ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಕ್ಕಿ ಮುಷ್ಕರ ಶುರು

Lingaraj Badiger
Updated On : 17 Dec 2013, 11:11 am

ಕ.ಪ್ರ. ವಾರ್ತೆ, ರಾಯಚೂರು, ಡಿ.16
ರಾಜ್ಯ ಸರ್ಕಾರದ ಅಕ್ಕಿ ಲೆವಿ ನೀತಿ ವಿರೋಧಿಸಿ ನಗರ ಸೇರಿದಂತೆ ಜಿಲ್ಲಾದ್ಯಂತದ 120ಕ್ಕೂ ಹೆಚ್ಚಿನ ಅಕ್ಕಿ ಗಿರಣಿಗಳು ಸೋಮವಾರದಿಂದ ಅನಿರ್ದಿಷ್ಟಾವಧಿಗೆ ಮುಚ್ಚಿ ಮುಷ್ಕರದಲ್ಲಿ ಭಾಗಿಯಾಗುವ ಮೂಲಕ ಸರ್ಕಾರದ ನೀತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಭಾನುವಾರ ನಡೆದಿದ್ದ ಜಿಲ್ಲಾ ಅಕ್ಕಿ ಗಿರಣಿಗಳ ಮಾಲೀಕರ ಸಂಘದ ಸಭೆಯಲ್ಲಿ ಸರ್ಕಾರದ ಲೆವಿ ಅಕ್ಕಿ ನೀತಿಯು ತೀರಾ ಅವೈಜ್ಞಾನಿಕವಾಗಿದ್ದು, ಸಂಕಷ್ಟದಲ್ಲಿರುವ ಅಕ್ಕಿ ಗಿರಣಿಗಳನ್ನು ಮತ್ತಷ್ಟು ಆರ್ಥಿಕ ದುಸ್ಥಿತಿಗೆ ತಳ್ಳಲಿವೆ ಎಂದು ಆರೋಪಿಸಿ ಸೋಮವಾರದಿಂದಲೇ ಅಕ್ಕಿ ಗಿರಣಿಗಳನ್ನು ಮುಚ್ಚಲು ನಿರ್ಧರಿಸಲಾಗಿತ್ತು.
ಸಂಪೂರ್ಣ ಸ್ಥಗಿತ: ಅದರಂತೆ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಯ ಸುಮಾರು 120ಕ್ಕೂ ಹೆಚ್ಚಿನ ಅಕ್ಕಿ ಗಿರಣಿಗಳಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಯಾವುದೇ ರೀತಿಯ ಉತ್ಪಾದನಾ ಚಟುವಟಿಕೆಗಳು ನಡೆಯಲಿಲ್ಲ. ಎಲ್ಲೆಡೆ ಅಕ್ಕಿ ಗಿರಣಿಗಳು ಹಾಗೂ ಅಕ್ಕಿ ಹೋಲ್‌ಸೇಲ್ ಮಾರಾಟ ಮಳಿಗೆಗಳು ಮುಚ್ಚಿದ್ದು ಕಂಡುಬಂದಿತು.
ಹಾಗೆಯೇ ಅಕ್ಕಿ ಗಿರಣಿಗಳ ಎದುರು ಸರ್ಕಾರದ ಲೆವಿ ಅಕ್ಕಿ ನೀತಿ ಖಂಡಿಸಿ ಅನಿರ್ದಿಷ್ಟಾವಧಿ ಹೋರಾಟ ಜಾರಿಯಲ್ಲಿದೆ ಎಂಬ ಬ್ಯಾನರ್ ಅಳವಡಿಸಿದ್ದು ಕಂಡು ಬಂದಿತು. ಜಿಲ್ಲೆಯಲ್ಲಿ ಬತ್ತವನ್ನೇ ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಸೋಮವಾರದಿಂದ ಆರಂಭಗೊಂಡ ಅಕ್ಕಿ ಗಿರಣಿಗಳ ಮುಷ್ಕರದಿಂದಾಗಿ ವ್ಯವಸ್ಥೆಯಲ್ಲಿ ಭಾರೀ ಏರುಪೇರಾಗುವ ಸಂಭವವಿದೆ.
ಅಸ್ತವ್ಯಸ್ತ: ಜಿಲ್ಲೆಯ 120ಕ್ಕೂ ಹೆಚ್ಚಿನ ಅಕ್ಕಿ ಗಿರಣಿಗಳಲ್ಲಿ ಸೋಮವಾರದಿಂದ ಅಕ್ಕಿಯ ಉತ್ಪಾದನೆ ಸ್ಥಗಿತಗೊಂಡಿರುವುದರಿಂದ ಉದ್ಯಮಕ್ಕೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳೂ ಬಹುತೇಕ ಸ್ಥಗಿತಗೊಂಡಿವೆ.
ಈಗಾಗಲೇ ಅಕ್ಕಿ ಗಿರಣಿಗಳ ಮಾಲೀಕರ ಸಂಘದ ಅಧ್ಯಕ್ಷ ಪಾಪಾರೆಡ್ಡಿ ಅವರು ಲಾರಿಗಳ ಮಾಲೀಕರು, ಅಕ್ಕಿ ಸಗಟು ವ್ಯಾಪಾರಸ್ಥರೊಂದಿಗೆ ಮುಷ್ಕರಕ್ಕೆ ಬೆಂಬಲಿಸುವಂತೆ ಮನವಿ ಮಾಡಿದ್ದು, ಅದರಂತೆಯೇ ಲಾರಿಗಳ ಮಾಲೀಕರು, ವರ್ತಕರ ಬೆಂಬಲ ಕಂಡುಬಂದಿದೆ. ಹಾಗಾಗಿ ನಗರ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಅಕ್ಕಿ ಉತ್ಪಾದನೆ ಮತ್ತು ಮಾರಾಟದ ವಹಿವಾಟು ಸ್ಥಗಿತಗೊಂಡಿದ್ದರಿಂದ ಅಕ್ಕಿಯ ಸಾಗಣೆಯೂ ನಿಂತಿದ್ದು ಕಂಡುಬಂದಿತು.
ಕಾರ್ಮಿಕರಲ್ಲಿ ಆತಂಕ: ಜಿಲ್ಲೆಯ 120ಕ್ಕೂ ಹೆಚ್ಚಿನ ಅಕ್ಕಿ ಗಿರಣಿಗಳಲ್ಲಿ ಸುಮಾರು 5 ಸಾವಿರ ಕೂಲಿ ಕಾರ್ಮಿಕರು, ಹಾಗೂ ಲಾರಿಗಳ ಚಾಲಕರು, ಕ್ಲೀನರ್‌ಗಳೂ ಸೇರಿದಂತೆ ಒಟ್ಟು 10 ಸಾವಿರ ಕಾರ್ಮಿಕರಿಗೆ ಅಕ್ಕಿ ಗಿರಣಿಗಳ ಮಾಲೀಕರ ಸದ್ಯದ ಮುಷ್ಕರದಿಂದಾಗಿ ಕೆಲಸವಿಲ್ಲವಾಗಿದ್ದು, ಮುಷ್ಕರ ಮುಂದುವರಿದರೆ ಮುಂದೇನು ಎಂಬಂಥ ಆತಂಕ ಎದುರಾಗಿದೆ.
ಖಂಡನೆ: ರಾಜ್ಯ ಸರ್ಕಾರ ಪ್ರಸಕ್ತ ವರ್ಷ ಲೆವಿ ಅಕ್ಕಿ ಪ್ರಮಾಣವನ್ನು ದಿಢೀರ್ ಹೆಚ್ಚಿಸಿದ್ದು ಅವೈಜ್ಞಾನಿಕವಾಗಿದೆ. ಲೆವಿ ಅಕ್ಕಿಗೆ ಸರ್ಕಾರ ನಿಗದಿ ಮಾಡಿದ ದರವೂ ತೀರಾ ಕಡಿಮೆಯಾಗಿದೆ. ಅದರಿಂದ ಗಿರಣಿಗಳು ಆರ್ಥಿಕ ಸಂಕಷ್ಟದಲ್ಲಿ ಸಿಲುಕಲಿವೆ ಎಂದು ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಪಾಪಾರೆಡ್ಡಿ 'ಕನ್ನಡಪ್ರಭ'ಕ್ಕೆ ದೂರಿದ್ದಾರೆ.
ದಿನವೂ ಪ್ರತಿಯೊಂದು ಅಕ್ಕಿ ಗಿರಣಿಯಲ್ಲಿ ಸುಮಾರು 10 ಲಕ್ಷ ವಹಿವಾಟು ನಡೆಯುತ್ತಿದ್ದು, ಸೋಮವಾರದಿಂದ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ. ಅಕ್ಕಿ ಉತ್ಪಾದನೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಗಿರಣಿ ಮಾಲೀಕರ ಮುಷ್ಕರ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಅಷ್ಟೇ ಅಲ್ಲ ಮಾರುಕಟ್ಟೆಯಲ್ಲಿನ ಅಕ್ಕಿ ದಾಸ್ತಾನು ಕುಸಿತ ಕಾಣುವುದರಿಂದ ಅಕ್ಕಿಯ ದರ ತೀವ್ರ ಏರಿಕೆ ಕಾಣುವ ಎಲ್ಲ ಲಕ್ಷಣಗಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement