ಲಿಂಗಸ್ಗೂರು; ನಾಳೆ ಕುಪ್ಪಿಭೀಮ ಜಾತ್ರೆ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಡಿ.15
ಪಟ್ಟಣದ ಪುರಸಭೆ ವ್ಯಾಪ್ತಿಯ ಕಸಬಾ ಲಿಂಗಸ್ಗೂರು ಗ್ರಾಮದ ಆರಾಧ್ಯದೈವ ಕುಪ್ಪೀಭೀಮ(ಆಂಜನೇಯ) ದೇವರ ಜಾತ್ರಾ ಮಹೋತ್ಸವ ನಿಮಿತ್ತ ಡಿ.17ರಂದು ಸಂಜೆ 6.30ಕ್ಕೆ ಮಹಾರಥೋತ್ಸವ ಕಾರ್ಯಕ್ರಮ ಜರುಗಲಿದೆ.
ಕಸಬಾ ಲಿಂಗಸ್ಗೂರು ಕ್ರಿ.ಶ. 1124ರಲ್ಲಿ ತ್ರಿಭುವನಮಲ್ಲನು ಕಲ್ಯಾಣದ ಸೀಮೆಯಲ್ಲಿದ್ದಾಗ ಆತನ ರಾಣಿ ಅಬ್ಬಲಾದೇವಿ ಕರಡಿಕಲ್ಲು ಬಳಿಯ 300 ಲಿಂಗವನ್ನು ಆಳುತ್ತಿದ್ದಳು. ಗ್ರಾಮದ ಅಷ್ಟದಿಕ್ಕುಗಳಲ್ಲಿ ಲಿಂಗುಗಳಿರುವುದರಿಂದ ಲಿಂಗ ಎಂದು ಹೆಸರು ಬಂದಿತು. ಕಸಬಾ ಎಂದರೆ ಗ್ರಾಮ. ಕ್ರಮೇಣ ಲಿಂಗಸಾಗರ ಎಂದು ಕರೆಯಲ್ಪಟ್ಟಿತು. ಕ್ರಮೇಣ ಈ ಗ್ರಾಮಕ್ಕೆ ಕಸಬಾ ಲಿಂಗಸ್ಗೂರು ಎಂದು ಕರೆಯಲ್ಪಟ್ಟಿತು.
ವಿಜಯನಗರ ಅರಸರ ಕಾಲದ್ದು: ಕಸಬಾ ಲಿಂಗಸ್ಗೂರಲ್ಲಿ ಸುಮಾರು 20ಕ್ಕೂ ಅಧಿಕ ವಿವಿಧ ಜನಾಂಗದ ದೇವಸ್ಥಾನಗಳಿವೆ. ಈಶಾನ್ಯ ಭಾಗದಲ್ಲಿ ಕುಪ್ಪೀ ಎಂಬ ಗ್ರಾಮದಲ್ಲಿ ಆಂಜನೇಯ ದೇವರ ಭವ್ಯ ದೇವಾಲಯವಿದೆ. ಕುಪ್ಪೀಭೀಮ ಎಂದು ಕರೆಯಲಾಗುತ್ತದೆ. ಇಲ್ಲಿನ ವಿಗ್ರಹ ಜನಮೇಜಯರಾಯನ ಕರಾರ್ಜಿತವಾಗಿದ್ದು, ವ್ಯಾಸರಾಜರಿಂದ ಪ್ರಪೂಜಿತ, ವಿಜಯನಗರ ಸಾಮ್ರಾಜ್ಯದ ರಾಜಗುರು ಶ್ರೀಮಧ್ ವ್ಯಾಸರಾಯರು ಕ್ರಿ.ಶ.1,500ರಲ್ಲಿ ನಾಡಿನ ವಿವಿಧ ಭಾಗಗಳಲ್ಲಿ 732 ಪ್ರಾಣದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿದರು. ಅವುಗಳಲ್ಲಿ ಕಸಬಾ ಲಿಂಗಸ್ಗೂರಿನ ಕುಪ್ಪೀಭೀಮ ಮೂರ್ತಿಯೂ ಒಂದಾಗಿದೆ ಎಂದು ಸೋಮನಾಥ ಕವಿ ಹೇಳುತ್ತಾನೆ.
ಭವ್ಯ ಇತಿಹಾಸ: ಕಸಬಾ ಲಿಂಗಸ್ಗೂರಿಗೆ ದೇಸಾಯಿ ದಂಡು ಸುಲಿಗೆ ಮಾಡಲು ಬಂದಾಗ ಕರಿಯ ಕಂಬಳಿ ಹೊದ್ದು, ಕಾಲ್ಮರಿ ಮೆಟ್ಟಿನಿಂತ ತಳವಾರನಿಗೆ ಗ್ರಾಮ ಪ್ರವೇಶಿಸುವ ದಾರಿ ಕೇಳಿದರಂತೆ. ಆಗ ತಳವಾರ ಸಂತೆಕೆಲ್ಲೂರು ಕಡೆಗೆ ಕೈ ಮಾಡಿ ತೋರಿಸಿದನಂತೆ.
ಆ ಕಡೆಗೆ ನಡೆದ ದಂಡು ಸಂತೆಕೆಲ್ಲೂರು ಬಳಿ ಕತ್ತಲಲ್ಲಿ ಮಸ್ತಕದಲ್ಲಿ ಮಿಂಚುವ ಕಿರೀಟ, ಮೈಮೇಲೆ ಆಭರಣ, ಫಣಿಯಲ್ಲಿ ಕುಂಕುಮ, ಕೈಯಲ್ಲಿ ತ್ರಿಶೂಲ ಹಿಡಿದ ಮಹಿಳೆಯನ್ನು ಕಂಡು ಸಮೀಪ ಬಂದಾಗ ಆ ಮಹಿಳೆ(ದ್ಯಾಮಿಕಾಂಬೆ) ತನ್ನ ಕೈಯಲ್ಲಿದ್ದ ಈಟಿಯಿಂದ ಚುಚ್ಚಿದಾಗ ದೇಸಾಯಿ ದಂಡು ಪುನಃ ಕಸಬಾ ಲಿಂಗಸ್ಗೂರು ಕಡೆಗೆ ಹೋಗುತ್ತದೆ. ಆಗ ಊರ ಮುಂದೆ ಅಲ್ಲಿಯೇ ನಿಂತಿದ್ದ ತಳವಾರನನ್ನು ಕಂಡು ಸಿಟ್ಟಿಗೆದ್ದ ದಂಡು ಆತನ ತಲೆಗೆ ಮತ್ತು ಎದೆಗೆ ಕತ್ತಿಯಿಂದ ಗಾಯಗೊಳಿಸುತ್ತಾರೆ. ಆಗ ರಕ್ತ ಚಿಮ್ಮುತ್ತದೆ.
ಪ್ರತಿ ದಿನದಂತೆ ಅರ್ಚಕರು ಕುಪ್ಪೀಭೀಮ ದೇವಸ್ಥಾನದ ಬಾಗಿಲು ತೆಗೆದಾಗ ವಿಗ್ರಹದ ತಲೆ ಮತ್ತು ಎದೆಯಿಂದ ರಕ್ತ ಸುರಿಯುವುದನ್ನು ಕಂಡು ಎಚ್ಚರ ತಪ್ಪಿ ಕೆಳಗೆ ಬೀಳುತ್ತಾನೆ.
ಢಿಆಗ ಆತನನ್ನು ಮನೆಗೆ ಕರೆದೊಯ್ಯಲಾಗುತ್ತದೆ. ಅಂದು ರಾತ್ರಿ ಅರ್ಚಕನ ಸ್ವಪ್ನದಲ್ಲಿ ಕುಪ್ಪೀಭೀಮ ಪ್ರತ್ಯಕ್ಷನಾಗಿ ರಾತ್ರಿ ನಡೆದ ಘಟನೆ ವಿವರಿಸಿ ವಾರಕಾಲ ಗರ್ಭಗುಡಿ ಬಾಗಿಲು ಮುಚ್ಚಿದರೆ ಎಲ್ಲವೂ ಸರಿ ಹೋಗುತ್ತದೆ ಎಂದು ಹೇಳಿದನಂತೆ.
ಭೀಮನ ಎದೆಯಲ್ಲಿ ಬಿರುಕು: ಅದರಂತೆ ಗರ್ಭಗುಡಿಯ ಬಾಗಿಲು ಮುಚ್ಚುತ್ತಾರೆ. ಆದರೆ ದೇವರ ದರ್ಶನ ಪಡೆಯುವ ತವಕದಲ್ಲಿ 6ನೇ ದಿನಕ್ಕೇ ಭಕ್ತರು ಬಾಗಿಲು ತೆರೆದಾಗ ಗಾಯ ಮಾಯವಾಗಿರುತ್ತದೆ. ಆದರೆ ಎದೆಯಲ್ಲಿ ಮಾತ್ರ ಒಂದು ಬಿರುಕು ಉಳಿದಿರುತ್ತದೆ. ಕುಪ್ಪೀಭೀಮ ಮೂರ್ತಿಯ ಎದೆಯ ಮೇಲಿನ ಆ ಬಿರುಕನ್ನು ಇಂದಿಗೂ ಕಾಣಬಹುದಾಗಿದೆ.
ಆರಂಭದಲ್ಲಿ ಕುಪ್ಪೀಭೀಮನ ಗರ್ಭಗುಡಿ ಮಾತ್ರ ನಿರ್ಮಿಸಲಾಗಿತ್ತು. ನಂತರ ಕ್ರಿ.ಶ. 1620ರಲ್ಲಿ ಕಸಬಾ ಲಿಂಗಸ್ಗೂರಿನ ಪೊಲೀಸಗೌಡರು ಭಕ್ತರಿಂದ ಕಾಣಿಕೆ ಸಂಗ್ರಹಿಸಿ ಗರ್ಭಗುಡಿಯ ಮುಂಭಾಗ, ಮಹಾದ್ವಾರ, ಗೋಪುರ ಹಾಗೂ ಸುತ್ತಲೂ ಮಂಟಪವನ್ನು ಗಾರೆಯಿಂದ ನಿರ್ಮಿಸಲಾಯಿತು. ಕ್ರಿ.ಶ. 1917ರಲ್ಲಿ ಗ್ರಾಮದ ವಿಶ್ವಕರ್ಮ ಬ್ರಾಹ್ಮಣರಾದ ಈರಪ್ಪ ಬಡಿಗೇರ ರಥದ ಕೆಳಭಾಗದ ಚೆಟ್ಟು, ಅದರ ಮೇಲಿನ ಗಡ್ಡೆ ತಯಾರಿಸಿದರು.
1920ರಲ್ಲಿ ತೇರು ನಿರ್ಮಾಣ: ನಂತರ ಅರ್ಧಕ್ಕೆ ನಿಂತ ರಥದ ಕೆಲಸ ಪುನಃ ಆರಂಭಿಸಿ ಕ್ರಿ.ಶ. 1920ರಲ್ಲಿ 25 ಅಡಿ ಎತ್ತರದ ತೇರು ನಿರ್ಮಿಸಲಾಯಿತು. ಅದೇ ವರ್ಷದಿಂದ ರಥೋತ್ಸವ ಆರಂಭಿಸಲಾಯಿತು. ಪ್ರಸ್ತುತ ಕುಪ್ಪೀಭೀಮ ದೇವಸ್ಥಾನ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದ್ದು, ತಹಸೀಲ್ದಾರರು ದೇವಸ್ಥಾನ ಸಮಿತಿ ಅಧ್ಯಕ್ಷರಾಗಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಶಾಲಿವಾಹನ ಶಕೆ 1935ನೇ ವಿಜಯನಾಮ ಸಂವತ್ಸರ ದಕ್ಷಿಣಾಯನ ಮಾರ್ಗಶಿರ ಶುದ್ಧ ಪೌರ್ಣಿಮೆಯಂದು(ಡಿ.17ರಂದು) ಮಂಗಳವಾರ ಸಂಜೆ 6.30ಕ್ಕೆ ಮಹಾ ರಥೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಲಿದೆ.