ಬಿಎಸ್ಸೆನ್ನೆಲ್ ಗುತ್ತಿಗೆ ಕಾರ್ಮಿಕರ ಧರಣಿ
ಕ.ಪ್ರ. ವಾರ್ತೆ, ರಾಯಚೂರು, ಡಿ.16
ಜಿಲ್ಲೆಯಲ್ಲಿ ಬಿಎಸ್ಸೆನ್ನೆಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರನ್ನು ಕಾನೂನು ಬಾಹಿರವಾಗಿ ಕೆಲಸದಿಂದ ವಜಾಗೊಳಿಸಿದ್ದನ್ನು ಖಂಡಿಸಿ ಹಾಗೂ ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ ಸೋಮವಾರದಿಂದ ರಾಜ್ಯ ಬಿಎಸ್ಸೆನ್ನೆಲ್ ಕ್ಯಾಶುವಲ್ ಮತ್ತು ಗುತ್ತಿಗೆ ಕಾರ್ಮಿಕರ ಯೂನಿಯನ್‌ನಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗಿದೆ.
ನಗರದ ಬಿಎಸ್ಸೆನ್ನೆಲ್ ಕಚೇರಿ ಎದುರು ಧರಣಿ ನಡೆಸುತ್ತಿರುವ ಕಾರ್ಮಿಕರು ಇಲಾಖೆಯ ಕೇಂದ್ರ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿ, ಸಂಸ್ಥೆಯಲ್ಲಿ ಕ್ಯಾಶುವಲ್ ಮತ್ತು ಗುತ್ತಿಗೆ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದ 8 ಜನ ಗುತ್ತಿಗೆ ಕಾರ್ಮಿಕರನ್ನು ವಿನಾ ಕಾರಣ ವಜಾ ಮಾಡಲಾಗಿದೆ ಎಂದು ಆರೋಪಿಸಿದರು.
ಕಳೆದ 15 ವರ್ಷಗಳಿಂದ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವರನ್ನು ಕೆಲಸದಿಂದ ವಜಾಗೊಳಿಸಿರುವುದು ಸಮಂಜಸವಲ್ಲ. ಈಗಾಗಲೇ ನಷ್ಟದಲ್ಲಿರುವ ಸಂಸ್ಥೆಯನ್ನು ಅಧಿಕಾರಿ ವರ್ಗದವರು ಅನಗತ್ಯ ಗೊಂದಲ ಸೃಷ್ಟಿಸುವ ಮೂಲಕ ಮತ್ತಷ್ಟು ನಷ್ಟಕ್ಕೆ ಸಿಲುಕಿಸುವ ಕಾರ್ಯ ಮಾಡುತ್ತಿದ್ದಾರೆಂದು ದೂರಿದರು.
ಕಾರ್ಮಿಕರ ತಿಂಗಳ ವೇತನ ಮತ್ತು ತುಟ್ಟಿ ಭತ್ಯೆಯನ್ನು ಹೆಚ್ಚಿಸಬೇಕು. 1-10-2000ರಿಂದ 31-12-2004ರವರೆಗೆ ಸುಮಾರು 49,92,939 ರು. ಭವಿಷ್ಯ ನಿಧಿ ಬಾಕಿಯಿರಿಸಿಕೊಂಡಿದ್ದು ಕೂಡಲೇ ಪಾವತಿಸುವಂತೆ ಒತ್ತಾಯಿಸಿದ ಹೋರಾಟಗಾರರು, ಗುತ್ತಿಗೆ ಕಾರ್ಮಿಕರ ಕಾಯಿದೆ ಪ್ರಕಾರ ಕಾರ್ಮಿಕರಿಗೆ ವೇತನ ಚೀಟಿ, ಇಎಸ್ ಐ ಪ್ರಮಾಣ ಪತ್ರ, ಹಾಗೂ ಗುರುಚಿನ ಚೀಟಿ ಕಡ್ಡಾಯವಾಗಿ ವಿತರಿಸಬೇಕು ಎಂದು ಆಗ್ರಹಿಸಿದರು.
ಕಾರ್ಮಿಕ ಸಂಘಟನೆ ಚಟುವಟಿಕೆಗೆ ವಿರೋಧಿಸುತ್ತಿರುವ ಹಾಗೂ ಕಾರ್ಮಿಕರ ವಿರೋಧಿ ನೀತಿ ಅನುಸರಿಸುತ್ತಿರುವ ಎಜಿಎಂ ಪ್ರಹ್ಲಾದಾಚಾರ, ಡಿಜಿಎಂ ಬಸವರಾಜ ಅವರನ್ನು ಅಮಾನತುಗೊಳಿಸಬೇಕು. ಪ್ರತಿ ತಿಂಗಳು 7ನೇ ತಾರೀಕಿನೊಳಗೆ ವೇತನ ಪಾವತಿಸಬೇಕು ಎಂದು ಒತ್ತಾಯಿಸಿದರು.
8 ಗಂಟೆಗಳಿಗಿಂತ ಹೆಚ್ಚು ಸಮಯ ಕಾರ್ಮಿಕರನ್ನು ಸೇವೆಗೆ ನಿಯೋಜಿಸಬಾರದು. ಕನಿಷ್ಠ ವೇತನವನ್ನು 10 ಸಾವಿರಗೆ ನಿಗದಿ ಮಾಡಬೇಕು. ಎಲ್ಲ ಗುತ್ತಿಗೆ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಬೇಕೆಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಹೋರಾಟಗಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅನಿರ್ದಿಷ್ಟಾವಧಿ ಧರಣಿಯ ನೇತೃತ್ವವನ್ನು ಗುತ್ತಿಗೆ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಶೇಕ್ಷಾ ಖಾದ್ರಿ, ಅಧ್ಯಕ್ಷ ವಿಠ್ಠಲ್, ಪ್ರದೀಪ್, ವೆಂಕಟೇಶ್, ಮಲ್ಲೇಶ್, ಭಾಸ್ಕರ್, ಸಿಐಟಿಯು ತಾಲೂಕು ಕಾರ್ಯದರ್ಶಿ ಡಿ.ಎಸ್. ಶರಣಬಸವ, ರಾಮಯ್ಯ, ನಾಗೇಶ್ ಇದ್ದರು.