ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಂಘಟನೆಗಳಿಂದ ಕರಾಳ ದಿನಾಚರಣೆ

Lingaraj Badiger
Updated On : 17 Dec 2013, 11:15 am

ಕ.ಪ್ರ. ವಾರ್ತೆ, ರಾಯಚೂರು, ಡಿ.16
ಎಐಡಿಎಸ್‌ಒ, ಎಐಡಿವೈಒ ಮತ್ತು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯಿಂದ ದೆಹಲಿಯ 'ನಿರ್ಭಯಾ' ಅತ್ಯಾಚಾರ ಪ್ರಕರಣ ಮತ್ತು ಆಕೆಯ ಸಾವಿನ ದಿನವನ್ನು ಕರಾಳ ದಿನಾಚರಣೆಯಾಗಿ ನಗರದಲ್ಲಿ ಸೋಮವಾರ ಆಚರಿಸಲಾಯಿತು.
ನಗರದ ತಹಸೀಲ್ದಾರ್ ಕಚೇರಿ ಎದುರು ಜಮಾಯಿಸಿದ ಸಂಘಟನೆಗಳ ಕಾರ್ಯಕರ್ತರು, ಅನ್ಯಾಯದ ವಿರುದ್ಧ ಘೋಷಣೆ ಕೂಗಿ, ಅದಮ್ಯ ಆಕಾಂಕ್ಷೆಗಳನ್ನು ಹೊಂದಿದ್ದ ನಿರ್ಭಯಾಳ ಮೇಲೆ ಅತ್ಯಾಚಾರ ಎಸಗಿದವರಿಗೆ ಶಿಕ್ಷೆಯಾಗುವುದನ್ನು ನೋಡಲು ಬಯಸಿದ್ದ ವಿದ್ಯಾರ್ಥಿನಿಯು ಇಂದಿನ ವಿದ್ಯಾರ್ಥಿ- ಯುವ ಜನರು ಮತ್ತು ಮಹಿಳೆಯರು ಅನ್ಯಾಯದ ವಿರುದ್ಧ ಸಿಡಿದೇಳುವಂತೆ ಪ್ರೇರೇಪಿಸಿದ್ದಾರೆ ಎಂದು ಹೇಳಿದರು.
ದುಷ್ಕೃತ್ಯಕ್ಕೆ ಅಂತರ್ಜಾಲದ ದುರ್ಬಳಕೆ ಕಾರಣ: ಇಂದಿನ ದಿನಮಾನದಲ್ಲಿ ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ, ದೌರ್ಜನ್ಯಗಳಿಗೆ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಅಶ್ಲೀಲ ಜಾಹೀರಾತು, ಮೊಬೈಲ್, ಅಂತರಜಾಲದ ದುರ್ಬಳಕೆಯೇ ಕಾರಣವಾಗಿದೆ. ಇಂಥ ಮಾಧ್ಯಮಗಳ ಮೂಲಕ ಹರಿಬಿಡಲಾಗುತ್ತಿರುವ ಹಿಂಸೆ, ಅಶ್ಲೀಲ ಮಾಹಿತಿಗಳು ಹೆಣ್ಣು ಮಕ್ಕಳ ಬದುಕಿಗೆ ಅಭದ್ರತೆ ತಂದಿವೆ ಎಂದು ಟೀಕಿಸಿದರು.
ಅಶ್ಲೀಲತೆಯನ್ನು ನಿಷೇಧಿಸಬೇಕು. ನ್ಯಾ. ವರ್ಮಾ ಸಮಿತಿಯ ವರದಿ ಶಿಫಾರಸುಗಳನ್ನು ಜಾರಿಗೆ ತರಬೇಕು. ಮಹಿಳೆಯರ ಮೇಲೆ ಅತ್ಯಾಚಾರ ತಡೆಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಕರಾಳ ದಿನವಾಗಿ ಡಿ. 16ರಂದು ಆಚರಿಸುವ ಮೂಲಕ ಮುಂದಿನ ದಿನಗಳಲ್ಲಿ ಇಂಥ ಸಮಸ್ಯೆಗಳ ವಿರುದ್ಧ ಎಲ್ಲರೂ ದನಿ ಎತ್ತುವಂತಾಗಬೇಕೆಂದು ಮನವಿ ಮಾಡಿದರು.
ಹೋರಾಟದಲ್ಲಿ ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಚನ್ನಬಸವ ಜಾನೇಕಲ್, ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಮಹೇಶ್ ಚೀಕ ಲಪರ್ವಿ, ಎಐಎಂಎಸ್‌ಎಸ್‌ನ ಜಿಲ್ಲಾಧ್ಯಕ್ಷೆ ಚೇಚನಾ ಬನಾರೆ, ಕಾರ್ಯದರ್ಶಿ ಸರೋಜಾ, ಜಿಲ್ಲಾ ಉಪಾಧ್ಯಕ್ಷೆ ಮಂಜುಳಾ ಸೇರಿದಂತೆ ವಿವಿಧ ಸಂಘಟನೆಗಳ ಅನೇಕರು ಪಾಲ್ಗೊಂಡು ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ತಡೆ ನಿಟ್ಟಿನಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement