ನಕಲಿ ಇ-ಸ್ಟ್ಯಾಂಪ್; ಸಮಗ್ರ ತನಿಖೆಗೆ ಹರಳಯ್ಯ ಆಗ್ರಹ
ಕ.ಪ್ರ. ವಾರ್ತೆ, ರಾಯಚೂರು, ಡಿ.16
ಮಾನವಿ ತಾಲೂಕಿನ ಸಿರವಾರ ಪಟ್ಟಣದಲ್ಲಿ ಪತ್ತೆಯಾಗಿರುವ ನಕಲಿ ಇ-ಸ್ಟ್ಯಾಂಪ್ ಹಗರಣದ ಸಮಗ್ರ ತನಿಖೆಗೊಳಪಡಿಸುವಂತೆ ದಲಿತ ಮುಖಂಡ ಹರಳಯ್ಯ ಯದ್ದಲದಿನ್ನಿ ಒತ್ತಾಯಿಸಿದ್ದಾರೆ.
ಅವರು ನಗರದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿರವಾರದಲ್ಲಿ ವಿದ್ಯುತ್ ಕಾಮಗಾರಿಗಳ ಗುತ್ತಿಗೆದಾರ ಶಹಬುದ್ದೀನ್ ಎಂಬಾತ 200 ಮುಖಬೆಲೆಯ ನಕಲಿ ಇ-ಸ್ಟ್ಯಾಂಪ್ಗಳನ್ನು ತಯಾರಿಸಿ ಜೆಸ್ಕಾಂ ಇಲಾಖೆಯಿಂದ ಗ್ರಾಹಕರಿಗೆ ವಿದ್ಯುತ್ ಸಂಪರ್ಕ ಒದಗಿಸಲು ಕಾರಣನಾಗಿದ್ದು, ಆತನ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.
ಇದುವರೆಗೆ 155 ಇಂಥ ನಕಲಿ ಇ-ಸ್ಟ್ಯಾಂಪ್ಗಳು ಸಂಘಟನೆಗೆ ಲಭ್ಯವಾಗಿದ್ದು, ಜಿಲ್ಲೆಯ ರಾಯಚೂರು, ಲಿಂಗಸ್ಗೂರು, ಸಿಂಧನೂರು, ದೇವದುರ್ಗ ಮತ್ತು ಮಾನವಿಗಳಲ್ಲಿಯೂ ಈ ಅಕ್ರಮ ಹರಡಿರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ತನಿಖೆಯನ್ನು ಚುರುಕುಗೊಳಿಸುವಂತೆ ಆಗ್ರಹಿಸಿದರು.
ಮಾನವಿ ತಾಲೂಕಿನಲ್ಲಿ ಸಿರವಾರ ಪಟ್ಟಣದಲ್ಲಿ ಮೊದಲ ಬಾರಿಗೆ ಜೆಸ್ಕಾಂನಲ್ಲಿ ನಕಲಿ ಇ-ಸ್ಟ್ಯಾಂಪ್ಗಳು ಪತ್ತೆಯಾಗಿದ್ದು, ಅವುಗಳನ್ನು ಸ್ವತಃ ಶಹಬುದ್ದೀನ್ ತಯಾರಿಸಿ ಬಳಕೆ ಮಾಡಿದ್ದಾನೆ. ಆ ಮೂಲಕ ಸರ್ಕಾರಕ್ಕೆ ವಂಚಿಸಿದ್ದು, ನಕಲಿ ಇ-ಸ್ಟ್ಯಾಂಪ್ನ ಮೇಲೆ ಸಿರವಾರದ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ವ್ಯವಸ್ಥಾಪಕರ ಖೊಟ್ಟಿ ಸಹಿ ಹಾಕಿರುವುದು ಪತ್ತೆಯಾಗಿದೆ ಎಂದು ಆರೋಪಿಸಿದರು.
ಮಾನವಿ ತಾಲೂಕು ಸೇರಿದಂತೆ ಇನ್ನಿತರೆ ತಾಲೂಕುಗಳ ವಿವಿಧ ಇಲಾಖೆಗಳಲ್ಲೂ ಈ ಅಕ್ರಮ ಹರಡಿರುವ ಸಾಧ್ಯತೆಯಿದ್ದು, ಈಗಾಗಲೇ ಸಿರವಾರದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ. ಕೂಡಲೇ ಈ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಆಸಕ್ತಿವಹಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಅಕ್ರಮದ ಆರೋಪಿ ಶಹಬುದ್ದೀನ್ ಸಂಘಟನೆಯ ಸದಸ್ಯರೂ ಸೇರಿದಂತೆ ತಮ್ಮ ವಿರುದ್ಧ ಆರೋಪ ಎಸಗಿದ ಎಲ್ಲರಿಗೆ ಬೆದರಿಕೆಯೊಡ್ಡುತ್ತಿದ್ದು, ಸಂಬಂಧಿಸಿದ ಇಲಾಖೆ ಈ ಬಗ್ಗೆ ಗಮನಹರಿಸಬೇಕಿದೆ. ಪ್ರಕರಣ ದಾಖಲಾದ ನಂತರ ತಲೆ ಮರೆಸಿಕೊಂಡಿರುವ ಆರೋಪಿ ಶಹಬುದ್ದೀನ್ ನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುವಂತೆ ಮನವಿ ಮಾಡಿದರು.
ಪ್ರಮುಖರಾದ ಮಲ್ಲು ಕಾಂಬ್ಳೆ, ಬಸವರಾಜ ಅತ್ತನೂರು, ದುರ್ಗಣ್ಣ ಮರಾಠಾ ಸೇರಿ ಅನೇಕರಿದ್ದರು.