ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಹಿಳೆಯರಲ್ಲಿ ಜಾಗೃತಿಗೆ ಸಂಘದ ಪಾತ್ರ ಮಹತ್ವದ್ದು

Lingaraj Badiger
Updated On : 18 Dec 2013, 11:06 am

ಕ.ಪ್ರ. ವಾರ್ತೆ, ರಾಯಚೂರು, ಡಿ.17
ಸಮಾಜದಲ್ಲಿ ಮಹಿಳೆಯರ ಮೇಲಾಗುತ್ತಿರುವ ನಾನಾ ರೀತಿಯ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಬಾಲಿಕಾ ಸಂಘದ ಕಾರ್ಯಕರ್ತರು ಪ್ರಮುಖ ಪಾತ್ರ ವಹಿಸಬಹುದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸಂಘದ ಕಾರ್ಯಚಟುವಟಿಕೆ ಚುರುಕುಗೊಳಿಸಬೇಕೆಂದು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಕರೆ ನೀಡಿದರು.
ಅವರು ನಗರದಲ್ಲಿ ಮಂಗಳವಾರ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಯುನಿಸೆಫ್ ಮತ್ತಿತರೆ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಬಾಲ್ಯ ವಿವಾಹದ ವಿರುದ್ಧ ಬಾಲಿಕಾ ಸಂಘದ ಬಾಲಕಿಯರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಹಿಳೆಯರ ಮೇಲೆ ಇಂದಿನ ದಿನಮಾನದಲ್ಲಿ ಅತ್ಯಾಚಾರ, ದೌರ್ಜನ್ಯದಂಥ ಪ್ರಕರಣಗಳು ಹೆಚ್ಚಿದ್ದು, ಅವುಗಳನ್ನು ತಡೆಯಲು ಜಾಗೃತಿಯ ಅವಶ್ಯಕತೆಯಿದೆ. ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಾಲಿಕಾ ಸಂಘ ಸಮರ್ಪಕವಾಗಿ ಕಾರ್ಯ ಮಾಡಬಹುದಾಗಿದೆ. ಇಂಥ ಸಂಘಗಳ ರಚನೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಾಗಬೇಕೆಂದರು.
ಹೋರಾಟಕ್ಕೆ ಶಕ್ತಿ: ಗ್ರಾಮೀಣ ಭಾಗದಲ್ಲಿ ಮೂಢನಂಬಿಕೆಗಳು ಹೆಚ್ಚಾಗಿ ಆಚರಣೆಯಲ್ಲಿರುತ್ತವೆ. ಅನಕ್ಷರತೆ, ಬಡತನದಿಂದಾಗಿ ಬಾಲ್ಯ ವಿವಾಹ, ವರದಕ್ಷಿಣೆ ಕಿರುಕುಳದಂಥ ಸಮಸ್ಯೆಗಳೂ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಅವುಗಳನ್ನು ತಡೆಯುವ ಕಾರ್ಯ ಬಾಲ್ಯ ವಿವಾಹ ವಿರುದ್ಧದ ಬಾಲಿಕಾ ಸಂಘದ ಸದಸ್ಯರು ಮಾಡಬಹುದು ಎಂದು ಸಲಹೆ ನೀಡಿದರು.
ಗ್ರಾಮೀಣ ಭಾಗದಲ್ಲಿನ ಅನಕ್ಷರತೆ ನಿವಾರಣೆ, ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿ ನಿವಾರಣೆಗೆ ಜಾಗೃತಿ ಮೂಡಿಸುವುದು ಅವಶ್ಯಕ. ಈ ನಿಟ್ಟಿನಲ್ಲಿ ಸಂಘಗಳು ಈಗಾಗಲೇ ಕಾರ್ಯಪ್ರವೃತ್ತವಾಗಿದ್ದು, ಮಹಿಳೆಯರಿಗೆ ಅನ್ಯಾಯದ ವಿರುದ್ಧ ಹೋರಾಡುವ ಶಕ್ತಿಯನ್ನು ಬಾಲಿಕಾ ಸಂಘಗಳು ತುಂಬುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದೌರ್ಜನ್ಯ ಮುಕ್ತಿಗೆ ನೆರವು: ಸಮಾಜದಲ್ಲಿ ಮಹಿಳೆಯರು ಕಳೆದ ಅನೇಕ ದಶಕಗಳಿಂದ ಒಂದಿಲ್ಲೊಂದು ರೀತಿಯಲ್ಲಿ ದೌರ್ಜನ್ಯಕ್ಕೆ ಗುರಿಯಾಗುತ್ತಿದ್ದು, ಇದರಿಂದ ಮಹಿಳೆಯರಿಗೆ ಅಭದ್ರತೆ ಕಾಡುತ್ತಿದೆ. ಲಿಂಗಬೇಧ ವ್ಯವಸ್ಥೆ ಮೊದಲಿನಿಂದ ಜಾರಿಯಲ್ಲಿರುವುದು ಸಮಾಜದಲ್ಲಿ ಪುರುಷ ಮತ್ತು ಮಹಿಳೆಯರ ಮಧ್ಯೆ ಅಸಮಾನತೆಗೆ ದಾರಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದಲ್ಲಿ ಎಲ್ಲರಿಗೂ ಶಿಕ್ಷಣ ದೊರೆಯುವಂತಾಗಬೇಕು. ಅದರಲ್ಲೂ ಹಳ್ಳಿಗಾಡಿನಲ್ಲಿ ಬಾಲಕಿಯರು ಕಲಿಕೆಗೆ ಆಸಕ್ತಿ ತೋರುವ ಮೂಲಕ ಶಿಕ್ಷಣ ಪಡೆದು, ದೌರ್ಜನ್ಯದಿಂದ ಮುಕ್ತಿ ಹೊಂದುವತ್ತ ಬಾಲಿಕಾ ಸಂಘಗಳು ನೆರವಾಗಬೇಕೆಂದು ಅವರು ಕರೆ ನೀಡಿದರು.
ಕೈಪಿಡಿ ಬಿಡುಗಡೆ: ಸಮಾರಂಭದಲ್ಲಿ ಬಾಲಿಕಾ ಸಂಘದ ಕಾರ್ಯಚಟುವಟಿಕೆ ಕುರಿತ ಮಾಹಿತಿ ಕೈಪಿಡಿ ಬಿಡುಗಡೆಗೊಳಿಸಲಾಯಿತು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ವೀಣಾ ಪಲ್ಲಕಿ, ಕೃಷಿ ವಿವಿ ಉಪನ್ಯಾಸಕಿ ಡಾ. ಜಾಗೃತಿ ದೇಶಮಾನೆ, ಯುನಿಸೆಫ್ನ ಮಕ್ಕಳ ಹಕ್ಕು ಸಂರಕ್ಷಣೆ ಯೋಜನೆಯ ಸಂಯೋಜನಾಧಿಕಾರಿ ರಾಘವೇಂದ್ರ ಭಟ್, ಅಜಿತ್ ಕುಮಾರ, ಬಾಲಿಕಾ ಸಂಘದ ಸದಸ್ಯೆಯರಾದ ಅನುರಾಧಾ, ಬಸವಲಿಂಗಮ್ಮ ಗಲಗ, ರಂಜಿತಾ ಮತ್ತಿತರರು ವೇದಿಕೆಯಲ್ಲಿದ್ದರು.
ಜಿಲ್ಲೆಯ ವಿವಿಧೆಡೆಯಿಂದ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಬಾಲಿಕಾ ಸಂಘದ ಸದಸ್ಯರು ಆಗಮಿಸಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement