ಸುದ್ದಿ ಸಂಕ್ಷೇಪ
17ರಂದು ಪುಣ್ಯಾರಾಧನೆ
ಸಿಂಧನೂರು: ತಾಲೂಕಿನ ಸುಕ್ಷೇತ್ರ ಅಂಬಾಮಠದಲ್ಲಿ ಸಿದ್ದಪ್ಪ ತಾತನವರ 10ನೇ ಪುಣ್ಯಾರಾಧನೆಯನ್ನು ಡಿ.17ರಂದು ಹಮ್ಮಿಕೊಳ್ಳಲಾಗಿದೆ ಎಂದು ಸದ್ಭಕ್ತ ಮಂಡಳಿ ತಿಳಿಸಿದೆ. ಪುಣ್ಯರಾಧನೆಯ ಕಾರ್ಯಕ್ರಮದ ಸಾನ್ನಿಧ್ಯವನ್ನು ಅಂಕಲಿಮಠದ ವೀರಭದ್ರ ಸ್ವಾಮಿಗಳು ವಹಿಸಿಕೊಂಡು ಪೂಜಾ ಕಾರ್ಯಕ್ರಮವನ್ನು ನೆರವೇರಿಸುವರು. ಡಿ.16ರಂದು ಅಹೋರಾತ್ರಿ ಮಹಾಭಜನೆ ನಡೆಯುವುದು. ಪುಣ್ಯಾರಾಧನೆಯಲ್ಲಿ ತಾತನವರ ಶಿಷ್ಯಂದಿರು, ಭಕ್ತ ಮಂಡಳಿ ಆಗಮಿಸಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಗ್ರಾಮದ ಸಂಘಟಕರು ಮನವಿ ಮಾಡಿದ್ದಾರೆ.
ನಿಧನಕ್ಕೆ ಸಂತಾಪ
ಸಿಂಧನೂರು: ಹುಟ್ಟು ಹೋರಾಟಗಾರರು, ಕೋಲಿ ಸಮಾಜದ ಮುಖಂಡ ಹಾಗೂ ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ವಿಠಲ ಹೇರೂರ ನಿಧನಕ್ಕೆ ಗಂಗಾಮತ ಸಮಾಜದ ರಾಜ್ಯ ಉಪಾಧ್ಯಕ್ಷ ಎಸ್.ಪಿ. ನಾಗರಾಜ ವಕೀಲರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರು ಈ ಕುರಿತು ಹೇಳಿಕೆ ನೀಡಿದ್ದು, ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಸ್ಥಾಪನೆಯ ರೂವಾರಿಗಳು, ಗಂಗಾಮತ ಸಮಾಜಕ್ಕೆ ಸಂವಿಧಾನಾತ್ಮಕ ಹಕ್ಕುಗಳನ್ನು ಕೊಡಿಸಲು ಸತತವಾಗಿ ಹೋರಾಟ ನಡೆಸಿದ ಹೇರೂರ ಅವರ ನಿಧನದಿಂದ ಸಮಾಜ ಒಬ್ಬ ಅಪ್ರತಿಮ ಹೋರಾಟಗಾರರನ್ನು ಕಳೆದುಕೊಂಡಂತಾಗಿದೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.
ಇಂದು ಸನ್ಮಾನ
ರಾಯಚೂರು: ಅಂತಾರಾಷ್ಟ್ರೀಯ ಸಹಜೀವನ ಸಂಸ್ಥೆ ಮತ್ತು ವಿ.ಎಸ್. ಕಾಂತನವರ ಪ್ರತಿಷ್ಠಾನದಿಂದ ಡಿ.15ರಂದು ಸನ್ಮಾನ ಸಮಾರಂಭ ಆಯೋಜಿಸಲಾಗಿದೆ.ನಗರದ ಕಾಂತನವರ ಸಭಾಭವನದಲ್ಲಿ ಬೆಳಗ್ಗೆ 11.45ಕ್ಕೆ ಬೆಂಗಳೂರಿನ ಕಣ್ವ ಶಾಖಾ ಟ್ರಸ್ಟ್ ನಿಂದ ಕಣ್ವಶ್ರೀ ಪ್ರಶಸ್ತಿ ಪುರಸ್ಕೃತ ಸತ್ಯನಾರಾಯಣ ಮುಜುಂದಾರ್ ಅವರಿಗೆ ಸನ್ಮಾನ ಸಮಾರಂಭ ನಡೆಯಲಿದ್ದು, ಪ್ರತಿಷ್ಠಾನದ ಕೇಂದ್ರ ವ್ಯಕ್ತಿ ವಿ.ಎಸ್. ಕಾಂತನವರ್ ಆಶಯ ನುಡಿಯಲಿದ್ದಾರೆ. ಅಧ್ಯಕ್ಷತೆಯನ್ನು ನಿವೃತ್ತ ಪ್ರಾಧ್ಯಾಪಕ ಪ್ರೊ. ಪಿ. ಮಲ್ಲಣ್ಣ ವಹಿಸುವರು. ಸತ್ಯನಾರಾಯಣ ಮುಜುಂದಾರ್ ಅವರನ್ನು ಸನ್ಮಾನಿಸಲಾಗುತ್ತದೆ. ಅಂತಾರಾಷ್ಟ್ರೀಯ ಸಹಜೀವನ ಸಂಸ್ಥೆಯ ಅಧ್ಯಕ್ಷ ಎಸ್.ಎಂ. ಶಶಿಧರ್ ಪಾಲ್ಗೊಳ್ಳಲಿದ್ದಾರೆಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದೆ.
ಎಎಪಿ ಜಾಥಾ
ರಾಯಚೂರು: ಜನಲೋಕಪಾಲ ಮಸೂದೆ ಬೆಂಬಲಿಸಿ ಮತ್ತು ಜನಸಂಪರ್ಕ ಜಾಥಾ ಅಂಗವಾಗಿ ನಗರದಲ್ಲಿ ಡಿ.15ರಂದು ಆಮ್ ಆದ್ಮಿ ಪಾರ್ಟಿಯಿಂದ ಜಾಥಾ ಆಯೋಜಿಸಲಾಗಿದೆ. ಅಂದು ಸಂಜೆ 5ಕ್ಕೆ ನಗರದ ರೈಲು ನಿಲ್ದಾಣ ವೃತ್ತದಿಂದ ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ, ಸೂಪರ್ ಮಾರ್ಕೆಟ್, ತೀನ್ ಕಂದೀಲ್ ಮಾರ್ಗವಾಗಿ ಚಂದ್ರಮೌಳೇಶ್ವರ ವೃತ್ತವನ್ನು ಜಾಥಾ ತಲುಪಲಿದ್ದು, ನಗರದ ಎಲ್ಲ ಸಮಾನ ಮನಸ್ಕರು ಹಾಗೂ ಆಮ್ ಆದ್ಮಿ ಪಾರ್ಟಿಯ ಬೆಂಬಲಿಗರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಪಕ್ಷದ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.