ಅಕ್ರಮ ವಾಸ: ನಿವಾಸಿಗಳ ತೆರವಿಗೆ ದಸಂಸ ಒತ್ತಾಯ
ದೇವದುರ್ಗ: ತಾಲೂಕಿನ ವೀರಗೋಟದ ಹತ್ತಿರ ಪುನಾವಸತಿ ಗ್ರಾಮದ ಮನೆಗಳಲ್ಲಿ ಅಕ್ರಮವಾಗಿ ವಾಸವಾಗಿದ್ದವರನ್ನು ಕೂಡಲೇ ತೆರವುಗೊಳಿಸಲು ಕರ್ನಾಟಕ ದಲಿತ ಸಂಘರ್ಷ (ಭೀಮವಾದ) ಸಮಿತಿ ಮುಖಂಡ ಮೇಲಪ್ಪ ಬಾವಿಮನಿ ಒತ್ತಾಯಿಸಿದ್ದಾರೆ.
ಅವರು ಸಹಾಯಕ ಆಯುಕ್ತರಿಗೆ ಈ ಬಗ್ಗೆ ಮನವಿ ಸಲ್ಲಿಸಿ, ತಾಲೂಕಿನ ಚಿಂಚೋಡಿ ಗ್ರಾಪಂ ವ್ಯಾಪ್ತಿಯ ವೀರಗೋಟ ಗ್ರಾಮದ ಬಳಿ ಸರ್ಕಾರದಿಂದ ಪ್ರವಾಹಪೀಡಿತರಿಗೆ ಪುನಾವಸತಿ ಯೋಜನೆ ಅಡಿಯ 103 ಮನೆ ನಿರ್ಮಿಸಲಾಗಿದೆ. ಇದರಲ್ಲಿ 85 ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಬಾಕಿ 18 ಮನೆಗಳಲ್ಲಿ ಅಕ್ರಮ, ದೌರ್ಜನ್ಯ ನಡೆಸಿ ಕೆಲವರು ವಾಸಿಸುತ್ತಿದ್ದಾರೆಂದು ಆರೋಪಿಸಿದರು.
ವಸತಿ ಪ್ರದೇಶದ 150 ಅಡಿ ಪ್ರದೇಶದಲ್ಲಿ ಅಂಬಿಗರ ಚೌಡಯ್ಯನವರ ಭಾವಚಿತ್ರ ಅಳವಡಿಸಿ ಸರ್ಕಾರದ ಜಾಗೆ ಕಬಳಿಸಲು ಮತ್ತು ವ್ಯಾಪಾರ ಮಾಡಲು ಅಂಗಡಿಗಳನ್ನು ಸ್ಥಾಪಿಸಲಾಗಿದೆ. ಈ ಕುರಿತು ಈಗಾಗಲೇ ಹೋರಾಟದ ವೇಳೆ ತಾಲೂಕು ಮಟ್ಟದ ಅಧಿಕಾರಿಗಳು ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದು, ನಂತರ ನಿರ್ಲಕ್ಷ್ಯ ತಾಳಿದ್ದಾರೆಂದು ದೂರಿದ್ದಾರೆ. ವಾರದೊಳಗೆ ಸಂಘಟನೆಯ ಈ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಹೋರಾಟ ನಡೆಸುವುದಾಗಿ ದಲಿತ ಸಂಘರ್ಷ ಸಮಿತಿಯ ಸಾಬಣ್ಣ ಕಮಲದಿನ್ನಿ, ರಾಜಪ್ಪ ಗಬ್ಬೂರು, ಮಾನಪ್ಪ ಚಿಂಚೋಡಿ, ರಾಜಪ್ಪ ಬಾಗೂರು ಒತ್ತಾಯಿಸಿದ್ದಾರೆ.
ನಿಖಾ: ಅಲ್ಪಸಂಖ್ಯಾತರಿಗೆ ಸೂಚನೆ
ರಾಯಚೂರು: ಗುಲ್ಬರ್ಗ ವಿಭಾಗದ 6 ಜಿಲ್ಲೆಗಳಲ್ಲಿ ಜಾರಿಯಲ್ಲಿದ್ದ ಖಾಜಿ ಅಧಿನಿಯಮದಂತೆ ಮುಸ್ಲಿಂ ಭಾಂಧವರು ತಮ್ಮ ಮಕ್ಕಳ ಮದುವೆ ಸಮಾರಂಭಗಳನ್ನು ಆಯಾ ಓಣಿಯಲ್ಲಿ ವಕ್ಫ್ ಆಸ್ತಿಯಲ್ಲಿ ನೋಂದಣಿಯಾದ ಮಸೀದ್ ಕಮಿಟಿಯವರಲ್ಲಿ ನಿಖಾವನ್ನು ನೇರವೇರಿಸಿಕೊಳ್ಳಬೇಕೆಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಮಹ್ಮದ್ ಅನ್ವರ್ ಖಾನ್ ತಿಳಿಸಿದ್ದಾರೆ. ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದು, ಜಿಲ್ಲೆಯ ಮುಸ್ಲಿಂ ಭಾಂಧವರು ತಮ್ಮ ಮಕ್ಕಳ ಮದುವೆ ಕಾರ್ಯಗಳನ್ನು ನೋಂದಾಯಿತ ಮಸೀದ್ ಕಮಿಟಿಯವರನ್ನು ಸಂಪರ್ಕಿಸಿ ನಿಖಾವನ್ನು ನೇರವೇರಿಸಿಕೊಂಡು ನಂತರ ನೋಂದಣಿಯಾದ ಸಿಯಾನಾಮದ ಪ್ರತಿಯನ್ನು ಜಿಲ್ಲಾ ವಕ್ಫ್ ಬೋರ್ಡ್ ಕಚೇರಿಗೆ ಸಲ್ಲಿಸಲು ಕೋರಿದ್ದಾರೆ.