ಪೊಲೀಸರು ತಮ್ಮ ಸ್ವಾಸ್ಥ್ಯ ಕಾಪಾಡಿಕೊಳ್ಳಲಿ
ಕ.ಪ್ರ. ವಾರ್ತೆ, ರಾಯಚೂರು, ಡಿ.17
ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಕಾರ್ಯದಲ್ಲಿರುವ ಪೊಲೀಸರು ತಮ್ಮ ಸ್ವಾಸ್ಥ್ಯ ಕಾಪಾಡಿಕೊಳ್ಳುವತ್ತ ಗಮನ ಹರಿಸದಿರುವುದು ಕಳವಳಕಾರಿ ಸಂಗತಿ ಎಂದು ಈಶಾನ್ಯ ವಲಯ ಪೊಲೀಸ್ ಮಹಾನಿರೀಕ್ಷಕ ಮಹಮದ್ ವಜೀರ್ ಅಹಮದ್ ಆತಂಕ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಈಶಾನ್ಯ ವಲಯ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿ ಅನಾರೋಗ್ಯದಿಂದ ಬಳಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಆರೋಗ್ಯ ರಕ್ಷಣೆ ಗುರಿಯಾಗಿರಲಿ: ಗುಲ್ಬರ್ಗದಲ್ಲಿ ಆರು ಜನ ಮತ್ತು ರಾಯಚೂರಿನಲ್ಲಿ ಅಪಘಾತದಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿರುವುದು ಪೊಲೀಸರ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಮಟ್ಟವನ್ನು ಬಹಿರಂಗಗೊಳಿಸಿದೆ. ವ್ಯಕ್ತಿಗೆ ಯಾವಾಗಲೂ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ ಗುರಿಯಾಗಬೇಕಿದೆ ಎಂದು ಸಲಹೆ ನೀಡಿದರು.
ಪೊಲೀಸ್ ಸಿಬ್ಬಂದಿಯು ತಮ್ಮ ಸೇವೆಯೆಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದು, ಆರೋಗ್ಯದೆಡೆಗೆ ನಿಷ್ಕಾಳಜಿ ಪ್ರದರ್ಶಿಸುತ್ತಿದ್ದಾರೆ. ಪೊಲೀಸರು ಕರ್ತವ್ಯದ ಜತೆಜತೆಗೆ ಆರೋಗ್ಯಕರ ಬದುಕು ರೂಪಿಸಿಕೊಳ್ಳುವತ್ತಲೂ ಆಸಕ್ತಿವಹಿಸಬೇಕು ಎಂದ ಅವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರೀಡೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದು ಪೊಲೀಸರಷ್ಟೇ ಅಲ್ಲದೇ ಅವರ ಕುಟುಂಬದವರಿಗೂ ಸ್ಪರ್ಧೆ ಆಯೋಜಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ವ್ಯಾಯಾಮ, ಯೋಗಕ್ಕೆ ಮೊರೆ ಹೋಗಿ: ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಮಾತನಾಡಿ, ಪೊಲೀಸರು ಸಮರ್ಪಕ ಕರ್ತವ್ಯ ನಿರ್ವಹಣೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯ ಹೆಚ್ಚಿನ ಮಾನಸಿಕ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪೊಲೀಸರು ವ್ಯಾಯಾಮ, ಯೋಗದ ಮೂಲಕ ಮಾನಸಿಕ ಒತ್ತಡಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದರು.
ಬಹುಮಾನ: ಕಳೆದ ಮೂರು ದಿನಗಳಿಂದ ನಡೆದ ವಾರ್ಷಿಕ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಈ ವೇಳೆ ಬಹುಮಾನ ವಿತರಿಸಲಾಯಿತು. ಈ ವೇಳೆ ಎಸ್ಪಿ ಎಂ.ಎನ್. ನಾಗರಾಜ್, ಎಎಸ್ಪಿ ಅಶೋಕ ಸದಲಗಿ, ಡಿವೈಎಸ್ಪಿ ಡಾ. ದಿವ್ಯಾ ಗೋಪಿನಾಥ, ಸಹಾಯಕ ಆಯುಕ್ತೆ ಮಂಜುಶ್ರೀ ಸೇರಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಮತ್ತು ಅವರ ಕುಟುಂಬದ ಸದಸ್ಯರಿದ್ದರು.