ಕ್ಯಾನ್ಸರ್ ತಡೆಯಲು ದುಶ್ಚಟ ಬಿಡಿ
ಕನ್ನಡಪ್ರಭ ವಾರ್ತೆ ಸಿಂಧನೂರು ಡಿ.15
ಕರ್ನಾಟಕದಲ್ಲಿ ಕ್ಯಾನ್ಸರ್‌ಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದರಲ್ಲೂ ಯುವಜನಾಂಗ ಗುಟ್ಕಾ ಮತ್ತು ಇತರೆ ಧೂಮಪಾನದಂತಹ ದುಶ್ಚಟಕ್ಕೆ ಒಳಗಾಗುತ್ತಿದ್ದಾರೆ.
ಅದು ಕ್ರಮೇಣ ಕ್ಯಾನ್ಸರ್ ಆಗಿ ಪರಿವರ್ತನೆಯಾತ್ತದೆ. ಕಾರಣ ಯುವಕರು ದುಶ್ಚಟಗಳಿಂದ ದೂರವಿರಬೇಕೆಂದು ಬೆಂಗಳೂರಿನ ಕರ್ನಾಟಕ ಕ್ಯಾನ್ಸರ್ ಸೊಸೈಟಿಯ ಡಾ. ಎಂ.ಆರ್. ಕುಲಕರ್ಣಿ ಸಲಹೆ ನೀಡಿದರು.
ನಗರದ ದುದ್ದುಪೂಡಿ ಮಹಿಳಾ ಕಾಲೇಜಿನಲ್ಲಿ ಭಾನುವಾರ ಕೆನರಾ ಬ್ಯಾಂಕ್ ಮತ್ತು ಕರ್ನಾಟಕ ಕ್ಯಾನ್ಸರ್ ಸೊಸೈಟಿ ಬೆಂಗಳೂರು ಹಾಗೂ ದುದ್ದುಪೂಡಿ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಹಮ್ಮಿಕೊಂಡ ಉಚಿತ ಕ್ಯಾನ್ಸರ್ ತಪಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಶ್ಲಾಘನೆ: ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಕೆನರಾ ಬ್ಯಾಂಕಿನ ಗುಲ್ಬರ್ಗ ವಲಯದ ಸಹಾಯಕ ವ್ಯವಸ್ಥಾಪಕ ಬಿ.ಕೃಷ್ಣರೆಡ್ಡಿ, ಇಂದು ಕ್ಯಾನ್ಸರ್ ರೋಗವನ್ನು ಪ್ರಾರಂಭದ ಹಂತದಲ್ಲಿ ಗುರುತಿಸುವುದು ಅಗತ್ಯವಾಗಿದೆ.
ಸಾಕಷ್ಟು ಬಡ ಜನರಿಗೆ ದೂರದ ಊರುಗಳಿಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಲು ಕಷ್ಟದಾಯಕ. ಇಂತಹ ಶಿಬಿರ ಸಿಂಧನೂರಿನಲ್ಲಿ ನಡೆಯುತ್ತಿರುವುದು ನಾಗರಿಕರಿಗೆ ಅನುಕೂಲಕರವಾಗಲಿದೆ.
ಈ ನಿಟ್ಟಿನಲ್ಲಿ ಸಿಂಧನೂರಿನ ಕೆನರಾ ಬ್ಯಾಂಕ್, ಬೆಂಗಳೂರಿನ ಕರ್ನಾಟಕ ಕ್ಯಾನ್ಸರ್ ಸೊಸೈಟಿಯ ಸರ್ವ ಸದಸ್ಯರ ತಂಡ ಮತ್ತು ರಾಯಚೂರಿನ ನವೋದಯ ದಂತ ವೈದ್ಯಕೀಯ ಆಸ್ಪತ್ರೆ ಹಾಗೂ ದುದ್ದುಪೂಡಿ ಮಹಿಳಾ ಕಾಲೇಜಿನ ಎನ್.ಎಸ್.ಎಸ್. ಸ್ವಯಂಸೇವಕರ ಕಾರ್ಯ ಶ್ಲಾಘನೀಯ ಎಂದರು.
400 ಜನರ ತಪಾಸಣೆ: ಸುಮಾರು 400 ಜನ ಶಿಬಿರಾರ್ಥಿಗಳು ಶಿಬಿರದಲ್ಲಿ ತಪಾಸಣೆ ಮಾಡಿಸಿಕೊಂಡರು.
ಅವರಲ್ಲಿ ಕ್ಯಾನ್ಸರ್, ದಂತ ಚಿಕಿತ್ಸೆ, ಹೃದಯ ಸಂಬಂಧಿ ಕಾಯಿಲೆ ಮತ್ತು ಮದು ಮೇಹ ಎಲ್ಲಾ ಮಾದರಿಯ ಸಾಮಾನ್ಯ ಕಾಯಿಲೆಗಳನ್ನು ಪರೀಕ್ಷಿಸಿ ವೈದ್ಯರು ಸೂಕ್ತ ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆನರಾ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಡಿ.ವಾಸುದೇವ್ ರಾವ್ ವಹಿಸಿದ್ದರು.
ಸಿಂಧನೂರು ಶಾಖೆಯ ವ್ಯವಸ್ಥಾಪಕ ವಿರುಪಾಕ್ಷಿ, ಸಾಯಿನಾಥ್ ಮತ್ತು ದುದ್ದುಪೂಡಿ ಸಂಸ್ಥೆಯ ಡಿ. ರಾಮಕೃಷ್ಣಮೂರ್ತಿ, ಗುಲ್ಬರ್ಗ ವಿಭಾಗದ ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಎಸ್. ಶಿವರಾಜ, ಕೆ. ಶರಣಬಸವ ವಕೀಲರು ಮತ್ತು ಸಂಸ್ಥೆಯ ಕಾರ್ಯದರ್ಶಿ ಆರ್.ಸಿ. ಪಾಟೀಲ್ ಮತ್ತಿತರರು ಭಾಗವಹಿಸಿದ್ದರು.
ಶಿಬಿರದಲ್ಲಿ ಬೆಂಗಳೂರಿನ ವೈದ್ಯರಾದ ಡಾ. ಎಂ.ಆರ್. ಕುಲಕರ್ಣಿ, ಡಾ. ಸತ್ಯವತಿ, ಡಾ. ಸಿಂಧೂರ, ಡಾ. ಯಾಸ್ಮಿನ್, ಡಾ. ಆನಂದ ಮೆಹತಾ ಡಾ. ಜಹೀರ್ ಉಪಸ್ಥಿತರಿದ್ದರು.