ಹಣದುಬ್ಬರ; ರೇಲ್ವೆ ಕಾಮಗಾರಿಗಳ ಜಾರಿ ವಿಳಂಬ
ಕ.ಪ್ರ. ವಾರ್ತೆ ರಾಯಚೂರು ಡಿ.14
ಹಣದುಬ್ಬರದ ಪ್ರಭಾವದಿಂದಾಗಿ ಸಿಮೆಂಟ್, ಕಬ್ಬಿಣ, ಡಿಸೇಲ್, ಪೆಟ್ರೋಲ್ ದರದಲ್ಲಿ ಏರಿಕೆಯಾಗಿದ್ದರಿಂದ ರೇಲ್ವೆ ಇಲಾಖೆ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದು, ಅದರಿಂದಾಗಿ ದೇಶದಲ್ಲಿ ಇಲಾಖೆಯಿಂದ ಉದ್ದೇಶಿತ ಒಟ್ಟು 586 ಕಾಮಗಾರಿಗಳು ಜಾರಿಯಲ್ಲಿ ವಿಳಂಬವಾಗಿದೆ ಎಂದು ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಆತಂಕ ವ್ಯಕ್ತಪಡಿಸಿದರು.
ಅವರು ತಾಲೂಕಿನ ಮಟಮಾರಿಯಲ್ಲಿ ಶನಿವಾರ ಮಟಮಾರಿ-ಮಂತ್ರಾಲಯಂ ರೋಡ್ ರೈಲು ನಿಲ್ದಾಣದ ಮಧ್ಯೆ ಜೋಡಿ ಹಳಿಗಳ ಅಳವಡಿಕೆ ಮತ್ತು ತುಂಗಭದ್ರಾ ನದಿ ಮೇಲಿನ ರೇಲ್ವೆ ಸೇತುವೆಯ ಪುನರುಜ್ಜೀವನ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು.
ವಿಳಂಬ: ರೇಲ್ವೆ ಇಲಾಖೆಯು ಇದುವರೆಗೆ ಚಾಲನೆ ನೀಡಿರುವ ನೂತನ ಮಾರ್ಗ, ಜೋಡಿ ಹಳಿಗಳ ಅಳವಡಿಕೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಿಗದಿತ ಸಮಯಕ್ಕೆ ಪೂರ್ಣಗೊಂಡಿಲ್ಲ. ಅದರಿಂದಾಗಿ ನಿರ್ಮಾಣ ವೆಚ್ಚ ಹೆಚ್ಚಳವಾಗಿ ಆರ್ಥಿಕ ಹೊರೆ ಇಲಾಖೆಯ ಮೇಲೆ ಬಿದ್ದಿದೆ. ಹಾಗೆಯೇ ಸ್ಥಳೀಯ ಸರ್ಕಾರಗಳೂ ಸಹ ಉದ್ದೇಶಿತ ಯೋಜನೆಗಳ ಜಾರಿಗೆ ಪೂರಕವಾಗಿ ತಮ್ಮ ಪಾಲಿನ ಅನುದಾನ ನೀಡುವಲ್ಲಿ ವಿಳಂಬ ತೋರುತ್ತಿರುವುದು ಸಮಸ್ಯೆಯನ್ನು ಹೆಚ್ಚಿಸಿದೆ ಎಂದು ತಿಳಿಸಿದರು.
ಹಣದುಬ್ಬರದಿಂದ ನಿರ್ಮಾಣ ಕ್ಷೇತ್ರದಲ್ಲಿ ಬಳಕೆಯಾಗುವ ಎಲ್ಲ ಸಾಮಗ್ರಿಗಳ ದರ ಏರಿಕೆಯಾಗಿದೆ. ಸದ್ಯ ದೇಶದಲ್ಲಿ 4.5 ಲಕ್ಷ ಕೋಟಿ ವೆಚ್ಚದ ಒಟ್ಟು 586 ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ರೇಲ್ವೆ ಬಜೆಟ್ನ ಶೇ.72ರಷ್ಟು ಪಾಲು ಸಿಬ್ಬಂದಿಯ ವೇತನ ಮತ್ತು ಬೋನಸ್ಗೆ ವೆಚ್ಚವಾಗುತ್ತಿರುವುದು ಆರ್ಥಿಕ ಹಿನ್ನಡೆಗೆ ಕಾರಣವಾಗಿದೆ ಎಂದು ಹೇಳಿದರು.
ಬೋಗಿಗಳ ನಿರ್ಮಾಣ ಘಟಕ: ಹೊಸ ರೈಲುಗಳ ಸಂಚಾರಕ್ಕೆ ಎಂಜಿನ್ ಮತ್ತು ಬೋಗಿ ನಿರ್ಮಾಣಕ್ಕೆ ಕೋಟ್ಯಂತರ ರು. ಅವಶ್ಯಕವಿದೆ. ಈ ನಿಟ್ಟಿನಲ್ಲಿ ಅನಗತ್ಯ ವೆಚ್ಚ ಕಡಿತಗೊಳಿಸಿ, ಅನುದಾನ ಸರಿದೂಗಿಸುವ ಕಾರ್ಯಕ್ಕೆ ಇಲಾಖೆ ಕೈ ಹಾಕಿದೆ ಎಂದ ಅವರು, ಯಾದಗಿರಿಯಲ್ಲಿ ಜರ್ಮನಿ ತಂತ್ರಜ್ಞಾನದ ನೆರವಿನಿಂದ ಸಣ್ಣ ಪ್ರಮಾಣದ ಬೋಗಿಗಳ ನಿರ್ಮಾಣ ಘಟಕ ಆರಂಭಿಸಲು ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಭೂ ಸ್ವಾಧೀನ ವಿಚಾರದಲ್ಲಿನ ತೊಡಕುಗಳಿಂದಾಗಿ ರೇಲ್ವೆ ಇಲಾಖೆಯ ಉದ್ದೇಶಿತ ಕಾಮಗಾರಿಗಳು ನಿಧಾನಗತಿಯಲ್ಲಿವೆ. ರೇಲ್ವೆ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಒಟ್ಟು 26 ಸಾವಿರ ಕೋಟಿ ರು. ಗಳ ರೇಲ್ವೆ ಯೋಜನೆಗಳು ಜಾರಿಯಾಗಬೇಕಿದ್ದು, ಈ ಪೈಕಿ ರಾಜ್ಯ ಸರ್ಕಾರ 13ಸಾವಿರ ಕೋಟಿ ರು. ರೈಲ್ವೆ ಇಲಾಖೆಗೆ ಪಾವತಿಸಬೇಕಿದೆ ಎಂದು ಹೇಳಿದರು.
ವಿವಿಧ ಅಭಿವೃದ್ಧಿಗೆ ನೆರವು: ರಾಜಕೀಯ ಲಾಭಕ್ಕಾಗಿ ತಾವು ಯಾವುದೇ ಕಾಮಗಾರಿ ಇಲ್ಲವೇ ಅಭಿವೃದ್ಧಿ ಕಾಮಗಾರಿ ಜಾರಿಗೆ ತರುವ ಕಾರ್ಯ ಮಾಡುತ್ತಿಲ್ಲ. ಬದಲಿಗೆ ತಮ್ಮ ಅಧಿಕಾರವಧಿಯಲ್ಲಿ ಕರ್ನಾಟಕಕ್ಕೆ ಹೆಚ್ಚು ಅನುಕೂಲಗಳಾಗಲೆಂಬುದು ತಮ್ಮ ಆಶಯ ಎಂದ ಅವರು, ರಾಜಕೀಯ ನಾಯಕರಿಗೆ ದೂರದೃಷ್ಟಿಯ ಅವಶ್ಯಕತೆಯಿದೆಯೇ ವಿನಃ ಸ್ವಾರ್ಥ ಸಾಧನೆಯೇ ಗುರಿಯಾಗಬಾರದು ಎಂದು ಸಲಹೆ ನೀಡಿದರು.
ಕೇಂದ್ರದ ಯುಪಿಎ ಸರ್ಕಾರ ರಾಜ್ಯದ ಹೈ.ಕ. ಭಾಗಕ್ಕೆ 371ನೇ ಕಲಂ ಜಾರಿಯಲ್ಲಿ ಸಾಕಷ್ಟು ಶ್ರಮಿಸಿದೆ. ಕಳೆದ ಅನೇಕ ವರ್ಷಗಳಿಂದ ಜಾರಿಯಲ್ಲಿದ್ದ ಹೋರಾಟಕ್ಕೆ ಸ್ಪಂದಿಸಿದೆ. ಹೈ.ಕ.ಭಾಗದ ಅಭಿವೃದ್ಧಿ ಕೇಂದ್ರೀಯ ವಿವಿ ಸೇರಿದಂತೆ ವಿವಿಧ ಅಭಿವೃದ್ಧಿಗೆ ನೆರವು ನೀಡಿದೆ ಎಂದು ಹೇಳಿದರು.
ಸಮಾರಂಭದಲ್ಲಿ ದಕ್ಷಿಣ ಮಧ್ಯ ರೇಲ್ವೆಯ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಶ್ರೀವಾಸ್ತವ್, ಶಾಸಕರಾದ ವೆಂಕಟೇಶ ನಾಯಕ, ಡಾ. ಶಿವರಾಜ್ ಪಾಟೀಲ್, ಹಂಪಯ್ಯ ನಾಯಕ, ಹಂಪನಗೌಡ ಬಾದರ್ಲಿ, ಪ್ರತಾಪಗೌಡ ಪಾಟೀಲ್, ತಿಪ್ಪರಾಜು ಹವಾಲ್ದಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ್, ಜಿಪಂ ಅಧ್ಯಕ್ಷೆ ಲಲಿತಮ್ಮ ಪಾಟೀಲ್ ಸೇರಿ ಅನೇಕರಿದ್ದರು.
ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ಜನತೆ ಕಾರ್ಯಕ್ರಮದಲ್ಲಿದ್ದರು.