್ರಷ್ಟರನ್ನಾಗಿಸಿದವರೇ ಅಧಿಕಾರಿ
ಲಿಂಗಸ್ಗೂರು: 'ಕನ್ನಡಪ್ರಭ' ದಿನಪತ್ರಿಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿನ ನಡೆಯುವ ಲಂಚ, ಕಿರುಕುಳ, ದರ್ಪ, ದಬ್ಬಾಳಿಕೆ ಚಕ್ರಗಳ ಮೇಲೆ ಓಡುತಿದೆ ಬಸ್ಸು ಎಂಬ ಶೀರ್ಷಿಕೆಯಡಿ ಸಾಮಾಜಿಕ ಕಳಕಳಿ ಮೂಡಿಸಿರುವುದು ಅಭಿನಂದನಾರ್ಹ. ರಾಜ್ಯದ ಅತ್ಯುತ್ತಮ ಸೇವೆಗಳಲ್ಲಿ ಒಂದಾದ ಸಾರಿಗೆ ಸೇವೆ ಸರ್ಕಾರದ ಬೊಕ್ಕಸಕ್ಕೆ ಲಾಭ ಮಾಡಿ ಕೊಡುವಲ್ಲಿ ಶ್ರಮಿಸುತ್ತಿದೆ. ಇದರಿಂದ ಬೇಸತ್ತು ಕೆಲ ನೌಕರರು ತಮ್ಮ ನೌಕರಿ ಬಿಟ್ಟು ಹೋದ ಪ್ರಸಂಗ ಎದುರಾಗಿದೆ. ಸರ್ಕಾರ ಸಾರಿಗೆ ಸಂಸ್ಥೆಯಲ್ಲಿನ ಅವ್ಯವಸ್ಥೆ, ಭ್ರಷ್ಟಾಚಾರ, ಕಿರುಕುಳ, ದೌರ್ಜನ್ಯ ತಡೆಗಟ್ಟಲು ವಿಶೇಷ ಕಾನೂನು ರೂಪಿಸಬೇಕು.