ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಾಹಿತ್ಯ ಸಮ್ಮೇಳನ; ಪ್ರತ್ಯೇಕ ಗೋಷ್ಠಿಗೆ ಅಂಡಗಿ ಒತ್ತಾಯ

Lingaraj Badiger
Updated On : 18 Dec 2013, 11:10 am

ರಾಯಚೂರು: ಮಡಿಕೇರಿಯಲ್ಲಿ ಜ.7ರಿಂದ ನಡೆಯಲಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂಗವಿಕಲರ ಸಮಸ್ಯೆಗಳ ಕುರಿತು ಪ್ರತ್ಯೇಕ ಗೋಷ್ಠಿ ಏರ್ಪಡಿಸುವಂತೆ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಇಲ್ಲಿಯವರೆಗೂ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಅಂಗವಿಕಲರ ಸಮಸ್ಯೆಗಳ ಕುರಿತು ಸಾಹಿತ್ಯ ಸಮ್ಮೇಳನದಲ್ಲಿ ಪ್ರತ್ಯೇಕ ಗೋಷ್ಠಿ ಆಯೋಜಿಸಿದ ಯಾವುದೇ ಉದಾಹರಣೆಯಿಲ್ಲ.ಈ ವಿಚಾರದ ಕುರಿತು ಗಂಗಾವತಿಯಲ್ಲಿ ಜರುಗಿದ 78ನೇ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಗೋಷ್ಠಿ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ ಪ್ರಯೋಜನವಾಗಲಿಲ್ಲ. ಬಿಜಾಪುರದಲ್ಲಿಯೂ ಗೋಷ್ಠಿ ನಡೆಯಲಿಲ್ಲ ಎಂದು ಟೀಕಿಸಿದ್ದಾರೆ.
ಅಂಗವಿಕಲರ ಬಗ್ಗೆ ಅನುಕಂಪ ತೋರುವ ಬದಲು ಅವರಿಗೆ ಹೆಚ್ಚು ಅವಕಾಶ ಒದಗಿಸಿಕೊಡಬೇಕಿದೆ. ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಸಾಧನೆ ಮಾಡಿದ ಅನೇಕರಿದ್ದು, ಅಂಗವಿಕಲರಲ್ಲಿನ ವೈಕಲ್ಯತೆಯ ಬಗ್ಗೆ ಗಮನಹರಿಸದೇ ಅವರಲ್ಲಿನ ಸಾಮರ್ಥ್ಯ ಗುರುತಿಸಲು ಸಮ್ಮೇಳನಗಳು ಸೂಕ್ತ ವೇದಿಕೆ ಒದಗಿಸಲಿವೆ ಎಂದು ಹೇಳಿದ್ದಾರೆ.
ಅಂಗವಿಕಲರ ಸಮಸ್ಯೆಗಳ ಕುರಿತು ಸಮರ್ಪಕ ಚರ್ಚೆ ಅಗತ್ಯವಿದೆ. ಸಾಮಾನ್ಯ ಜನರಿಗೆ ಅಂಗವಿಕಲರಲ್ಲಿರುವ ಸಮಸ್ಯೆ, ಪ್ರತಿಭೆಗಳ ಅರಿವು ಮೂಡಿಸಲು ಅವರ ಕುರಿತು ಕೃತಿ ಹೊರತರಬೇಕು. ಇಂತಹ ಕೃತಿಗಳನ್ನು ಸರ್ಕಾರವು ಪ್ರೋತ್ಸಾಹಿಸಬೇಕು. ಜತೆಗೆ ಜಿಲ್ಲೆಯ ಸಾಹಿತ್ಯಾಸಕ್ತರು ಮತ್ತು ಕಸಾಪ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಈ ವಿಚಾರದ ಕಡೆಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯ ಸಮ್ಮೇಳನ: ಡಿ.28ರಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸರ್ಕಾರಿ ಅಂಗವಿಕಲ ನೌಕರರ ಸಂಘದ ವತಿಯಿಂದ ರಾಜ್ಯ ಮಟ್ಟದ ಸರ್ಕಾರಿ ಅಂಗವಿಕಲ ನೌಕರರ ಸಮ್ಮೇಳನ ಮತ್ತು ಬೆಳ್ಳಿ ಹಬ್ಬದ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆಂದು ತಿಳಿಸಿದ್ದಾರೆ.
ಸಮ್ಮೇಳನದಲ್ಲಿ ಭಾಗವಹಿಸುವ ನೌಕರರಿಗೆ ಡಿ.27 ಮತ್ತು 28ರಂದು ಅನ್ಯ ಕಾರ್ಯ ನಿಮಿತ್ತ ರಜೆ(ಒಒಡಿ) ಸೌಲಭ್ಯ ಕಲ್ಪಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ಅಂಗವಿಕಲ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement